ಶಿಕ್ಷಕಿ ಕೊಲೆ: ಆರೋಪಿಯ ಬಂಧನ

ಮಡಿಕೇರಿ, ನ.15: ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿ ಬಳಿಯ ವೆಸ್ಟ್ ನೆಮ್ಮೆಲೆಯಲ್ಲಿ ನಡೆದ ಬರ್ಬರ ಕೊಲೆಯ ಹಂತಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೋಮವಾರ ಹಾಡಹಗಲೇ ಅತಿಥಿ ಶಿಕ್ಷಕಿ ಪ್ರಮೀಳಾ(34) ಎಂಬವರನ್ನು ತೋಟದಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದು ಪರಾರಿಯಾಗಿದ್ದ ಹರೀಶ್ ಎಂಬಾತನನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ಪೊಲೀಸರು ಬಂಧಿಸಿದ್ದಾರೆ.
ಘಟನೆ ತಿಳಿದ ಶಿಕ್ಷಕರು ಗೋಣಿಕೊಪ್ಪಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತಿಭಟಿಸುವ ಮೂಲಕ ತಮ್ಮ ಅಳಲನ್ನು ತೊಡಿಕೊಂಡರು. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಕರು ಒಬ್ಬಂಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ಪ್ರಕರಣ ಶಿಕ್ಷಕರಲ್ಲಿ ಭಯದ ವಾತಾವರಣ ಮೂಡಿಸಿದೆ ಎಂದು ಶಿಕ್ಷಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ. ಪಾಂಡು ಮತ್ತು ಶಿಕ್ಷಕರ ನಡುವೆ ಕೆಲವು ಕಾಲ ವಾಗ್ವಾದ ನಡೆದು ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು.
ಕೊಡಗು ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಚೇತನ್ ನೇತೃತ್ವದಲ್ಲಿ ನೂರಾರು ಶಿಕ್ಷಕರು ಪ್ರತಿಭಟಿಸಿದರು. ಸಾವನ್ನಪ್ಪಿದ ಶಿಕ್ಷಕಿಗೆ ತಕ್ಷಣ ಪರಿಹಾರ ನೀಡಬೇಕು. ಹಳ್ಳಿಗಳಲ್ಲಿ ಒಬ್ಬಂಟಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಈ ಸಂದರ್ಭ ಒತ್ತಾಯಿಸಿದರು.
ಸ್ಥಳಕ್ಕೆ ಗೋಣಿಕೊಪ್ಪವೃತ್ತ ನಿರೀಕ್ಷಕ ಕೆ.ರಾಜು ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತನಾಡಿದರು. ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ. ಸಂತ್ರಸ್ತರ ನಿಧಿಯಿಂದ ಪರಿಹಾರ ನೀಡುವ ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು
.ಜನಪ್ರತಿನಿಧಿಗಳ ಭೇಟಿ: ವಿಷಯ ತಿಳಿದು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಗ್ರಾಪಂ ಸದಸ್ಯರು ಶವಾಗಾರಕ್ಕೆ ಆಗಮಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದರು.







