ಗುಜರಾತ್ ಸಿಎಂ ಆಗಿದ್ದಾಗ 25 ಕೋ.ರೂ. ಲಂಚ ಪಡೆದಿದ್ದ ಮೋದಿ: ಕೇಜ್ರಿ
ಹೊಸದಿಲ್ಲಿ, ನ.15: ತನ್ನ ನೋಟು ನಿಷೇಧ ಕ್ರಮ ಬಡವರ ಪಾಲಿನ ‘ಖಡಕ್ ಚಾಯ್’ ಆಗಿದೆ ಮತ್ತು ಇದು ಶ್ರೀಮಂತರಿಗೆ ಒಗ್ಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸುತ್ತಿರಬಹುದು, ಆದರೆ ಇದು ಶ್ರೀಸಾಮಾನ್ಯನ ಪಾಲಿಗೆ ವಿಷಕ್ಕಿಂತ ಹೆಚ್ಚಾಗಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಇಂದಿಲ್ಲಿ ಹೇಳಿದರು.
ದಿಲ್ಲಿ ವಿಧಾನಸಭೆಯ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಮಾತನಾಡುತ್ತಿದ್ದ ಅವರು,ಮೋದಿಯವರು ತನ್ನ ಕಾರ್ಪೊರೇಟ್ ಸ್ನೇಹಿತರನ್ನು ರಕ್ಷಿಸುತ್ತಿದ್ದಾರೆ ಮತ್ತು ಬಡವರನ್ನು ಶೋಷಿಸುತ್ತಿದ್ದಾರೆ. ಅವರು ತನ್ನ ನಿರ್ಧಾರ ಕಪ್ಪುಹಣದ ವಿರುದ್ಧ ಎಂದು ಹೇಳಿಕೊಳ್ಳುತ್ತಿದ್ದಾರೆ, ಆದರೆ ಅದು ಸಾಮಾನ್ಯಜನರ ವಿರುದ್ಧ ದಾಳಿಯಾಗಿದೆ. ಮೋದಿಯವರ ಕಾರ್ಪೊರೇಟ್ ಸ್ನೇಹಿತರು ಅವರಿಗೆ ಹಣ ಪಾವತಿ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಮೋದಿ ಅವರ ನಿವಾಸಗಳ ಮೇಲೆ ಯಾವುದೇ ಆದಾಯ ತೆರಿಗೆ ದಾಳಿಗಳು ನಡೆಯದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಆದಿತ್ಯ ಬಿರ್ಲಾ ಸಮೂಹದ ಕಂಪೆನಿಯಿಂದ 25 ಕೋ.ರೂ.ಲಂಚ ಸ್ವೀಕರಿಸಿದ್ದರು ಎಂದೂ ಆರೋಪಿಸಿದ ಕೇಜ್ರಿವಾಲ್, 2013,ಅ.15ರಂದು ಆದಿತ್ಯ ಬಿರ್ಲಾ ಸಮೂಹದ ಹಿರಿಯ ಅಧಿಕಾರಿ ಶುಭೇಂದು ಅಮಿತಾಬ್ ನಿವಾಸದ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು ಅವರ ಬ್ಲಾಕ್‌ಬೆರಿ ಫೋನ್, ಲ್ಯಾಪ್‌ಟಾಪ್ ಇತ್ಯಾದಿಗಳನ್ನು ಕೂಲಂಕಷವಾಗಿ ತಪಾಸಣೆಗೊಳಪಡಿಸಿದ್ದರು. 2012,ನ.16ರಂದು ಗುಜರಾತ್ ಮುಖ್ಯಮಂತ್ರಿಗೆ 25 ಕೋ.ರೂ. ಪಾವತಿಸಲಾಗಿದೆ ಎಂಬ ಟಿಪ್ಪಣಿ ಆಗ ಪತ್ತೆಯಾಗಿತ್ತು. ಆದರೆ ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅವರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ ಎಂದು ಪ್ರತಿಪಾದಿಸಿದರು.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಾಲಿ ಪ್ರಧಾನಿಯೋರ್ವರ ಹೆಸರು ಕಪ್ಪುಹಣ ವಹಿವಾಟಿನಲ್ಲಿ ಕೇಳಿಬಂದಿದೆ ಎಂದು ಕೇಜ್ರಿ ಬೆಟ್ಟು ಮಾಡಿದರು.
