ಮುರ್ಸಿ ಮರಣ ದಂಡನೆ ರದ್ದುಪಡಿಸಿದ ಮೇಲ್ಮನವಿ ನ್ಯಾಯಾಲಯ
ಕೈರೋ, ನ. 15: ಈಜಿಪ್ಟ್‌ನ ಪದಚ್ಯುತ ಅಧ್ಯಕ್ಷ ಮುಹಮ್ಮದ್ ಮುರ್ಸಿಗೆ ಪ್ರಕರಣವೊಂದರಲ್ಲಿ ವಿಚಾರಣಾ ನ್ಯಾಯಾಲಯ ನೀಡಿರುವ ಮರಣ ದಂಡನೆಯನ್ನು ಮೇಲ್ಮನವಿ ನ್ಯಾಯಾಲಯವೊಂದು ರದ್ದುಪಡಿಸಿದೆ.
2011ರ ಬಂಡಾಯದ ವೇಳೆ, ಜೈಲು ಒಡೆಯುವ ಹಾಗೂ ಪೊಲೀಸರ ವಿರುದ್ಧದ ಹಿಂಸಾಚಾರದಲ್ಲಿ ಭಾಗಿಯಾದ ಆರೋಪಗಳನ್ನು ಎದುರಿಸುತ್ತಿರುವ ಮುರ್ಸಿಯನ್ನು ಮರುವಿಚಾರಣೆಗೆ ಗುರಿಪಡಿಸಬೇಕು ಎಂದು ಕ್ಯಾಸೇಶನ್ ನ್ಯಾಯಾಲಯ ಹೇಳಿದೆ. 2011ರ ಬಂಡಾಯವು ಸುದೀರ್ಘ ಕಾಲ ದೇಶದ ಅಧ್ಯಕ್ಷರಾಗಿದ್ದ ಹುಸ್ನಿ ಮುಬಾರಕ್‌ರನ್ನು ಪದಚ್ಯುತಗೊಳಿಸಿತ್ತು.
ಈ ಪ್ರಕರಣದಲ್ಲಿ, ವಿಚಾರಣಾ ನ್ಯಾಯಾಲಯವು 2015ರಲ್ಲಿ ಇತರ ಐದು ಮಂದಿಗೂ ಮರಣ ದಂಡನೆ ನೀಡಿತ್ತು. ಅವರ ವಿರುದ್ಧವೂ ಮರುವಿಚಾರಣೆ ನಡೆಸಲು ನ್ಯಾಯಾಲಯ ಆದೇಶ ನೀಡಿದೆ.
ಅಧಿಕಾರದಲ್ಲಿದ್ದ ಅವಧಿಯಲ್ಲಿ ಪ್ರತಿಭಟನಕಾರರ ವಿರುದ್ಧ ಮಾರಕ ಬಲಪ್ರಯೋಗ ಮಾಡಲು ಆದೇಶ ನಿಡಿದ ಆರೋಪವನ್ನೊಳಗೊಂಡ ಪ್ರಕರಣದಲ್ಲಿ, ವಿಚಾರಣಾ ನ್ಯಾಯಾಲಯವು ಎಪ್ರಿಲ್‌ನಲ್ಲಿ ಮುರ್ಸಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆ ಶಿಕ್ಷೆಯನ್ನು ಇದೇ ಮೇಲ್ಮನವಿ ನ್ಯಾಯಾಲಯವು ಕಳೆದ ವರ್ಷ ಎತ್ತಿ ಹಿಡಿದಿತ್ತು.





