‘ಯಕ್ಷಾಂಗಣ’ ತಾಳಮದ್ದಳೆ ಸಪ್ತಾಹ ಸಮಾರೋಪ

ಮಂಗಳೂರು, ನ.15: ‘ಕರಾವಳಿಯ ಜನರ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ತುಳು ಮತ್ತು ಕನ್ನಡ ಭಾಷೆಗಳ ಪ್ರಸರಣಕ್ಕೆ ಯಕ್ಷಗಾನದ ಕೊಡುಗೆ ಅಪಾರ. ಅದರಲ್ಲಿಯೂ ತಾಳಮದ್ದಳೆ ಪ್ರಕಾರದಿಂದ ನಿಜವಾದ ಕನ್ನಡ ಜಾಗೃತಿಯುಂಟಾಗಿದೆ. ಯಕ್ಷಾಂಗಣ ಸಂಘಟನೆಯು ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ನಡೆಸುತ್ತಿರುವ ಯಕ್ಷಗಾನ ತಾಳಮದ್ದಳೆ ಸಪ್ತಾಹದ ಮೂಲಕ ಕನ್ನಡ ರಾಜ್ಯೋತ್ಸವದ ಅರ್ಥಪೂರ್ಣ ಆಚರಣೆ ಯಾಗುತ್ತಿದೆ’ ಎಂದು ಇಂಟರ್‌ನ್ಯಾಶನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್ ಅಧ್ಯಕ್ಷ ಹಾಗೂ ಶ್ರೀದೇವಿ ವಿದ್ಯಾ ಸಂಸ್ಥೆಗಳ ಆಡಳಿತ ನಿರ್ದೇಶಕ ಎ. ಸದಾನಂದ ಶೆಟ್ಟಿ ಹೇಳಿದ್ದಾರೆ.
‘ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ, ಕರ್ನಾಟಕ ಯಕ್ಷಭಾರತಿ (ರಿ) ಪುತ್ತೂರು ಮತ್ತು ಎಸ್‌ಡಿಎಂ ಎಜುಕೇಶನ್ ಟ್ರಸ್ಟ್ ಸಹಯೋಗದಲ್ಲಿ ಮಂಗಳೂರಿನ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ-2016’ ಸುಂದರ ಅರ್ಥಸರಣಿ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೇಯರ್ ಎಂ. ಹರಿನಾಥ್ ಮಾತನಾಡಿ ‘ನಗರದ ಪುರಭವನ ದುಬಾರಿಯಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಯಕ್ಷಗಾನ ಮತ್ತು ನಾಟಕ ಕಾರ್ಯಕ್ರಮಗಳನ್ನು ನಡೆಸಲು ಪುರಭವನದ ಬಳಿ ಹೊಸ ಸಭಾಂಗಣ ನಿರ್ಮಾಣಗೊಳ್ಳುತ್ತಿದೆ. ಶೇ.70ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಜನವರಿ ವೇಳೆಗೆ ಈ ಸಭಾಂಗಣವನ್ನು ಉದ್ಘಾಟಿಸಲಾಗುವುದು’ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಸಭಾಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಕುದ್ರಾಡಿಗುತ್ತು ಅಶೋಕ ಮಾಡ, ಎ.ಕೆ. ಜಯರಾಮ ಶೇಖ, ಪುರುಷೋತ್ತಮ ಶೆಟ್ಟಿ, ಪ್ರಾಚಾರ್ಯ ಡಾ. ತಾರಾನಾಥ, ಲೀಲಾಕ್ಷ ಬಿ. ಕರ್ಕೇರ, ಯಕ್ಷಗಾನ ಕಲಾವಿದ ಸಿದ್ಧಕಟ್ಟೆ ಸದಾಶಿವ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ವಕ್ವಾಡಿ ಶೇಖರ ಶೆಟ್ಟಿ, ಸುಧಾಕರ ರಾವ್ ಪೇಜಾವರ, ಡಾ. ದಿನಕರ ಎಸ್. ಪಚ್ಚನಾಡಿ, ಕೆ. ರವೀಂದ್ರ ರೈ ಹರೇಕಳ, ತೀರ್ಥಹಳ್ಳಿ ವಿಶ್ವನಾಥ ಶೆಟ್ಟಿ, ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ಸಿದ್ದಾರ್ಥ ಅಜ್ರಿ, ನಿವೇದಿತಾ ಎನ್. ಶೆಟ್ಟಿ ಬೆಳ್ಳಿಪ್ಪಾಡಿ, ಶೋಭಾ ಕೇಶವ ಕಣ್ಣೂರು ವೇದಿಕೆಯಲ್ಲಿದ್ದರು.
‘ಯಕ್ಷಾಂಗಣ’ದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಉಪಾಧ್ಯಕ್ಷ ಎ. ಶಿವಾನಂದ ಕರ್ಕೇರಾ ವಂದಿಸಿದರು. ಕೋಶಾಧಿಕಾರಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.







