ನೋಟು ಬದಲಾವಣೆ ದಿಟ್ಟ ಕ್ರಮ: ಕೃಷ್ಣ ಜೆ.ಪಾಲೇಮಾರ್

ಮಂಗಳೂರು,ನ.15:ನಕಲಿ ನೋಟಿನ ಹಾವಳಿ ತಪ್ಪಿಸಲು 1,000 ಹಾಗೂ 500 ರೂ. ನೋಟುಗಳನ್ನು ಬದಲಾವಣೆ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡ ದಿಟ್ಟ ಕ್ರಮವಾಗಿದೆ ಎಂದು ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಪ್ರಧಾನಿಯವರ ಆರ್ಥಿಕ ಸುಧಾರಣೆಯ ಕ್ರಮದಿಂದ ಹಂತಹಂತವಾಗಿ ರೂಪಾಯಿಯ ವೌಲ್ಯ ವೃದ್ಧಿಯಾಗಿ ದೇಶದ ಆರ್ಥಿಕ ವ್ಯವಹಾರ ಚುರುಕುಗೊಳ್ಳಲಿದೆ. ಕಪ್ಪು ಹಣ ನಗದು ರೂಪದಲ್ಲಿ ಮಾತ್ರವಲ್ಲ, ವಿವಿಧ ಕ್ಷೇತ್ರಗಳಾದ ಚಿನ್ನಾಭರಣ, ಭೂಮಿ ಖರೀದಿ, ವಿದೇಶಿ ಕರೆನ್ಸಿ ಹೀಗೆ ಬೇನಾಮಿ ಆಸ್ತಿಗಳ ಮೂಲಕ ಹೂಡಿಕೆ ಮಾಡಲಾಗಿದೆ. ಇದನ್ನು ಕೂಡ ಮುಟ್ಟು ಗೋಲು ಹಾಕುವ ಕ್ರಮ ಕೈ ಗೊಳ್ಳಬೇಕು. ಪ್ರಧಾನಿಯವರ ಕ್ರಮವನ್ನು ರಾಷ್ಟ್ರಪತಿಯವರು ಕೂಡ ಶ್ಲಾಘಿಸಿರುವುದನ್ನು ಗಮನಿಸಿದಾಗ ಭವಿಷ್ಯದಲ್ಲಿ ಭಾರತ ಬಲಿಷ್ಠವಾಗಿ ರೂಪುಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ಪಾಲೆಮಾರ್ ತಿಳಿಸಿದರು.
ಕಮೀಷನ್ ದಂಧೆಗೆ ಬಲಿ ಬೀಳಬೇಡಿ
ಹಳೆ ನೋಟುಗಳನ್ನು ನೀಡಿ ಹೊಸ ನೋಟು ಪಡೆಯುವ ಕುರಿತು ಸಾರ್ವಜನಿಕರಲ್ಲಿ ಗಾಳಿ ಸುದ್ದಿಗಳನ್ನು ಹರಡಿಸಲಾಗುತ್ತಿದೆ. ಕಮೀಷನ್ ಆಧಾರದಲ್ಲಿ ಈ ರೀತಿಯ ವ್ಯವಹಾರಗಳು ನಡೆಯುತ್ತಿದೆ ಎನ್ನುವ ವದಂತಿಗಳಿವೆ. ಇಂತಹ ಯಾವೂದೇ ವ್ಯವಹಾರ ಹಾಗೂ ಆಮಿಷಕ್ಕೆ ನಾಗರಿಕರು ಬಲಿಯಾಗದೆ ಬಡವರ ಉದ್ದಾರ, ಕಪ್ಪು ಹಣದ ನಿಗ್ರಹ, ಉಗ್ರಗಾಮಿಗಳ ನಿಗ್ರಹಕ್ಕೆ ಕೇಂದ್ರ ಸರಕಾರದೊಂದಿಗೆ ಕೈ ಜೋಡಿಸಬೇಕು. ದೇಶದ ಹಿತದೃಷ್ಟಿಯಿಂದ ಸಹಕರಿಸಬೇಕೆಂದು ಜೆ.ಕೃಷ್ಣ ಪಾಲೆಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ಡಾ.ವೈ.ಭರತ್ ಶೆಟ್ಟಿ, ರಾಜೇಶ್ ಕೊಟ್ಟಾರಿ, ಅಶೋಕ್ ಉರ್ವಸ್ಟೋರ್, ಶೋಭೇಂದ್ರ ಮೊದಲಾದವರು ಉಪಸ್ಥಿತರಿದ್ದರು.







