ಬೈಕ್ ಕಳವು ಪ್ರಕರಣ: ಇಬ್ಬರ ಬಂಧನ

ಕಾಸರಗೋಡು, ನ.15: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬದಿಯಡ್ಕ ಪಳ್ಳತ್ತಡ್ಕ ಕೋರಿಕ್ಕಾರ್‌ನ ಮುಹಮ್ಮದ್ ಮನ್ಸೂರ್ (19), ಬನ್ಪುತಡ್ಕದ ದೀಪಕ್ (19) ಎಂದು ಗುರುತಿಸಲಾಗಿದೆ. ಕುದಿಂಗಳದ ಅಹ್ಮದ್ ಜಾಬಿರ್ ಎಂಬವರ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇವರನ್ನು ಬಂಧಿಸಲಾಗಿದೆ.
ರವಿವಾರ ರಾತ್ರಿ ಕುಂಬ್ಡಾಜೆ ಪೊಡಿಪಳ್ಳದಲ್ಲಿ ಹಗ್ಗ ಜಗ್ಗಾಟ ನೋಡಲು ಜಾಬಿರ್ ತನ್ನ ಹೊಸ ಬೈಕ್ ನಲ್ಲಿ ತೆರಳಿದ್ದರು. ಆಟ ಮುಗಿದ ಬಳಿಕ ಬಂದಾಗ ಬೈಕ್ ನಾಪತ್ತೆಯಾಗಿತ್ತು. ಈ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ನಡುವೆ ಬೈಕ್ ಪಳ್ಳತ್ತಡ್ಕ ಬಳಿ ತೊರೆದು ಹೋದ ಸ್ಥಿತಿಯಲ್ಲಿ ಬೈಕ್ ಪತ್ತೆಯಾಗಿತ್ತು. ಪೆಟ್ರೋಲ್ ಖಾಲಿಯಾದುದರಿಂದ ಬೈಕನ್ನು ತೊರೆದು ಪರಾರಿಯಾಗಿದ್ದಾಗಿ ತನಿಖೆಯಿಂದ ತಿಳಿದುಬಂದಿದೆ.
ಮುಹಮ್ಮದ್ ಮನ್ಸೂರ್‌ನನ್ನು ಮೂರು ತಿಂಗಳ ಹಿಂದೆ ಅಡಿಕೆ ಕಳವು ಪ್ರಕರಣಕ್ಕೆ ಬಂಧಿಸಲಾಗಿತ್ತು. ಪಳ್ಳತ್ತಡ್ಕ ಹೊಳೆಗೆ ಮಾಲಿನ್ಯ ಎಸೆದ ಪ್ರಕರಣದಲ್ಲೂ ಮನ್ಸೂರ್ ಆರೋಪಿಯಾಗಿದ್ದಾನೆ.
ದೀಪಕ್ ಬೆಂಗಳೂರು ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಲೆಟ್ ಬೈಕ್ ಕಳವು ಪ್ರಕರಣದ ಆರೋಪಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ. ಬಂಧಿತರನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.





