ಡಿಸೆಂಬರ್ 31ರವರೆಗೆ ಹಳೆನೋಟುಗಳ ಚಲಾವಣೆಗೆ ಆಗ್ರಹ

ಹೈದರಾಬಾದ್: ನೋಟು ಚಲಾವಣೆ ರದ್ದತಿ ನಿರ್ಧಾರದಿಂದ ದೇಶದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹಳೆಯ ನೋಟುಗಳನ್ನು ಎಲ್ಲ ಸಾರ್ವಜನಿಕ ಬಳಕೆ ಪಾವತಿಗಳಿಗೆ ಡಿಸೆಂಬರ್ 31ರವರೆಗೆ ಪಾವತಿಸಲು ಅವಕಾಶ ನೀಡಬೇಕು ಎಂದು ಬಾರತೀಯ ಕಮ್ಯುನಿಸ್ಟ್ ಪಕ್ಷ ಕೇಂಧ್ರ ಸರ್ಕಾರವನ್ನು ಆಗ್ರಹಿಸಿದೆ. ಪನಾಮಾ ದಾಖಲೆಗಳ ಸೋರಿಕೆಯಲ್ಲಿ ಹೆಸರಿಸಲಾದ ನೈಜ ಕಪ್ಪುಹಣ ಹೊಂದಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಪಕ್ಷ ಸವಾಲು ಹಾಕಿದೆ.
ಪ್ರಧಾನಿ ಪ್ರಾಮಾಣಿಕರಾಗಿದ್ದರೆ, ಅವರು ದೇಶದ ಕ್ಷಮೆ ಯಾಚಿಸಿ, ಹಳೆಯ ನೋಟುಗಳನ್ನು ಡಿಸೆಂಬರ್ 31ರವರೆಗೆ ಬಳಸಲು ಅವಕಾಶ ನೀಡಬೇಕು. ಪ್ರಯಾಣ, ಆಸ್ಪತ್ರೆ, ಮೆಡಿಕಲ್ ಶಾಪ್, ತೆರಿಗೆ ಪಾವತಿ, ಪೋನ್ ಬಿಲ್ ಪಾವತಿ, ಆಹಾರಧಾನ್ಯ ಖರೀದಿ ಹಾಗೂ ಅಗತ್ಯವಸ್ತುಗಳಿಗೆ ಇವುಗಳನ್ನು ಬಳಸಲು ಅವಕಾಶ ನೀಡಬೇಕು ಎಂದು ಪಕ್ಷದ ಪ್ರಧಾಣ ಕಾರ್ಯದರ್ಶಿ ಎಸ್.ಸುಧಾಕರ ರೆಡ್ಡಿ ಒತ್ತಾಯಿಸಿದರು.
ನೋಟುಗಳ ಚಲಾವಣೆ ರದ್ದು ಮಾಡಿರುವ ನಿರ್ಧಾರ ಜನತೆಗೆ ಖುಷಿ ಕೊಟ್ಟಿದೆ ಎಂಬ ಪ್ರಧಾನಿ ಹೇಳಿಕೆ ಸತ್ಯಕ್ಕೆ ದೂರ ಎಂದು ಅವರು ಹೇಳಿದರು.
ಇದು ಗಾಯದ ಮೇಳಿನ ಬರೆ. ಹಲವಾರು ಜನರ ಬದುಕು ಇದರಿಂದಾಗಿ ಬರ್ಬರವಾಗಿದೆ. ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾದರೂ, ವಿದೇಶಗಳಲ್ಲಿ ದಾಸ್ತಾನು ಇರುವ ಕಪ್ಪುಹಣವನ್ನು ಏಕೆ ತರಲು ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಮೋದಿ ವಿವರಣೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಜನರ ಸಿಟ್ಟಿನಿಂದ ಯಾವ ಪಲಿತಾಂಶವೂ ಸಾಧ್ಯವಾಗದು. ಕಪ್ಪುಹಣ ಮತ್ತಷ್ಟು ಹೆಚ್ಚಲು ಕಾರಣವಾಗುವ 2000 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಿದ್ದೇಕೆ ಎಮಬ ಬಗ್ಗೆ ಮೋದಿ ವಿವರಣೆ ನೀಡಲಿ ಎಂದು ಆಗ್ರಹಿಸಿದರು. ಮೋದಿಯವರ ಬಾವನಾತ್ಮಕ ಮನವಿ ಬಳಿಕ ಜನರ ಆಕ್ರೋಶ ಹೆಚ್ಚುತ್ತಿದೆ ಎಂದು ಅವರು ಹೇಳಿದರು.
