ಮೆಡಿಟರೇನಿಯನ್ ಸಮುದ್ರದಿಂದ 550 ವಲಸಿಗರ ರಕ್ಷಣೆ
ರೋಮ್, ನ. 15: ಮೆಡಿಟರೇನಿಯನ್ ಸಮುದ್ರದಲ್ಲಿ ಸೋಮವಾರ ದೋಣಿಗಳಿಂದ ಸುಮಾರು 550 ವಲಸಿಗರನ್ನು ರಕ್ಷಿಸಲಾಗಿದೆ ಎಂದು ಇಟಲಿಯ ತಟರಕ್ಷಣಾ ಪಡೆ ಹೇಳಿದೆ.
ಇದಕ್ಕಾಗಿ ನಾಲ್ಕು ಬಾರಿ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು ಹಾಗೂ ಕಾರ್ಯಾಚರಣೆಗಳ ವೇಳೆ ಐದು ಮೃತದೇಹಗಳನ್ನೂ ಪತ್ತೆಹಚ್ಚಲಾಯಿತು.
ಮೃತದೇಹಗಳು ರಬ್ಬರ್ ಡಿಂಗಿ ದೋಣಿಯೊಂದರಲ್ಲಿ ಇದ್ದವು ಹಾಗೂ ದೋಣಿಯಲ್ಲಿದ್ದ ಇನ್ನೋರ್ವ ವ್ಯಕ್ತಿ ಮುಳುಗಿದ್ದಾರೆ ಎಂದು ‘ಎಸ್‌ಒಎಸ್ ಮೆಡಿಟರೇನಿಯನ್’ ಎಂಬ ನೆರವು ಗುಂಪು ಹೇಳಿದೆ.
ಈ ಸಂಸ್ಥೆಗೆ ಸೇರಿದ ‘ಅಕ್ವೇರಿಯಸ್’ ಹಡಗಿನಲ್ಲಿ ಲಿಬಿಯ ಕರಾವಳಿಯಲ್ಲಿ ಈ ವಲಸಿಗರನ್ನು ರಕ್ಷಿಸಲಾಗಿದೆ. ರಕ್ಷಿಸಲ್ಪಟ್ಟವರಲ್ಲಿ ಹೆಚ್ಚಿನವರು ಪಶ್ಚಿಮ ಆಫ್ರಿಕದವರು.
ಎರಡು ಗಂಟೆಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಓರ್ವ ಬಾಲಕ ಹಾಗೂ ಇಂಧನ ಹೊಗೆಯನ್ನು ಭಾರೀ ಪ್ರಮಾಣದಲ್ಲಿ ಸೇವಿಸಿರುವ ಮಹಿಳೆಯೋರ್ವರನ್ನು ಹೆಲಿಕಾಪ್ಟರ್ ಮೂಲಕ ಸಾಗಿಸಲಾಗಿದೆ ಎಂದು ತಟರಕ್ಷಣಾ ಪಡೆ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಈ ವರ್ಷ ಮೆಡಿಟರೇನಿಯನ್ ಸಮುದ್ರದಲ್ಲಿ ಮೃತಪಟ್ಟ ವಲಸಿಗರ ಸಂಖ್ಯೆ ನವೆಂಬರ್ 14ರ ವೇಳೆಗೆ 4,271ಕ್ಕೆ ಏರಿದೆ.





