ಪೈಪ್ ಕಂಪೋಸ್ಟ್‌ನಿಂದ ತ್ಯಾಜ್ಯಮುಕ್ತ ಮಜೂರು ಗ್ರಾಪಂ: ಸೊರಕೆ

ಉಡುಪಿ, ನ.15: ಕಾಪು ವಿಧಾನಸಭಾ ಕ್ಷೇಔತ್ರದ ಮಜೂರು ಗ್ರಾಮವನ್ನು ತ್ಯಾಜ್ಯಮುಕ್ತ ಗ್ರಾಮವನ್ನಾಗಿಸಲು ಎಲ್ಲ ಮನೆಗಳಲ್ಲಿ ಪೈಪ್ ಕಂಪೋಸ್ಡ್ ವ್ಯವಸ್ಥೆಯನ್ನು ಅಳವಡಿಸಲಾಗುತಿದ್ದು, ಇದಕ್ಕಾಗಿ ಪೈಪ್‌ಗಳನ್ನು ಒದಗಿಸಲು ಶಾಸಕರ ಅನುದಾನ ಒದಗಿಸುವುದಾಗಿ ಕಾಪು ಶಾಸಕ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಉಡುಪಿಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೋದ್ಯೋಗ ತರಬೇತಿ ಸಂಸ್ಥೆಯಲ್ಲಿ ಜನಶಿಕ್ಷಣ ಟ್ರಸ್ಟ್ ಇಂದು ಆಯೋಜಿಸಿದ್ದ ಸುಗ್ರಾಮ- ಗ್ರಾಪಂ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘ ಮತ್ತು ಶಾಸಕರೊಂದಿಗೆ ಸಂವಾದ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಚುನಾಯಿತ ಮಹಿಳಾ ಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಗ್ರಾಪಂನಲ್ಲಿರುವ ಸವಾಲುಗಳು, ಅನುದಾನ ಹಾಗೂ ಅಭಿವೃದ್ಧಿ ಮತ್ತು ಸಮಸ್ಯೆಗಳ ಬಗ್ಗೆ ಶಾಸಕರೊಂದಿಗೆ ಸಂವಾದ ನಡೆಸುವಾಗ ಮನೆಗಳಲ್ಲಿ ಹಸಿ ಕಸ ಹಾಗೂ ಕೊಳೆಯುವ ಕಸ ಬಳಸಲು ಪೈಪ್ ಅಳವಡಿಕೆಗೆ ನೆರವಾಗಿ ಎಂದು ಕೋರಿದ್ದರು. ಸಮಸ್ಯೆಗೆ ಸ್ಪಂದಿಸಿದ ಶಾಸಕರು ತಕ್ಷಣವೇ ತಮ್ಮ ಅನುದಾನದಿಂದ ಮಜೂರು ಗ್ರಾಮಕ್ಕೆ ಅನುದಾನ ಒದಗಿಸುವ ಭರವಸೆ ನೀಡಿದರು.
ಪಂಚಾಯಿತಿ ವ್ಯವಸ್ಥೆ ಸಬಲೀಕರಣದಿಂದ ಜನಸಾಮಾನ್ಯರಿಗೆ ನೆರವಾಗಿದ್ದು, ಮೀಸಲಾತಿಯಿಂದ ಮಹಿಳಾ ಸಬಲೀಕರಣ ಸಾಧ್ಯವಾಗಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು. ಮಹಿಳೆಯರು ಆಡಳಿತ ಕ್ಷೇತ್ರಕ್ಕೆ ಕಾಲಿಟ್ಟದ್ದರಿಂದ ಕರ್ತವ್ಯದಲ್ಲಿ ಬದ್ಧತೆ, ದುಶ್ಚಟ ಮುಕ್ತ ಸಮಾಜ, ್ರಷ್ಟಾಚಾರ ಮುಕ್ತ ವ್ಯವಸ್ಥೆಗೆ ಚಾಲನೆ ದೊರೆತಿದೆ ಎಂದೂ ಅವರು ನುಡಿದರು. ಸುಗ್ರಾಮದಿಂದ ಗ್ರಾಮಗಳು ಸುಭಿಕ್ಷವಾಗಲಿ ಎಂದು ಶಾಸಕರು ಹಾರೈಸಿದರು.
ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಮಾತನಾಡಿ, ಸರಕಾರಗಳು ಮಹಿಳೆಯರನ್ನು ಸಬಲಗೊಳಿಸುವುದರಿಂದ ಉತ್ತಮ ಸಮಾಜ ನಿರ್ಮಾಣ ವಾಗಲಿದೆ. ಹೆಣ್ಮಕ್ಕಳು ಮನೆಗೆ ಆಸ್ತಿ ಎಂಬ ಬಾವನೆ ಮೂಡಿದೆ. ಅವರು ಸುಶಿಕ್ಷಿತರಾಗುವುದರಿಂದ ಸಮಾಜ ಉತ್ತಮಗೊಂಡಿದೆ ಎಂದರು. ಜನಶಿಕ್ಷಣ ಸಂಸ್ಥೆಯ ನಿರ್ದೇಶಕ ಶೀನಶೆಟ್ಟಿ ಹಾಗೂ ಕೃಷ್ಣ ಮೂಲ್ಯ ಸಂವಾದ ನಡೆಸಿಕೊಟ್ಟರು.







