ಸರ್ಜಿಕಲ್ ದಾಳಿಯೋ ಅಥವಾ ಕಾರ್ಪೆಟ್ ಬಾಂಬಿಂಗೋ...... ಜನಸಾಮಾನ್ಯರಿಗೆ ತೊಂದರೆಯಾಗಿರುವುದಂತೂ ಹೌದು: ಸುಪ್ರೀಂ
ನೋಟು ನಿಷೇಧ ಪ್ರಶ್ನಿಸಿದ್ದ ಅರ್ಜಿ ವಜಾ
.jpg)
ಹೊಸದಿಲ್ಲಿ,ನ.15: 500 ಮತ್ತು 1,000 ರೂ.ನೋಟುಗಳ ದಿಢೀರ್ ನಿಷೇಧದ ಆರು ದಿನಗಳ ಬಳಿಕವೂ ಹತಾಶ ಜನರು ಹಣಕ್ಕಾಗಿ ಬ್ಯಾಂಕುಗಳು ಮತ್ತು ಎಟಿಎಂಗಳಿಗೆ ಎಡತಾಕುತ್ತಿರುವ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವಿಂದು ‘‘ನೀವು ಬೇಕಾದರೆ ನೋಟು ನಿಷೇಧ ಕ್ರಮವನ್ನು ಸರ್ಜಿಕಲ್ ಸ್ಟ್ರೈಕ್ ಅಥವಾ ಕಾರ್ಪೆಟ್ ಬಾಂಬಿಂಗ್ (ಸಾರ್ವತ್ರಿಕ ಬಾಂಬ್ ದಾಳಿ) ಎಂದು ಕರೆದುಕೊಳ್ಳಿ, ಆದರೆ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿರುವುದಂತೂ ಹೌದು ’’ಎಂದು ಕೇಂದ್ರ ಸರಕಾರಕ್ಕೆ ತಿವಿಯಿತು. ಸರಕಾರದ ನೋಟು ನಿಷೇಧ ನಿರ್ಧಾರವನ್ನು ಅಮಾನತುಗೊಳಿಸುವಂತೆ ಕೋರಿಕೊಂಡಿದ್ದ ಅರ್ಜಿಗಳ ಗೊಂಚಲನ್ನು ಅದು ತಿರಸ್ಕರಿಸಿತಾದರೂ, ಇದೇ ವೇಳೆ ಜನರು ಅನುಭವಿಸುತ್ತಿರುವ ನಗದು ಹಣದ ಕೊರತೆಯನ್ನು ನೀಗಿಸಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ತನಗೆ ವರದಿಯನ್ನು ಸಲ್ಲಿಸುವಂತೆ ಕೇಂದ್ರಕ್ಕೆ ನಿರ್ದೇಶ ನೀಡಿತು.
ಕಪ್ಪುಹಣದ ವಿರುದ್ಧ ಸರ್ಜಿಕಲ್ ದಾಳಿಯ ವೇಳೆ ಕೆಲ ಪ್ರಮಾಣದ ಸಮಾನಾಂತರ ಹಾನಿಗಳಂತೂ ಆಗುತ್ತವೆ ಎಂಬ ಕೇಂದ್ರ ಸರಕಾರದ ವಾದವನ್ನು ಒಪ್ಪಿಕೊಂಡ ನ್ಯಾಯಾಲಯವು, ಆದರೆ ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗಕೂಡದು ಎಂದು ಸ್ಪಷ್ಟಪಡಿಸಿತು.
ಬ್ಯಾಂಕುಗಳಿಂದ ಹಿಂಪಡೆಯುವ ಹಣದ ಮಿತಿಯನ್ನು ಸರಕಾರವು ಹೆಚ್ಚಿಸಬೇಕು ಎಂದು ಸಲಹೆ ನೀಡಿದ ಮುಖ್ಯ ನ್ಯಾಯಾಧೀಶ ಟಿ.ಎಸ್.ಠಾಕೂರ್ ಅವರು, ಈ ನಿರ್ಬಂಧದಿಂದ ಜನಸಾಮಾನ್ಯರಿಗೆ ಅನಾನುಕೂಲವಾಗಿದೆ ಎನ್ನುವುದು ಸಾರ್ವಜನಿಕ ಅಭಿಪ್ರಾಯವಾಗಿದೆ ಎಂದು ಹೇಳಿದರು.







