ಏಮ್ಸ್ ನಲ್ಲಿ ಸಚಿವೆ ಸುಷ್ಮಾ ಸ್ವರಾಜ್ ಗೆ ಕಿಡ್ನಿ ಕಸಿಗೆ ಸಿದ್ಧತೆ

ಹೊಸದಿಲ್ಲಿ, ನ. 16: ಕಿಡ್ನಿ ವೈಫಲ್ಯದ ಸಮಸ್ಯೆಯಿಂದ ಬಳಲುತ್ತಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಎಐಐಎಂಎಸ್) ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಕಿಡ್ನಿ ಕಸಿಗೆ ಆಸ್ಪತ್ರೆಯಲ್ಲಿ ತಯಾರಿ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಎಂಡೋಕ್ರಾನಿಕಲ್ ಪರೀಕ್ಷೆಗಳಿಗಾಗಿ ನವೆಂಬರ್ 7 ರಂದು ಸುಷ್ಮಾ ಸ್ವರಾಜ್ ಎಐಐಎಂಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಡಯಾಲಿಸಿಸ್ ನಡೆಸಲಾಗುತ್ತಿದೆ ಎಂದು ಸುಷ್ಮಾ ಸ್ವರಾಜ್ ಟ್ವಿಟರ‍್ ನಲ್ಲಿ ಮಾಹಿತಿ ನೀಡಿದ್ದಾರೆ. "ಕಿಡ್ನಿ ವೈಫಲ್ಯದಿಂದಾಗಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವೆ. ಸದ್ಯ ಡಯಾಲಿಸ್ ಚಿಕಿತ್ಸೆ ನೀಡಲಾಗುತ್ತಿದೆ. ಕಿಡ್ನಿ ಕಸಿಗೆ ಏಮ್ಸ್ ವೈದ್ಯರು ತಯಾರಿ ನಡೆಸುತ್ತಿದ್ದಾರೆ. ನನಗೆ ಭಗವಾನ್ ಶ್ರೀಕೃಷ್ಣ ನ ಶ್ರೀರಕ್ಷೆ ಇದೆ '' ಎಂದು ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಸುಷ್ಮಾ ಸ್ವರಾಜ್ ಅವರ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಿದ್ದು ತೀವ್ರ ಡಯಾಬೆಟಿಕ್ ಸಮಸ್ಯೆ ಎದುರಿಸುತ್ತಿದ್ದಾರೆ.
ಶ್ವಾಸಕೋಶದ ತೊಂದರೆಯಿಂದ ಸುಷ್ಮಾ ಸ್ವರಾಜ್ ಕಳೆದ ಎಪ್ರಿಲ್ ನಲ್ಲಿ ಎಐಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.





