ನೋಟು ರದ್ದತಿ ಗಡಿಬಿಡಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮನ್ನಾ ಮಾಡಿದ ದೊಡ್ಡ ಕುಳಗಳ ಸಾಲ ಎಷ್ಟು ಸಾವಿರ ಕೋಟಿ ?

ಹೊಸದಿಲ್ಲಿ, ನ.16 : ದೊಡ್ಡ ಕುಳಗಳ ಪಡೆದುಕೊಂಡ ಸಾವಿರಾರು ಕೋಟಿ ರೂಪಾಯಿ ಮೊತ್ತದ ಸಾಲವನ್ನು ಹಿಂದಕ್ಕೆ ಪಡೆಯುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಯತ್ನಗಳೆಲ್ಲವೂ ವ್ಯರ್ಥವಾದ ನಂತರ ಇದೀಗ ಬ್ಯಾಂಕು ತನ್ನಿಂದ ಸಾಲ ಪಡೆದು ಹಿಂದಿರುಗಿಸದ 100 ಉದ್ದೇಶಪೂರ್ವಕ ಸುಸ್ಥಿದಾರರ ಪೈಕಿ 60 ಕ್ಕೂ ಹೆಚ್ಚು ಮಂದಿಯ 7,016 ಕೋಟಿ ರೂಪಾಯಿ ಮೊತ್ತದ ಸಾಲವನ್ನು ಮನ್ನಾ ಮಾಡಿದೆಯೆಂಬ ಮಾಹಿತಿಯನ್ನು ಡಿಎನ್ಎ ವಿಶೇಷ ವರದಿಯೊಂದು ನೀಡಿದೆ. 500 ಹಾಗೂ 1000 ರೂ. ನೋಟುಗಳ ರದ್ದತಿ ಗಡಿಬಿಡಿಯಲ್ಲಿ ಈ ಸುದ್ದಿಯ ಸದ್ದಂತೂ ಅಡಗಿಯೇ ಹೋಗಿತ್ತೆನ್ನಬಹುದು.
ಸುಮಾರು 63 ಖಾತೆದಾರರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದ್ದರೆ, 63 ಖಾತೆಗಳ ಸಾಲವನ್ನು ಭಾಗಶಃ ಮನ್ನಾ ಮಾಡಲಾಗಿದೆ. ಆರು ಖಾತೆಗಳನ್ನು ಎನ್ ಪಿ ಎ (ನಾನ್ ಪರ್ಫಾಮಿಂಗ್ ಅಸೆಟ್ಸ್) ಎಂದು ಗುರುತಿಸಲಾಗಿದೆ ಎಂದು ಡಿ ಎನ್ ಎ ಗೆ ಸಿಕ್ಕಿದ ಕೆಲ ದಾಖಲೆಗಳಿಂದ ಬಹಿರಂಗ ಗೊಂಡಿದೆ. ಆದರೆ ಈ ಸಾಲ ಮನ್ನಾ ಯಾವಾಗ ನಡೆದಿದೆಯೆಂಬುದರ ಬಗ್ಗೆ ದಾಖಲೆಗಳಲ್ಲಿ ಏನೂ ಬರೆದಿಲ್ಲ.
ದೇಶದ ಅತಿ ದೊಡ್ಡ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಾನು ಮನ್ನಾ ಮಾಡಿದ ಸಾಲಗಳನ್ನು `ವಿಷಕಾರಿ ಸಾಲ'ಗಳಿಗೆಂದೇ ತಾನು ವಿಶೇಷವಾಗಿ ತಯಾರಿಸಿದ ಅಡ್ವಾನ್ಸ್ ಅಂಡರ್ ಕಲೆಕ್ಷನ್ ಅಕೌಂಟ್ (ಎಯುಸಿಎ) ಗೆ ಸೇರಿಸಿದೆ.
ಈ ಬಗೆಗಿನ ಮಾಹಿತಿಯು ಸರಕಾರ ತಾನು ಕಪ್ಪು ಹಣ ಹೊಂದಿರುವವರನ್ನು ಟಾರ್ಗೆಟ್ ಮಾಡುತ್ತಿದ್ದೇನೆಂದು ಹೇಳಿ 500 ಹಾಗೂ 1000 ರೂ. ನೋಟುಗಳನ್ನು ರದ್ದು ಪಡಿಸಿ ಸಾರ್ವಜನಿಕರು ಗಂಟೆಗಟ್ಟಲೆ ಬ್ಯಾಂಕುಗಳು ಹಾಗೂ ಎಟಿಎಂ ಗಳ ಹೊರಗೆ ಸರತಿ ನಿಲ್ಲುವಂತೆ ಮಾಡಿದ ಒಂದು ವಾರದಲ್ಲಿಯೇ ಬೆಳಕಿಗೆ ಬಂದಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ ಕ್ರಮದಿಂದಾಗಿ ವಿಜಯ್ ಮಲ್ಯರ ಕಿಂಗ್ ಫಿಶರ್ ಏರ್ ಲೈನ್ಸ್ ನ ಸಾಲ ಮೊತ್ತವಾದ ರೂ 1,201 ಕೋಟಿ ಹಾಗೂ ಇತರ 62 ಮಂದಿ ಸಾಲ ಪಡೆದವರ ಸಾಲದ ಮೊತ್ತ ಬ್ಯಾಂಕಿನ ಬ್ಯಾಲೆನ್ಸ್ ಶೀಟಿನಲ್ಲಿ ಕಂಡು ಬರುವುದಿಲ್ಲ.
