ಮಕ್ಕಳಿಗೆ ಭದ್ರತಾ ತಪಾಸಣೆ ವಿನಾಯಿತಿ ಕೋರಿದ ಟ್ರಂಪ್
ವಾಶಿಂಗ್ಟನ್, ನ. 15: ತನ್ನ ಮೂವರು ಮಕ್ಕಳಿಗೆ ಎಲ್ಲ ಭದ್ರತಾ ತಪಾಸಣೆಗಳಿಂದ ವಿನಾಯಿತಿ ನೀಡಬೇಕು ಎಂಬುದಾಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೋರಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಈ ಕ್ರಮ ಅಮೆರಿಕದ ಮುಂದಿನ ಸರಕಾರದಲ್ಲಿ ಸಂಭಾವ್ಯ ಹಿತಾಸಕ್ತಿ ಸಂಘರ್ಷಗಳಿಗೆ ಕಾರಣವಾಗಬಹುದು ಎಂಬುದಾಗಿ ಮಾಧ್ಯಮಗಳು ಅಭಿಪ್ರಾಯಪಟ್ಟಿವೆ. ಟ್ರಂಪ್‌ರ ಮೂವರು ಮಕ್ಕಳಾದ ಎರಿಕ್ ಟ್ರಂಪ್, ಡೊನಾಲ್ಡ್ ಟ್ರಂಪ್ ಜೂನಿಯರ್ ಮತ್ತು ಮಗಳು ಇವಾಂಕಾ ಟ್ರಂಪ್ ಹಾಗೂ ಆಕೆಯ ಗಂಡ ಜೇರ್ಡ್ ಕುಶ್ನರ್‌ಗೆ ಎಲ್ಲ ರೀತಿಯ ಭದ್ರತಾ ತಪಾಸಣೆಗಳಿಂದ ವಿನಾಯಿತಿ ನೀಡುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಟ್ರಂಪ್ ತಂಡ ಶ್ವೇತಭವನವನ್ನು ಕೋರಿದೆ ಎಂದು ಸಿಬಿಎಸ್ ನ್ಯೂಸ್ ಮತ್ತು ಸಿಎನ್‌ಎನ್ ಹೇಳಿವೆ.
ಟ್ರಂಪ್‌ರ ಮಕ್ಕಳಿಗೆ ಈ ವಿನಾಯಿತಿಯನ್ನು ನೀಡಬೇಕಾದರೆ, ಈಗಿನ ಸರಕಾರವು ಅವರನ್ನು ತಮ್ಮ ತಂದೆಯ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ನೇಮಿಸುವುದು ಅಗತ್ಯವಾಗಿದೆ. ಭದ್ರತಾ ತಪಾಸಣೆ ವಿನಾಯಿತಿಯು ರಹಸ್ಯ ಮಾಹಿತಿಗಳೂ ಮತ್ತು ಅವರ ವಾಣಿಜ್ಯ ಹಿತಾಸಕ್ತಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಸಿಎನ್‌ಎನ್ ಹೇಳಿದೆ.





