ಪತ್ರಕರ್ತನಿಗೆ ಐಜಿಪಿ ಬೆದರಿಕೆ
ಪ್ರಶ್ನೆ ಕೇಳಿದ್ದೇ ಅಪರಾಧ !

ಹೊಸದಿಲ್ಲಿ, ನ.15: ಶಿಕ್ಷಣ ತಜ್ಞೆ ನಂದಿನಿ ಸುಂದರ್ ಅವರು ಬಸ್ತರ್ ನ ಆದಿವಾಸಿ ವ್ಯಕ್ತಿಯೊಬ್ಬನ ಕೊಲೆಯಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಬಗ್ಗೆ ಹಿಂದುಸ್ತಾನ್ ಟೈಮ್ಸ್ ಇದರ ರಾಯಪುರ ಮೂಲದ ಪತ್ರಕರ್ತರೊಬ್ಬರು ವಿವರಣೆ ಕೇಳಿದ್ದೇ ತಡ ಅವರಿಗೆ ಛತ್ತೀಸಗಢದ ವಿವಾದಿತ ಐಜಿಪಿ ಎಸ್.ಆರ್.ಪಿ.ಕಲ್ಲೂರಿ ಬೆದರಿಕೆ ಹಾಕಿದ ಘಟನೆ ನಡೆದಿದೆ.
‘‘ನೀವೆಲ್ಲಾ ಹೀಗೆ ಮಾಡಿದರೆ, ನಾವು ನಿಮಗೆ ಭೇಟಿಯಾಗಲು ಬಿಡುವುದಿಲ್ಲ. ನೀವು ಬಸ್ತರ್ ಗೆ ಭೇಟಿ ನೀಡಿದ್ದು ನನ್ನ ಅನುಮತಿಯಿಂದ’’ ಎಂದು ಕೋಪೋದ್ರಿಕ್ತ ಕಲ್ಲೂರಿ ಪತ್ರಕರ್ತ ರಿತೇಶ್ ಮಿಶ್ರಾರಿಗೆ ಹೇಳಿದ್ದಾರೆ.
ಸಾಮನಾಥ್ ಬಘೇಲ್ ಎಂಬ ಆದಿವಾಸಿ ವ್ಯಕ್ತಿಯ ಕೊಲೆ ಸಂಬಂಧ ಹತ್ತು ಮಂದಿ ಇತರರೊಂದಿಗೆ ಪ್ರಕರಣವೆದುರಿಸುತ್ತಿರುವ ನಂದಿನಿ ಸುಂದರ್ ವಿರುದ್ಧ ತಮಗೆ ಯಾವುದೇ ದ್ವೇಷವಿಲ್ಲ ಎಂದು ಬಸ್ತರ್ ನ ನಮ ಗ್ರಾಮಸ್ಥರು ಹೇಳಿದ ಹಿನ್ನೆಲೆಯಲ್ಲಿ ಮಿಶ್ರಾ ಅವರು ಕಲ್ಲೂರಿಯವರ ಪ್ರತಿಕ್ರಿಯೆ ಕೇಳಿದ್ದರು.
ಪ್ರಕರಣ ಎದುರಿಸುತ್ತಿರುವವರ ವಿರುದ್ಧ ಪೊಲೀಸರ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿವೆಯೆಂದು ಕಲ್ಲೂರಿ ಪತ್ರಕರ್ತನಿಗೆ ಹೇಳಿದ್ದರಲ್ಲದೆ ‘‘ನೀವು ನಿಮ್ಮ ಮನಸ್ಸಿಗೆ ತೋಚಿದಂತೆ ಬರೆಯಿರಿ. ನಮಗೇನೂ ಇಲ್ಲ. ನಿಮಗೆ ಬಸ್ತರ್ ಒಂದು ತಮಾಷೆಯಿದ್ದಂತೆ’’ ಎಂದು ಕಿಡಿ ಕಾರಿದ್ದರು.
ಪತ್ರಕರ್ತ ಮಿಶ್ರಾ ತಾವು ನಮ ಗ್ರಾಮಕ್ಕೆ ಭೇಟಿ ನೀಡುತ್ತಿರುವುದರ ಬಗ್ಗೆ ಕಲ್ಲೂರಿಯವರಿಗೆ ಮಾಹಿತಿ ನೀಡಿದ್ದರು. ಮಿಶ್ರಾ ಜತೆ ಮಾತನಾಡಿದ್ದ ಗ್ರಾಮಸ್ಥರು ತಾವು ಬಘೇಲ್ ಕೊಲೆಗಾರರನ್ನು ನೋಡಿಲ್ಲ ಹಾಗೂ ತಮಗೆ ನಂದಿನಿ ಸುಂದರ್ ಮೇಲೆ ಯಾವ ಕೋಪವೂ ಇಲ್ಲವೆಂದು ಹೇಳಿದ್ದರು. ಸುಂದರ್ ಅವರು ಛತ್ತೀಸಗಢದಲ್ಲಿ ನಡೆಯುತ್ತಿರುವ ಪೊಲೀಸ್ ದೌರ್ಜನ್ಯದ ವಿರುದ್ಧ ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದರು. ಮಾವೋವಾದಿಗಳ ತಂಡದ ಭಾಗವಾಗಿ ನಂದಿನಿ ಸುಂದರ್ ಆ ಪ್ರದೇಶಕ್ಕೆ ಬಂದಿದ್ದರೆಂದೂ ಅವರು ತಮ್ಮನ್ನು ಹಕ್ಕು ಕಾರ್ಯಕರ್ತೆ ಎಂದು ಪರಿಚಯಿಸಿದ್ದರೆಂದೂ ಪೊಲೀಸರು ಹೇಳಿದ್ದನ್ನು ಗ್ರಾಮಸ್ಥರು ಮಿಶ್ರಾ ಜತೆ ಮಾತನಾಡುವಾಗ ಅಲ್ಲಗಳೆದಿದ್ದರು.
ಬಸ್ತರ್ ನಲ್ಲಿ ಪತ್ರಕರ್ತರು ಬೆದರಿಕೆಗೊಳಗಾಗುವುದು ಸಾಮಾನ್ಯವಾಗಿದ್ದು ಕಳೆದ ವರ್ಷದಿಂದೀಚೆಗೆ ಇಲ್ಲಿ ನಾಲ್ಕು ಮಂದಿ ಪತ್ರಕರ್ತರು ಬಂಧಿತರಾಗಿದ್ದರೆ ಬಿಬಿಸಿ ವರದಿಗಾರರೊಬ್ಬರನ್ನು ಜಿಲ್ಲೆಯಿಂದ ಹೊರಹೋಗುವಂತೆ ಹೇಳಲಾಗಿತ್ತು. ಇನ್ನೊಬ್ಬರ ಮೇಲೆ ಮಾವೋವಾದಿಗಳೊಂದಿಗೆ ನಂಟು ಹೊಂದಿದ್ದಾರೆಂಬ ಆರೋಪ ಬಂದಾಗ ಅವರು ಅಲ್ಲಿಂದ ಓಡಿ ಹೋಗುವಂತಾಗಿತ್ತು.





