ವಿನಿಮಯ ಮಾಡುವಂತೆ ಕೋರಿ ಮೋದಿಗೆ ಪ್ರಚಂಡ ಫೋನ್
ನೇಪಾಳದಲ್ಲಿ ಭಾರೀ ಪ್ರಮಾಣದಲ್ಲಿ ನಿಷೇಧಿತ ಭಾರತೀಯ ಕರೆನ್ಸಿ

ಕಠ್ಮಂಡು, ನ. 15: ಭಾರತದಲ್ಲಿ ರೂ. 500 ಮತ್ತು 1000 ಮುಖಬೆಲೆಯ ಕರೆನ್ಸಿ ನೋಟುಗಳನ್ನು ನಿಷೇಧಿಸಿರುವ ಕ್ರಮ ನೆರೆಯ ದೇಶ ನೇಪಾಳದಲ್ಲೂ ಕಳವಳ ಹುಟ್ಟಿಸಿದೆ. ಆ ದೇಶದಲ್ಲೂ ಹೆಚ್ಚಿನ ಮುಖಬೆಲೆಯ ಭಾರತೀಯ ನೋಟುಗಳನ್ನು ಭಾರೀ ಪ್ರಮಾಣದಲ್ಲಿ ಹೊಂದಿದವರಿದ್ದಾರೆ. ಈ ಹಿನ್ನೆಲೆಯಲ್ಲಿ, ನೇಪಾಳದ ಪ್ರಧಾನಿ ಪ್ರಚಂಡ ಪ್ರಧಾನಿ ನರೇಂದ್ರ ಮೋದಿ ಜೊತೆ ಫೋನ್‌ನಲ್ಲಿ ಮಾತನಾಡಿ, ನೇಪಾಳಿಗರು ಹೊಂದಿರುವ ಹಳೆಯ ಭಾರತೀಯ ಕರೆನ್ಸಿ ನೋಟುಗಳಿಗೆ ಬದಲಾಗಿ ನೂತನ ಕಾನೂನುಬದ್ಧ ನೋಟುಗಳನ್ನು ವಿನಿಮಯ ಮಾಡುವ ವ್ಯವಸ್ಥೆಯನ್ನು ನೇಪಾಳದಲ್ಲಿ ಮಾಡುವಂತೆ ಕೋರಿದ್ದಾರೆ.
ಮೋದಿ ಜೊತೆ ಐದು ನಿಮಿಷಗಳ ಕಾಲ ಟೆಲಿಫೋನ್ ಸಂಭಾಷಣೆ ನಡೆಸಿದ ಪ್ರಚಂಡ, ನೇಪಾಳಿಗರು ರೂ. 500 ಮತ್ತು 1000 ಮುಖಬೆಲೆಯ ಕರೆನ್ಸಿ ನೋಟುಗಳನ್ನು ಭಾರೀ ಪ್ರಮಾಣದಲ್ಲಿ ಹೊಂದಿದ್ದಾರೆ ಎಂದರು.
ಭಾರತದಲ್ಲಿ ದಿನಗೂಲಿ ಕಾರ್ಮಿಕರಾಗಿ ದುಡಿಯುವ ಲಕ್ಷಾಂತರ ನೇಪಾಳಿಗರಿದ್ದಾರೆ ಹಾಗೂ ವೈದ್ಯಕೀಯ ಚಿಕಿತ್ಸೆಗಾಗಿ ಅಥವಾ ದೈನಂದಿನ ಬಳಕೆಯ ವಸ್ತುಗಳನ್ನು ಭಾರತೀಯ ಮಾರುಕಟ್ಟೆಗಳಲ್ಲಿ ಖರೀದಿಸುವುದಕ್ಕಾಗಿ ಹೋಗುವವರಿದ್ದಾರೆ. ಅವರ ಬಳಿ ನಿಷೇಧಿತ ಭಾರತೀಯ ಬ್ಯಾಂಕ್ ನೋಟ್‌ಗಳು ಭಾರೀ ಪ್ರಮಾಣದಲ್ಲಿ ಇವೆ ಎಂಬುದಾಗಿ ‘ಕಠ್ಮಂಡು ಪೋಸ್ಟ್’ ವರದಿ ಮಾಡಿದೆ.
ಅದೂ ಅಲ್ಲದೆ, ಯಾತ್ರಾರ್ಥಿಗಳಾಗಿ ಭಾರತಕ್ಕೆ ಹೋಗುವವರು ಹಾಗೂ ಗಡಿಯಾಚೆಗಿನ ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡವರ ಬಳಿ ಭಾರೀ ಪ್ರಮಾಣದಲ್ಲಿ ನಿಷೇಧಿತ ಭಾರತೀಯ ಕರೆನ್ಸಿ ನೋಟುಗಳಿವೆ ಎನ್ನಲಾಗಿದೆ.
ಹಲವು ನೇಪಾಳಿಗರು ತಮ್ಮಲ್ಲಿರುವ ಹಳೆಯ ಭಾರತೀಯ ನೋಟುಗಳಿಗೆ ಹೊಸ ನೋಟುಗಳನ್ನು ಪಡೆಯದಿದ್ದರೆ ತಮ್ಮ ಜೀವಮಾನದ ಉಳಿತಾಯಗಳನ್ನೇ ಕಳೆದುಕೊಳ್ಳಬಹುದು ಎಂದು ನೇಪಾಳಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಒಕ್ಕೂಟ ಹೇಳಿದೆ.
‘‘ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿ, ಹಳೆಯ ನಿಷೇಧಿತ ಭಾರತೀಯ ನೋಟುಗಳನ್ನು ನೇಪಾಳಿಗರು ತಮ್ಮ ದೇಶದಲ್ಲೇ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುವಂತೆ ಭಾರತ ವ್ಯವಸ್ಥೆ ಮಾಡಬೇಕು’’ ಎಂಬುದಾಗಿ ಪ್ರಧಾನಿ ಹೇಳಿದ್ದಾರೆ ಎಂದು ಪ್ರಚಂಡರ ವೈಯಕ್ತಿಕ ವೆಬ್‌ಸೈಟ್‌ನಲ್ಲಿ ಹಾಕಲಾದ ಹೇಳಿಕೆಯೊಂದು ತಿಳಿಸಿದೆ.







