ನ.19ರಂದು ದ.ಕ.ಜಿಲ್ಲಾ ಕಾಂಗ್ರೆಸ್ ಭವನ ಉದ್ಘಾಟನೆ
ಇಂದಿರಾಗಾಂಧಿ ಜನ್ಮಶತಾಬ್ಧಿಗೆ ಚಾಲನೆ

ಮಂಗಳೂರು, ನ.15: ನಗರದ ಕದ್ರಿಯಲ್ಲಿ ನಿರ್ಮಿಸಲಾದ ದ.ಕ.ಜಿಲ್ಲಾ ಕಾಂಗ್ರೆಸ್ ಭವನವನನ್ನು ನ.19ರಂದು ಪೂ.11ಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗು ರಾಜ್ಯ ಉಸ್ತುವಾರಿ ದ್ವಿಗ್ವಿಜಯ್ ಸಿಂಗ್ ಉದ್ಘಾಟಿಸಲಿದ್ದಾರೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಸಚಿವ ರಮಾನಾಥ ರೈ ಹೇಳಿದರು.
ಮಂಗಳವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಇಂದಿರಾಗಾಂಧಿಯ ಯೋಜನೆಗಳಿಂದ ಜಿಲ್ಲೆಯ ಅನೇಕ ಮಂದಿ ಪ್ರಯೋಜನ ಪಡೆದಿದ್ದಾರೆ. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭವನಕ್ಕೆ ‘ ಇಂದಿರಾಗಾಂಧಿ ಜನ್ಮಶತಾಬ್ಧಿ ಭವನ’ ಎಂದು ನಾಮಕರಣ ಮಾಡಲಾಗಿದೆ ಎಂದು ಹೇಳಿದರು.
ಅಂದು ಅಪರಾಹ್ನ 2 ಗಂಟೆಗೆ ನಗರದ ನೆಹರೂ ಮೈದಾನದಲ್ಲಿ ನಡೆಯುವ ‘ಇಂದಿರಾ ಗಾಂಧಿ ಜನ್ಮಶತಾಬ್ಧಿ ಕಾರ್ಯಕ್ರಮ’ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಅಲ್ಲದೆ, ಮಂಗಳೂರು ಮಹಾನಗರ ಪಾಲಿಕೆ ನಿರ್ಮಿಸಿದ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಪ್ರತಿಮೆಯನ್ನು ಕೂಡ ಅನಾವರಣ ಮಾಡಲಾಗುವುದು ಎಂದು ರೈ ನುಡಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗು ಸಚಿವ ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗು ಮಾಜಿ ಸಚಿವ ದಿನೇಶ್ ಗುಂಡೂರಾವ್, ಲೋಕಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಸಂಸದ ಎಂ. ವೀರಪ್ಪ ಮೊಯ್ಲಿ ಮತ್ತಿತರ ನಾಯಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ರೈ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿಸೋಜ, ಶಾಸಕ ಜೆ.ಆರ್.ಲೋಬೋ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಮೇಯರ್ ಹರಿನಾಥ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.
ಉಳ್ಳಾಲ-ಕೊಣಾಜೆ ಸುತ್ತಮುತ್ತ ಕಳೆದೊಂದು ವಾರದಿಂದ ನಡೆಯುವ ಅಹಿತಕರ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ರೈ, ‘ಇದು ಹಿಂದು ಮತ್ತು ಮುಸ್ಲಿಂ ಸಮುದಾಯ ಮತೀಯ ಶಕ್ತಿಗಳ ಕೃತ್ಯವಾಗಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದೇ ಈ ಶಕ್ತಿಗಳ ಉದ್ದೇಶವಾಗಿದೆ. ಈ ಶಕ್ತಿಗಳನ್ನು ಹದ್ದುಬಸ್ತಿನಲ್ಲಿಡುವ ಬಗ್ಗೆ ಪೊಲೀಸ್ ಇಲಾಖೆಯ ಜೊತೆ ಚರ್ಚಿಸಲಾಗಿದೆ’ ಎಂದರು.