ಚಲಾವಣೆ ರದ್ದು ನಿರ್ಧಾರ ವಾಪಸ್ಸಿಗೆ ಕೇಜ್ರಿವಾಲ್ ಆಗ್ರಹ
ದೇಶದಲ್ಲಿ 500 ಹಾಗೂ 1000 ರೂಪಾಯಿ ನೋಟು ಚಲಾವಣೆ ರದ್ದತಿ ಹಗರಣದ ಬಗ್ಗೆ ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ತನಿಖೆ ನಡೆಯಬೇಕು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಗ್ರಹಿಸಿದ್ದಾರೆ. ಇದು ಒಂದು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಲಾಭ ಮಾಡಿಕೊಡುವ ಉದ್ದೇಶದ ದೊಡ್ಡ ಹಗರಣ ಎಂದು ಬಿಜೆಪಿ ಮೇಲೆ ಪರೋಕ್ಷವಾಗಿ ಬೆಟ್ಟು ಮಾಡಿದ್ದಾರೆ.
ಈ ಸಂಬಂಧ ದಿಲ್ಲಿ ವಿಧಾನಸಬೆಯ ಒಂದು ದಿನದ ತುರ್ತು ಅಧಿವೇಶನದಲ್ಲಿ ಅವರು ನಿರ್ಣಯ ಮಂಡಿಸಿದರು. ಆಪ್ ಪ್ರಾಬಲ್ಯದ ಸದನದಲ್ಲಿ, ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿ, ಈ ನಿರ್ಧಾರವನ್ನು ವಾಪಸು ಪಡೆಯುವಂತೆ ಕೇಂದ್ರಕ್ಕೆ ಸೂಚಿಸಬೇಕು ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಆಗ್ರಹಿಸಿದೆ.
ಚರ್ಚೆಯಲ್ಲಿ ಪಾಲ್ಗೊಂಡ ಎಎಪಿಯ ಓಕ್ಲಾ ಶಾಸಕ ಅಮಾನತುಲ್ಲಾ ಖಾನ್ ಈ ಚಲಾವಣೆ ರದ್ದತಿ ನಿರ್ಧಾರದಿಂದ ಕುಟುಂಬಗಳು ಎದುರಿಸುತ್ತಿರುವ ಸಂಕಷ್ಟಗಳ ಅರಿವು ಮೋದಿಗಿಲ್ಲ. ಏಕೆಂದರೆ ಅವರಿಗೆ ಪತ್ನಿ ಅಥವಾ ಮಕ್ಕಳಿಲ್ಲ ಎಂದು ಲೇವಡಿ ಮಾಡಿದರು.
ಖಾನ್ ಹೇಳಿಕೆಯನ್ನು ಖಂಡಿಸಿದ ವಿರೋಧ ಪಕ್ಷದ ವಿಜೇಂದ್ರ ಗುಪ್ತ ಅವರು, ಕೇಜ್ರಿವಾಲ್ ವಿರುದ್ಧ ವೈಯಕ್ತಿಕ ಟೀಕೆ ಮಾಡಿದರು. ಇದು ಎಎಪಿ ಸದಸ್ಯರನ್ನು ಕೆರಳಿಸಿತು. ಉದ್ರಿಕ್ತ ಶಾಸಕರು ಸಭಾಧ್ಯಕ್ಷರ ಪೀಠದತ್ತ ಧಾವಿಸಿ ಘೋಷಣೆ ಕೂಗಿದ್ದರಿಂದ ಸದನವನ್ನು ಮುಂದೂಡಬೇಕಾಯಿತು.
ಇದಕ್ಕೂ ಮುನ್ನ ಬ್ಯಾಂಕ್ ಎಟಿಎಂಗಳ ಮುಂದೆ ಹಣಕ್ಕಾಗಿ ಕಾಯುವ ವೇಳೆ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷಗಳ ವೌನ ಆಚರಿಸಿದರು. ಇದನ್ನು ಖಂಡಿಸಿ ಬಿಜೆಪಿ ಶಾಸಕ ಜಗದೀಶ್ ಪ್ರಧಾನ್ ಹಾಗೂ ಗುಪ್ತ ಸಭಾತ್ಯಾಗ ಮಾಡಿದರು.







