ಕಲ್ಲು ತೂರಾಟ ನಡೆದ ಮಸೀದಿಗೆ ಭೇಟಿ ನೀಡಿ, ಖಂಡಿಸಿದ ಮೊಗವೀರ ಮುಖಂಡರು
ಸಂಶಯದ ವಾತಾವರಣದಲ್ಲಿ ಪ್ರೀತಿ, ವಿಶ್ವಾಸ ಮೂಡಿಸಿದ ಭೇಟಿ
.jpg)
ಮಂಗಳೂರು, ನ. 16: ಉಳ್ಳಾಲ ಪೇಟೆಯಲ್ಲಿನ ರಹ್ಮಾನಿಯಾ ಮಸೀದಿಗೆ ಸೋಮವಾರ ತಡರಾತ್ರಿ ದುಷ್ಕರ್ಮಿಗಳು ಕಲ್ಲೆಸೆದು ಹಾನಿಗೊಳಿಸಿದ ಪ್ರಕರಣ ನಡೆದಿತ್ತು. ಮಂಗಳವಾರ ಮಧ್ಯಾಹ್ನ ಮಸೀದಿಗೆ ಭೇಟಿ ನೀಡಿದ ಸ್ಥಳೀಯ ಮೊಗವೀರ ಮುಖಂಡರು ಈ ದುಷ್ಕ್ರತ್ಯವನ್ನು ಖಂಡಿಸಿದ್ದಾರೆ. ಇಂತಹ ಕುಕೃತ್ಯ ನಡೆಸುವ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಕಡಿವಾಣ ಹಾಕಬೇಕು ಎಂದು ಮೊಗವೀರ ಮುಖಂಡರು ಮಸೀದಿ ಅಧ್ಯಕ್ಷರಲ್ಲಿ ಚರ್ಚಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಉಳ್ಳಾಲ, ತೊಕ್ಕೊಟ್ಟು ಪರಿಸರದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಮೊಗವೀರ ಮುಖಂಡರ ಈ ಭೇಟಿ ಮಹತ್ವ ಪಡೆದಿದೆ. ಇದರಿಂದ ಪರಸ್ಪರ ಸಂಶಯ ದೂರವಾಗುವ ಹಾಗು ವಿಶ್ವಾಸ ಬೆಳೆಯುವ ವಾತಾವರಣ ಸೃಷ್ಟಿಸಲು ಸಹಕಾರಿಯಾಗಿದೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.
ಸೋಮವಾರ ರಾತ್ರಿ ಮಸೀದಿಗೆ ಕಲ್ಲೆಸೆತದ ಬಗ್ಗೆ ಮಂಗಳವಾರ ಮಾಹಿತಿ ಸಿಕ್ಕಿದ ತಕ್ಷಣ ರಹ್ಮಾನಿಯಾ ಮಸೀದಿಗೆ ಆಗಮಿಸಿದ ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್ ಅವರು ಮಸೀದಿ ಸಮಿತಿಯ ಅಧ್ಯಕ್ಷ ಮೊಯ್ದಿನ್ ಹಸನ್ ಅವರನ್ನು ಭೇಟಿ ಮಾಡಿ ‘‘ಮಸೀದಿಗೆ ಕಲ್ಲೆಸೆಯುವವರು ಮನುಷ್ಯರಲ್ಲ. ಮಸೀದಿಗೆ ಕಲ್ಲೆಸೆದರೆ ಅದು ದೇವಸ್ಥಾನಕ್ಕೆ ಎಸೆದಂತೆ. ನಿಮ್ಮ ನೋವು ನಮಗೆ ಅರ್ಥವಾಗುತ್ತದೆ.ಇದು ಕಿಡಿಗೇಡಿಗಳ ಕೃತ್ಯವಾಗಿದ್ದು, ಅಂತಹ ಆರೋಪಿಯ ಪತ್ತೆಗೆ ನಾವೆಲ್ಲರೂ ಸಹಕರಿಸೋಣ. ಪ್ರೀತಿ-ವಿಶ್ವಾಸದಲ್ಲಿ ಇರೋಣ ಎಂದು ಹೇಳಿದ್ದಾರೆ. ಇದು ಸ್ವಾಗತಾರ್ಹ ಬೆಳವಣಿಗೆ. ಅವರು ಭೇಟಿ ನೀಡಿ ನಮ್ಮ ನೋವಿಗೆ ಸ್ಪಂದಿಸಿದ್ದು ನಮಗೆ ಸಂತಸ ತಂದಿದೆ " ಎಂದು ಮೊಯ್ದಿನ್ ಹಸನ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ , ಮೊಗವೀರ ಮುಖಂಡ ರಾಜೇಶ್ ಪುತ್ರನ್ , ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೇನ್ ಕುಂಞಿ ಮೋನು, ಸದಸ್ಯ ಪೊಡಿ ಮೋನು ಮತ್ತಿತರರು ಉಪಸ್ಥಿತರಿದ್ದರು.







