ಭ್ರಷ್ಟಾಚಾರ ರಹಿತ ಚುನಾವಣೆಗೆ ಪ್ರಧಾನಿ ಮೋದಿ ಐಡಿಯಾ ಏನು ನೋಡಿ

ಹೊಸದಿಲ್ಲಿ, ನ.16: 500 ಹಾಗೂ 1000 ರೂಪಾಯಿ ನೋಟು ಚಲಾವಣೆ ರದ್ದತಿ ಬಗ್ಗೆ ದೇಶಾದ್ಯಂತ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದರೆ, ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ ತಡೆಗೆ ಹೊಸ ಪರಿಕಲ್ಪನೆ ಮುಂದಿಟ್ಟಿದ್ದಾರೆ. ಲೋಕಸಭೆ ಹಾಗೂ ವಿಧಾನಸಭೆಗೆ ಜತೆಗೆ ಚುನಾವಣೆ ನಡೆಸುವುದು ಮತ್ತು ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ಸರಕಾರವೇ ಭರಿಸುವುದರಿಂದ ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ ಹೆಚ್ಚಿಸಬಹುದು ಮತ್ತು ಭ್ರಷ್ಟಾಚಾರ ನಿಯಂತ್ರಿಸಬಹುದು ಎಂದು ಸಲಹೆ ಮಾಡಿದ್ದಾರೆ.
ರಾಜಕೀಯ ವರ್ಗದವರು ನೋಟು ಚಲಾವಣೆ ರದ್ದತಿ ನಿರ್ಧಾರದ ಬಗ್ಗೆ ಸಮಾಜಕ್ಕೆ ಆಗುವ ಒಳಿತಿನ ಬಗ್ಗೆ ಜನರಿಗೆ ಧನಾತ್ಮಕ ಸಂದೇಶವನ್ನು ರವಾನಿಸಬೇಕೇ ವಿನಃ ಋಣಾತ್ಮಕ ಸಂದೇಶವನ್ನಲ್ಲ ಎಂದು ಮಂಗಳವಾರ ಸರ್ವಪಕ್ಷ ಸಭೆಯಲ್ಲಿ ಮೋದಿ ಅಭಿಪ್ರಾಯಪಟ್ಟರು.
ಮೋದಿಯವರ ಅಭಿಪ್ರಾಯವನ್ನು ತೃಣಮೂಲ ಕಾಂಗ್ರೆಸ್ ಮುಖಂಡ ಸುದೀಪ್ ಬಂಡೋಪಾಧ್ಯಾಯ ಬೆಂಬಲಿಸಿದರು. ಈ ವಿಷಯದ ಬಗ್ಗೆ ಸಮಗ್ರ ಚರ್ಚೆಯಾಗಲಿ ಎನ್ನುವುದು ನನ್ನ ನಿಲುವು ಎಂದು ಮೋದಿ ಸ್ಪಷ್ಟಪಡಿಸಿದರು. ರಾಜಕಾರಣಿಗಳು ಕಪ್ಪುಹಣ ಮತ್ತು ಅಪಾರದರ್ಶಕ ವ್ಯವಸ್ಥೆಯ ಜತೆ ನಂಟು ಹೊಂದಿರುವ ಹಿನ್ನೆಲೆಯಲ್ಲಿ ಮೋದಿ, ಭ್ರಷ್ಟಾಚಾರ ನಿಗ್ರಹಕ್ಕೆ ಹೊಸ ಸಲಹೆಯನ್ನು ಮುಂದಿಟ್ಟಿದ್ದಾರೆ.





