ನೋಟು ವಿನಿಮಯಕ್ಕೆ ಬ್ಯಾಂಕ್‌ಗೆ ಬಂದ ಮೋದಿ ತಾಯಿ
ಅಹ್ಮದಾಬಾದ್, ನ.15: ಭ್ರಷ್ಟಾಚಾರದ ವಿರುದ್ಧ ಹೋರಾಡಲು ದೇಶದ ಜನ ಸಂಕಷ್ಟ ಸಹಿಸಿಕೊಳ್ಳಬೇಕು ಎಂದು ಪ್ರಧಾನಿ ಕರೆ ನೀಡಿದ ಮರುದಿನ ನರೇಂದ್ರ ಮೋದಿಯವರ ತಾಯಿ 95 ವರ್ಷದ ಹೀರಾಬೆನ್ ಗುಜರಾತ್‌ನ ಗಾಂಧಿನಗರ ಬ್ಯಾಂಕ್ ಶಾಖೆಗೆ ಆಗಮಿಸಿ, ಚಲಾವಣೆ ರದ್ದಾದ ನೋಟುಗಳನ್ನು ಹೊಸ ನೋಟಿಗೆ ವಿನಿಮಯ ಮಾಡಿಕೊಂಡರು. ಪ್ರಧಾನಿ ಹೇಳಿಕೆ ಹಿನ್ನೆಲೆಯಲ್ಲಿ ಜನ ಬ್ಯಾಂಕ್ ಶಾಖೆ ಹಾಗೂ ಎಟಿಎಂಗಳ ಮುಂದೆ ಉದ್ದುದ್ದ ಸಾಲಿನಲ್ಲಿ ನಿಂತಿದ್ದರೆ, ಪ್ರಧಾನಿ ತಾಯಿ ತಮ್ಮ ನಿವಾಸದ ಪಕ್ಕದ ಖಾಸಗಿ ಬ್ಯಾಂಕಿಗೆ ಗಾಲಿಕುರ್ಚಿಯಲ್ಲಿ ಆಗಮಿಸಿದರು. ಅವರು ತಮ್ಮ ಸರದಿ ಬರುವವರೆಗೂ ಸಾಲಿನಲ್ಲಿ ನಿಂತು 500 ರೂಪಾಯಿ ಮುಖಬೆಲೆಯ 4,500 ರೂಪಾಯಿ ವೌಲ್ಯದ ನೋಟು ವಿನಿಮಯ ಮಾಡಿಕೊಂಡರು.
ಬಳಿಕ ಹೀರಾಬೆನ್ ಹೊಸ 2,000 ರೂಪಾಯಿ ನೋಟಿನೊಂದಿಗೆ ಫೋಟೊಗಳಿಗೆ ಪೋಸ್ ನೀಡಿದರು. ಅವರು ಬ್ಯಾಂಕಿನಿಂದ ಹೊರಬರುತ್ತಿದ್ದಂತೆ ಪತ್ರಕರ್ತರು ಅವರನ್ನು ಸುತ್ತುವರಿದರು. ಕಿರಿಯ ಮಗ ಪಂಕಜ್ ಮೋದಿ ಜೊತೆ ಅವರು ವಾಸಿಸುತ್ತಾರೆ. ಮೋದಿ ಕಳೆದ ಸೆಪ್ಟಂಬರ್ 17ರಂದು ತಾಯಿಯ ಮನೆಗೆ ಭೇಟಿ ನೀಡಿದ್ದರು.
ನಿನ್ನೆ ಉತ್ತರ ಪ್ರದೇಶದಲ್ಲಿ ಭಾರೀ ಜನ ಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಜನರ ಕಷ್ಟದ ಅರಿವು ನನಗಿದೆ. ಆದರೆ ದೀರ್ಘಾ ವಧಿಯ ಒಳ್ಳೆಯದಕ್ಕಾಗಿ ಜನ ಇನ್ನೂ 50 ದಿನ ಬವಣೆ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದರು.
ಇದುವರೆಗೆ ಬ್ಯಾಂಕುಗಳಲ್ಲಿ ಸುಮಾರು 45 ಶತಕೋಟಿ ಡಾಲರ್ ವೌಲ್ಯದ ನೋಟುಗಳು ಬ್ಯಾಂಕ್‌ಗಳಲ್ಲಿ ಮೊದಲ ಐದು ದಿನಗಳಲ್ಲಿ ಠೇವಣಿಯಾಗಿವೆ.
