ಸಹಪಾಠಿಗಳ ಪೀಡನೆ: ಭಾರತೀಯ ಬಾಲಕ ಆತ್ಮಹತ್ಯೆಗೆ ಶರಣು

ಲಂಡನ್, ನ. 15: ಇಂಗ್ಲೆಂಡ್‌ನ ಲೀಸೆಸ್ಟರ್ ನಗರದ ಶಾಲೆ ಯೊಂದರಲ್ಲಿ ಸಹಪಾಠಿಗಳಿಂದ ಪೀಡನೆಗೊಳಗಾದನೆನ್ನಲಾದ 15 ವರ್ಷದ ಭಾರತೀಯ ಮೂಲದ ಬಾಲಕನೊಬ್ಬ ನೇಣುಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ.
ಬ್ರಾಂಡನ್ ಸಿಂಗ್ ರಯತ್ ಆಗಸ್ಟ್‌ನಲ್ಲಿ ಮೃತಪಟ್ಟಿದ್ದಾನೆ. ಆದರೆ, ಆತನ ತಾಯಿ ಮೀನಾ ರಯತ್, ರಾಷ್ಟ್ರೀಯ ಪೀಡನೆ (ಬುಲಿಯಿಂಗ್) ವಿರೋಧಿ ಸಪ್ತಾಹದ ಆರಂಭಿಕ ದಿನವಾದ ಸೋಮವಾರ ಈ ಬಗ್ಗೆ ಬಾಯಿಬಿಟ್ಟಿದ್ದಾರೆ.
‘‘ಆತನನ್ನು ಆಸ್ಪತ್ರೆಗೆ ಸೇರಿಸಿಕೊಳ್ಳುವಂತೆ ನಾನು ವೈದ್ಯರಲ್ಲಿ ಬೇಡಿದೆ. ಯಾಕೆಂದರೆ, ಅದಾಗಲೇ ಪರಿಸ್ಥಿತಿ ಗಂಭೀರ ಸ್ಥಿತಿಗೆ ತಲುಪಿತ್ತು. ಆತ ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ್ದಾನೆ ಎಂಬುದಾಗಿ ನಾನು ವೈದ್ಯರಿಗೆ ಹೇಳಿದೆ’’ ಎಂದು ಮೀನಾ ರಯತ್ ‘ಲೀಸೆಸ್ಟರ್ ಮರ್ಕ್ಯುರಿ’ ಪತ್ರಿಕೆಗೆ ತಿಳಿಸಿದರು.
ಬ್ಲೀಚಿಂಗ್ ಪೌಡರ್ ಸೇವನೆ ಮತ್ತು ತನ್ನ ಮುಂಗೈಯ ನರಗಳನ್ನು ತುಂಡರಿಸುವುದು ಸೇರಿದಂತೆ ಹಲವಾರು ವಿಫಲ ಆತ್ಮಹತ್ಯೆ ಯತ್ನಗಳ ಬಳಿಕ, ಆಗಸ್ಟ್ 9ರಂದು ಆತ ತನ್ನ ಮಲಗುವ ಕೋಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದನು.
ಸುದೀರ್ಘ ಸೈಬರ್ ಪೀಡನೆಯ ಭಾಗವಾಗಿ, ಸಹಪಾಠಿಗಳು ಅಸಹ್ಯವಾಗಿ ನಿಂದಿಸಲು ಆರಂಭಿಸಿದ ಬಳಿಕ ಆತ ಆತ್ಮಹತ್ಯಾ ಪ್ರವೃತ್ತಿಯನ್ನು ಬೆಳೆಸಿಕೊಂಡನು.
‘‘ಶಾಲೆ ಮತ್ತು ವೈದ್ಯರು ಸರಿಯಾದ ಸಮಯದಲ್ಲಿ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಒಮ್ಮೆ ಆತನ ಗೆಳೆಯರೇ ಆಗಿದ್ದವರು ಆತನನ್ನು ಕೊಂದರು ಹಾಗೂ ನಮ್ಮ ಬದುಕನ್ನು ಬರಿದು ಮಾಡಿದರು’’ ಎಂದು ಕೂದಲು ಮತ್ತು ಸೌಂದರ್ಯ ತಜ್ಞೆಯಾಗಿರುವ ಮೀನಾ ಹೇಳುತ್ತಾರೆ.







