ವಿದೇಶಿ ಬ್ಯಾಂಕುಗಳಲ್ಲಿ ಕಪ್ಪು ಹಣ ಪಟ್ಟಿಯಲ್ಲಿ 415 ಭಾರತೀಯರು
ಹೊಸದಿಲ್ಲಿ, ನ.15: ವಿದೇಶಿ ಬ್ಯಾಂಕ್ ಖಾತೆಗಳಲ್ಲಿ ಅಕ್ರಮವಾಗಿ ಠೇವಣಿ ಮಾಡಿರುವ ಹಣದ ವಿವರಗಳ ಪನಾಮಾ ದಾಖಲೆಗಳು ಬಹಿರಂಗವಾದ ಒಂಬತ್ತು ತಿಂಗಳ ಬಳಿಕ ಈ ಜಾಗತಿಕ ಹಗರಣದ ಬಗ್ಗೆ ನಡೆಯುತ್ತಿರುವ ತನಿಖೆ ಚುರುಕುಗೊಂಡಿದೆ. ಇದುವರೆಗೆ 415 ಭಾರತೀಯರ ಹೆಸರು ಕೂಡಾ ಪರಿಶೀಲನೆಗೆ ಬಂದಿದೆ.
ಭಾರತ ಈಗಾಗಲೇ ಪನಾಮಾ ದಾಖಲೆಗಳಲ್ಲಿ ಹೆಸರಿಸಿರುವ 13 ದೇಶಗಳ ವ್ಯಾಪ್ತಿಯಲ್ಲಿ ಭಾರತೀಯರು ಹೊಂದಿರುವ 198 ಸಾಗರೋತ್ತರ ಕಂಪೆನಿಗಳ ಬಗ್ಗೆ ಪರಾಮರ್ಶೆ ಆರಂಭಿಸಿದೆ. ಇದರಲ್ಲಿ ಬ್ರಿಟಿಷ್ ವರ್ಜಿನ್ ದ್ವೀಪ, ಬಹಮಾಸ್, ಲಕ್ಸಂಬರ್ಗ್, ಜೆರ್ಸಿ, ಸಿಯಾಚೆಲ್ಸ್, ಸ್ವಿಝರ್‌ಲ್ಯಾಂಡ್ ಹಾಗೂ ಸೈಪ್ರಸ್ ಸೇರಿದೆ. ಈ ದೇಶಗಳ ಜೊತೆ ಮಾಡಿಕೊಂಡ ತೆರಿಗೆ ಒಪ್ಪಂದಕ್ಕೆ ಅನುಗುಣವಾಗಿ ಈ ಕ್ರಮ ಕೈಗೊಂಡಿದೆ.
ಇದರ ಜೊತೆಗೆ ವಿದೇಶಿ ತೆರಿಗೆ ಹಾಗೂ ತೆರಿಗೆ ಸಂಶೋಧನಾ ವಿಭಾಗಗಳ ಮೂಲಕ ಕಳೆದ ಜುಲೈವರೆಗೆ 91 ದೇಶಗಳಿಗೆ ಮಾಹಿತಿ ರವಾನಿಸಿದ್ದು, ಇದರ ಅನ್ವಯ 297 ಭಾರತೀಯರ ಬಗ್ಗೆ ತನಿಖೆಗೆ ಮುಂದಾಗಿದೆ. ಬಹುತೇಕ ಪ್ರಕರಣಗಳಲ್ಲಿ ಹೊಸದಿಲ್ಲಿ, ಮುಂಬೈ ಹಾಗೂ ಹೈದರಾಬಾದ್ ಆದಾಯ ತೆರಿಗೆ ತನಿಖಾ ಘಟಕಗಳು ನೋಟಿಸ್ ರವಾನಿಸಿವೆ.
ಪನಾಮಾ ದಾಖಲೆ ಬಹಿರಂಗದ ಬಳಿಕ ಅಂದರೆ ಕಳೆದ ಏಪ್ರಿಲ್‌ನಲ್ಲಿ ಸರಕಾರ ನೇಮಕ ಮಾಡಿದ್ದ ವಿಶೇಷ ಕಾರ್ಯಪಡೆ ಈಗಾಗಲೇ ವಿಶೇಷ ತನಿಖಾ ತಂಡಕ್ಕೆ ಈ ಮಾಹಿತಿಯನ್ನು ರವಾನಿಸಿದೆ. ಸಿಬಿಡಿಟಿ ಅಧ್ಯಕ್ಷರ ನೇತೃತ್ವದ ವಿಶೇಷ ಕಾರ್ಯಪಡೆ ಹೆಸರಿಸಿರುವ 415 ಹೆಸರುಗಳ ಪೈಕಿ 71 ಮಂದಿ ಅನಿವಾಸಿ ಭಾರತೀಯರು ಸೇರಿದ್ದಾರೆ. ಈ ಪೈಕಿ 184 ಮಂದಿ ಸಾಗರೋತ್ತರ ಕಂಪೆನಿ ಆರಂಭಿಸಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.