ಪರಿಸ್ಥಿತಿ ಸುಲಲಿತಗೊಳಿಸುವ ಸಲುವಾಗಿ ಸರಕಾರ ನಿನ್ನೆ ವಾರದ ಅವಧಿಯಲ್ಲಿ ಪಡೆಯಬಹುದಾದ ಮೊತ್ತವನ್ನು 24 ಸಾವಿರ ರೂಪಾಯಿಗಳಿಗೆ ಹಾಗೂ ವಿನಿಮಯ ಮೊತ್ತವನ್ನು 4,500 ರೂಪಾಯಿಗೆ ಹೆಚ್ಚಿಸಿದೆ.
..................
ಜಾಗತಿಕ ಆರ್ಥಿಕ ಹಿಂಜರಿತದ ದಿನಗಳಲ್ಲಿ ಭಾರತಕ್ಕೆ ಕಪ್ಪುಹಣ ನೆರವಾಗಿತ್ತು: ಅಖಿಲೇಶ್
ಲಕ್ನೋ,ನ.15: ಆರ್ಥಿಕ ಹಿಂಜರಿತದ ದಿನಗಳಲ್ಲಿ ಕಪ್ಪುಹಣವು ಭಾರತದ ಆರ್ಥಿಕತೆಗೆ ಬಹಳಷ್ಟು ಸಹಾಯ ಮಾಡಿದೆಯೆಂದು ಹೇಳುವ ಮೂಲಕ ಕಪ್ಪುಹಣದ ಬಗ್ಗೆ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ವಿವಾದದ ಕಿಡಿ ಹೊತ್ತಿಸಿದ್ದಾರೆ.
‘‘ಜಾಗತಿಕ ಆರ್ಥಿಕ ಹಿಂಜರಿತದ ದಿನಗಳಲ್ಲಿ ಕಪ್ಪು ಹಣವು ಭಾರತದ ಆರ್ಥಿಕತೆಗೆ ಸಹಕಾರಿಯಾಗಿತ್ತೆಂದು ಹಲವು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮ ಭಾರತಕ್ಕೆ ತಟ್ಟಿರಲಿಲ್ಲ. ಯಾಕೆಂದರೆ ಭಾರತದಲ್ಲಿ ಕಪ್ಪುಹಣದ ಪರ್ಯಾಯ ಆರ್ಥಿಕತೆ ಬಲವಾಗಿತ್ತೆಂದು ತಜ್ಞರು ಅಭಿಪ್ರಾಯಿಸಿದ್ದರು’’ ಎಂದು ಅಖಿಲೇಶ್ ಹೇಳಿದ್ದಾರೆ.
ಲಕ್ನೋದಲ್ಲಿ ಮಂಗಳವಾರ ಇಂಡೊ-ಮ್ಯಾನ್ಮಾರ್- ಥೈಲ್ಯಾಂಡ್ ಮೈತ್ರಿ ಕಾರ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು, ಕಪ್ಪುಹಣವನ್ನು ನಾನು ವಿರೋಧಿಸುತ್ತೇನೆ.ನಾನು ಅದನ್ನು ಬಯಸುವುದಿಲ್ಲ’’ ಎಂದರು.
ಕಪ್ಪುಹಣವನ್ನು ಮಟ್ಟಹಾಕುವ ಉದ್ದೇಶದಿಂದ ಕೇಂದ್ರ ಸರಕಾರವು 1 ಸಾವಿರ ರೂ. ಹಾಗೂ 500 ರೂ. ಮುಖಬೆಲೆಯ ಹಳೆಯ ನೋಟುಗಳನ್ನು ಅಮಾನ್ಯಗೊಳಿಸಿರುವ ಹಿನ್ನೆಲೆಯಲ್ಲಿ ಅಖಿಲೇಶ್ ಈ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.
ಯಾವುದೇ ಸರಕಾರವು ಬಡವರಿಗೆ ತೊಂದರೆ ನೀಡಿದಾಗಲೆಲ್ಲಾ, ಅದಕ್ಕೆ ಜನತೆ ಬಾಗಿಲು ತೋರಿಸಿದ್ದಾರೆ ಎಂದರು. ಈ ಸರಕಾರವು ಜನಸಾಮಾನ್ಯರಿಗೆ ಅಗಾಧವಾದ ನೋವನ್ನುಂಟು ಮಾಡಿದೆಯೆಂದು ಅವರು ಹೇಳಿದ್ದಾರೆ.
ನೋಟುಗಳನ್ನು ಅಮಾನ್ಯಗೊಳಿಸುವುದರಿಂದ ಕಪ್ಪುಹಣವನ್ನು ಮೂಲೋತ್ಪಾಟನೆ ಮಾಡಲು ಸಾಧ್ಯವಿಲ್ಲವೆಂದು ಅಖಿಲೇಶ್ ಹೇಳಿದರು.