ಜನ ನಗದು ಕೊರತೆಯಿಂದ ತತ್ತರಿಸಿದ್ದರೆ, ಮೋದಿ ತಮ್ಮ ಜೀವಕ್ಕೆ ಅಪಾಯವಿದೆ ಎಂಬ ಬಾವನಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ವಾಣಿಜ್ಯ ಚಟುವಟಿಕೆಗಳು ನೆಲಕಚ್ಚಿವೆ. ಪ್ರಯಾಣ ಸಂಪೂರ್ಣ ಸ್ಥಗಿತವಾಗಿದೆ ಎಂದು ದೂರಿದರು. ಆಸ್ಪತ್ರೆಗಳಿಗೆ ರೋಗಿಗಳನ್ನು ದಾಖಲಿಸಲೂ ಕಷ್ಟವಾಗುತ್ತಿದ್ದು, ಔಷಧ ಖರೀದಿಗೂ ಜನರ ಬಳಿ ಹಣ ಇಲ್ಲ. ಮೋದಿಯವರ ದಿಢೀರ್ ನಿರ್ಧಾರ ತಿರುಗುಬಾಣವಾಗಿದ್ದು, ದೇಶದ ಆರ್ಥಿಕತೆಯಲ್ಲಿ ಅರಾಜಕತೆ ತಾಂಡವವಾಡುತ್ತಿದೆ ಎಂಧು ಟೀಕಿಸಿದರು.
ಎನ್‌ಡಿಎ ಸರ್ಕಾರ ತನ್ನ ನೋಟು ಚಲಾವಣೆ ರದ್ದತಿಯಿಂದಾಗುವ ಪರಿಣಾಮ ಊಹಿಸಲು ವಿಪಲವಾಘಿದೆ. ಸೂಕ್ತ ವ್ಯವಸ್ಥೆ ಮಾಡಿಕೊಳ್ಳದೇ, ಈ ನಿರ್ಧಾರ ಕೈಗೊಳ್ಳಲಾಗಿದೆ. ಮೋದಿಯವರ ಕಣ್ಣೀರು, ದೇಶದ ಕೋಟ್ಯಂತರ ಮಂದಿಯ ಕಣ್ಣೀರು ಒರೆಸಲು ಸಾಧ್ಯವಿಲ್ಲ. ಕಾಳಧನ ಕುಳಗಳು ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಂಡಿದ್ದಾರೆ ಎನ್ನಲಾಗುತ್ತಿದೆ. ಕೊನೆಯ ತ್ರೈಮಾಸಿಕದಲ್ಲಿ ಬ್ಯಾಂಕ್ ಠೇವಣಿಯಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಸರ್ಕಾರದ ವಿಷ್ಯದ ನಡೆ ಬಗ್ಗೆ ಇವರಿಗೆ ಹೇಗೆ ಅನುಮಾನ ಬಂದಿದೆ ಎಂಬ ಸಂದೇಹ ಸಹಜವಾಗಿಯೇ ಕಾಡುತ್ತದೆ. ದೇಶದಿಂದ ವಿಜಯಮಲ್ಯ, ಲಲಿತ್ ಮೋದಿ ಹಾಗೂ ಪನಾಮಾ ಆರೋಪಿಗಳು ಮುಕ್ತವಾಗಿ ಓಡಾಡುತ್ತಿದ್ದರೆ, ಜನರನ್ನು ಶಿಕ್ಷಿಸಲಾಗುತ್ತಿದೆ ಎಂದು ವಿಷಾದಿಸಿದರು.







