ಉಡುಪಿ: ಕೊರಗರ ಅಹೋರಾತ್ರಿ ಧರಣಿ ಮೂರನೇ ದಿನಕ್ಕೆ

ಉಡುಪಿ, ನ.15: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕೊರಗರ ಸಮಿತಿಯು ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾ ಗ್ರಹವು ಎರಡನೆ ದಿನವನ್ನು ಪೂರ್ಣಗೊಳಿಸಿ ಮೂರನೇ ದಿನ ಪ್ರವೇಶಿಸಿದೆ.
ನಿನ್ನೆ ಬೆಳಗ್ಗೆಯಿಂದ ತಮ್ಮ ಮಕ್ಕಳಮರಿಗಳ ಸಮೇತ ಕುಟುಂಬದೊಂದಿಗೆ ಧರಣಿ ನಡೆಸುತ್ತಿರುವ ಕೊರಗ ಸಮುದಾಯದವರು, ಅಲ್ಲೇ ರಾತ್ರಿ ಹಾಗೂ ಮಧ್ಯಾಹ್ನದ ಊಟ ಹಾಗೂ ಬೆಳಗ್ಗೆ ಉಪಹಾರ ತಯಾರಿಸಿ ಸೇವಿಸಿ ಧರಣಿ ನಡೆಸುತ್ತಿದ್ದಾರೆ. ಅದೇ ರೀತಿ ಇಂದು ಕೂಡ ಹೋರಾಟವನ್ನು ಮುಂದುವರೆಸಿ ರುವ ಕೊರಗರು ಬೇಡಿಕೆ ಈಡೇರುವವರೆಗೆ ಧರಣಿ ನಡೆಸುವುದಾಗಿ ಸಮಿತಿಯ ಅಧ್ಯಕ್ಷ ಬೊಗ್ರ ಕೊರಗ ತಿಳಿಸಿದರು.
ಮಧ್ಯಾಹ್ನ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಅನುರಾಧ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಹರೀಶ್ ಗಾಂವ್ಕರ್, ವ್ಯವಸ್ಥಾಪಕ ವಿಶ್ವನಾಥ್, ಕೊರಗ ಸಮುದಾಯದ ರೋಗಿಗಳಿಗೆ ಚಿಕಿತ್ಸೆ ನೀಡಿ ರುವ ಖಾಸಗಿ ಆಸ್ಪತ್ರೆಗಳ ಬಾಕಿ ಮೊತ್ತ ಒಂದು ಕೋಟಿ ರೂ. ಮಂಜೂರು ಮಾಡಿರುವ ಸಹಿ ಮಾಡಿದ ಪತ್ರವನ್ನು ಬೋಗ್ರ ಕೊರಗರಿಗೆ ಹಸ್ತಾಂತರಿಸಿದರು. ಆದರೆ ಕೊರಗರ ಬೇಡಿಕೆಯನ್ನು ಈಡೇರಿಸದ ಹಿನ್ನೆಲೆಯಲ್ಲಿ ಧರಣಿಯನ್ನು ಮುಂದುವರೆಸಲಾಯಿತು. ಧರಣಿಯನ್ನುದ್ದೇಶಿಸಿ ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ, ಜಮಾಅತೆ ಇಸ್ಲಾಮಿ ಹಿಂದ್‌ನ ಮುಹಮ್ಮದ್ ಮರಕಡ ಮಾತನಾಡಿದರು.
ಈ ಸಂದರ್ಭದಲ್ಲಿ ಸಮಿತಿಯ ಮಾಜಿ ಅಧ್ಯಕ್ಷೆ ಸುಶೀಲಾ ನಾಡ, ಮುಖಂಡ ರಾದ ಕುಮಾರ್‌ದಾಸ್ ಹಾಲಾಡಿ, ಅಮ್ಮಣ್ಣಿ ಚೋರಾಡಿ, ಪುತ್ರ ಹೆಬ್ರಿ, ನೀಲು ಹೊಸಂಗಡಿ ಮತ್ತಿತ್ತರರು ಉಪಸ್ಥಿತರಿದ್ದರು.







