ಕಿಸಾನ್ ಸಂಘರ್ಷ ಜಾಥಾ ಮಂಗಳೂರು ಪ್ರವೇಶ

ಮಂಗಳೂರು, ನ.15: ಜಾಗತೀಕರಣ ನೀತಿಯನ್ನು ಕೈ ಬಿಡಬೇಕು, ರೈತರ ಬೆಳೆಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿಪಡಿಸಬೇಕು ಇತ್ಯಾದಿ ಬೇಡಿಕೆಯನ್ನಿಟ್ಟು ದೇಶಾದ್ಯಂತ ನಡೆಯುವ ನಾಲ್ಕು ಅಖಿಲ ಭಾರತ ರೈತ ಜಾಥಾದ ಪೈಕಿ ಕನ್ಯಾಕುಮಾರಿಯಿಂದ ನ.9ರಂದು ಹೊರಟ ‘ಕಿಸಾನ್ ಸಂಘರ್ಷ ಜಾಥಾ’ ಮಂಗಳವಾರ ದ.ಕ.ಜಿಲ್ಲೆ ಪ್ರವೇಶಿಸಿದೆ.
ಸೆ.144ರ ನಿಷೇಧಾಜ್ಞೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ಸಭೆಯನ್ನು ಕೈಬಿಟ್ಟ ಸಂಘಟಕರು ನಗರದ ಎನ್‌ಜಿಒ ಹಾಲ್‌ನಲ್ಲಿ ಸಮಾವೇಶ ನಡೆಸಿದರು.
ಈ ಸಂದರ್ಭ ಮಾತನಾಡಿದ ರೈತ ಸಂಘದ ನಾಯಕ ಓಮಲ್ಲೂರು ಶಂಕರನ್ ಕೇಂದ್ರ ಸರಕಾರದ ಜನವಿರೋಧಿ ನೀತಿಯ ವಿರುದ್ಧ ನಡೆಯುವ ಈ ಜಾಥಾಕ್ಕೆ ಅಭೂತಪೂರ್ವ ಬೆಂಬಲ ಲಭ್ಯವಾಗುತ್ತಿದೆ. ಮೋದಿ ನೇತೃತ್ವದ ಕೇಂದ್ರ ಸರಕಾರ ರೈತರ ಭೂಮಿಯನ್ನು ಸ್ವಾಧೀನಪಡಿಸುತ್ತಿದೆ. ಇದರಿಂದ ಕೋಟ್ಯಂತರ ರೈತರು ಹತಾಶರಾಗಿದ್ದಾರೆ. ವಸತಿಯಿಲ್ಲದೆ ಬಡ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಈ ಅನ್ಯಾಯದ ವಿರುದ್ಧ ಹೋರಾಟ ನಡೆಸುವ ಅಗತ್ಯವಿದೆ ಎಂದು ಹೇಳಿದರು.
ಸಿಪಿಎಂ ಮುಖಂಡ ಕೆ.ಆರ್.ಶ್ರೀಯಾನ್ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ಕಿಸಾನ್ ಸಭಾದ ಜಂಟಿ ಕಾರ್ಯದರ್ಶಿ, ಜಾಥಾದ ನಾಯಕ ಪಿ. ಕೃಷ್ಣ ಪ್ರಸಾದ್, ಅಖಿಲ ಭಾರತ ಉಪಾಧ್ಯಕ್ಷ ಡಾ. ಅಶೋಕ್ ದಾವ್ಲೆ, ರೈತ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಮುಖ್ಯಭಾಷಣ ಮಾಡಿದರು.
ಮಾಜಿ ಶಾಸಕ ಕುಂಞಾಂಬು, ನ್ಯಾಯವಾದಿ ಎಸ್.ಕೆ.ಪ್ರೀಜಾ, ವಸಂತ ಆಚಾರಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಾದವ ಶೆಟ್ಟಿ ಸ್ವಾಗತಿಸಿದರು. ವಾಸುದೇವ ಉಚ್ಚಿಲ್ ಕಾರ್ಯಕ್ರಮ ನಿರೂಪಿಸಿದರು.







