ವಿಜ್ಞಾನ ಬಲಿಷ್ಠಗೊಂಡಷ್ಟು ಮೂಢನಂಬಿಕೆ ದೂರ: ಸಚಿವ ರೈ
ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟನೆ

ಮಂಗಳೂರು, ನ.15: ವಿಜ್ಞಾನವು ಮನುಷ್ಯನ ಬದುಕಿನ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗುತ್ತದೆ ಮತ್ತು ಪ್ರಗತಿಯತ್ತ ಸೆಳೆದೊಯ್ಯುತ್ತವೆ. ಅಲ್ಲದೆ ವಿಜ್ಞಾನ ಬಲಿಷ್ಠಗೊಂಡಷ್ಟು ಮೂಢನಂಬಿಕೆ ನಮ್ಮಿಂದ ದೂರವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.
ನವದೆಹಲಿಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಬೆಂಗಳೂರಿನ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ದ.ಕ ಜಿಲ್ಲಾಡಳಿತ, ದ.ಕ.ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ಯ ಸಂಯುಕ್ತ ಆಶ್ರಯದಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಇನ್‌ಸ್ಪಾಯರ್ ಅವಾರ್ಡ್ ವಿಜೇತ ವಿದ್ಯಾರ್ಥಿಗಳ ರಾಜ್ಯಮಟ್ಟದ ‘ವಿಜ್ಞಾನ ವಸ್ತುಪ್ರದರ್ಶನ 2016’ನ್ನು ಮಂಗಳವಾರ ನಗರದ ಅತ್ತಾವರ ಸರೋಜಿನಿ ಮಧುಸೂದನ ಕುಶೆ ಶಾಲೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ ಜೆ.ಆರ್. ಲೋಬೊ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಶಂಕರ ಭಟ್, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸ್ಟಾನ್ಲಿ ತಾವ್ರೊ, ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ, ಪದನಿಮಿತ್ತ ಸಹನಿರ್ದೇಶಕ ಎಸ್. ನಾಗೇಂದ್ರ ಮಧ್ಯಸ್ಥ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವಾಲ್ಟರ್ ಎಚ್. ಡಿಮೆಲ್ಲೊ, ಸರೋಜಿನಿ ಮಧುಸೂದನ ಕುಶೆ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ.ಕೆ. ಉಪಾಧ್ಯಾಯ ಉಪಸ್ಥಿತರಿದ್ದರು.
ಡಯಟ್ ಉಪನಿರ್ದೇಶಕ ಸಿಪ್ರಿಯನ್ ಮೊಂತೇರೊ ಸ್ವಾಗತಿಸಿದರು. ಮಂಜುಳಾಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