ಕಿಂಗ್ ಫಿಶರ್ ಏರ್ ಲೈನ್ಸ್ ಹೊರತಾಗಿ ಕೆ ಎಸ್ ಆಯಿಲ್ (ರೂ 596 ಕೋಟಿ), ಸೂರ್ಯ ಫಾರ್ಮಾಸುಟಿಕಲ್ಸ್ (ರೂ 526 ಕೋಟಿ), ಜಿಇಟಿ ಪವರ್ (ರೂ 400 ಕೋಟಿ) ಹಾಗೂ ಸಾಯಿ ಇನ್ಫೋ ಸಿಸ್ಟಮ್ (ರೂ 376 ಕೋಟಿ) ಸಾಲ ಮನ್ನಾ ಮಾಡಲ್ಪಟ್ಟ ಕಂಪೆನಿಗಳ ಪಟ್ಟಿಯಲ್ಲಿ ಸೇರಿವೆ.
ಡಿ ಎನ್ ಎ ವರದಿಗಾರ ನೋಡಿದ ಬ್ಯಾಂಕಿನ ಆಂತರಿಕ ವರದಿಯಲ್ಲಿ ಮೇಲೆ ತಿಳಿಸಿದ ಸಂಸ್ಥೆಗಳ ಸಾಲ ಖಾತೆಗಳ ಸಹಿತ ಇನ್ನೂ ಹಲವು ಸಂಸ್ಥೆಗಳ ಖಾತೆಗಳನ್ನು ಎಯುಸಿಎ ಗೆ ಸೇರಿಸಲಾಗಿದೆ.
ಈ ವಿಚಾರವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಡಿ ಎನ್ ಎ ಕಳುಹಿಸಿದ ಹಲವು ಇಮೇಲ್ ಗಳಿಗೆ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಅಂತೆಯೇ ಸಾಲ ಮನ್ನಾ ಮಾಡಲ್ಪಟ್ಟ ಕಂಪೆನಿಗಳನ್ನು ಸಂಪರ್ಕಿಲು ನಡೆಸಿದ ಯತ್ನಗಳೂ ವಿಫಲವಾಗಿವೆ.
ಕಿಂಗ್ ಫಿಶರ್ ಏರ್ ಲೈನ್ಸ್ ಸಂಸ್ಥೆಯು 17 ಬ್ಯಾಂಕುಗಳಿಂದ ಪಡೆದ ಒಟ್ಟು ಸಾಲದ ಮೊತ್ತ ರೂ 6,963 ಕೋಟಿಯಾಗಿದ್ದರೆ ಅದು ಎಸ್ ಬಿ ಐ ನಿಂದ ಪಡೆದ ಸಾಲ ರೂ 1,201 ಕೋಟಿಯಾಗಿದೆ. ಎಸ್ ಬಿ ಐ ನಿಂದ ಪಡೆದ ಸಾಲ ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ.
ಅತ್ತ ಕೆ ಎಸ್ ಆಯಿಲ್ ಸಂಸ್ಥೆ ಕಲಶ್ ಹಾಗೂ ಡಬಲ್ ಶೇರ್ ಎಂಬ ಬ್ರ್ಯಾಂಡಿನ ಸಾಸಿವೆ ಎಣ್ಣೆ ಉತ್ಪಾದಿಸುತ್ತಿದ್ದು ತನ್ನ ಮುಖ್ಯ ಉದ್ಯಮದ ಬದಲು ಇಂಡೋನೇಷ್ಯ, ಮಲೇಷ್ಯ ಮುಂತಾದೆಡೆ ಪ್ಲಾಂಟೇಶನ್ ಗಳಲ್ಲಿ ಹೂಡಿಕೆ ಮಾಡಿ ಸಾಕಷ್ಟು ಲಾಭ ಗಳಿಸಲು ವಿಫಲವಾಗಿತ್ತು.
ಸೂರ್ಯ ಫಾರ್ಮಾಸೂಟಿಕಲ್ಸ್ ಸಂಸ್ಥೆಯನ್ನು 2013 ರಲ್ಲಿ ಉದ್ದೇಶಪೂರ್ವಕ ಸುಸ್ಥಿದಾರನೆಂದು ಘೋಷಿಸಲಾಗಿದ್ದು ಕಂಪೆನಿ ವಂಚನೆ ಆರೋಪಗಳನ್ನೂ ಎದುರಿಸುತ್ತಿದೆ.
ಅಜಯ್ ಕುಮಾರ್ ವಿಷ್ಣೋವಿ ಅವರ ಜಿಇಟಿ ಪವರ್ ಸಂಸ್ಥೆಯನ್ನು ಉದ್ದೇಶಪೂರ್ವಕ ಸುಸ್ಥಿದಾರನೆಂದು ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಘೋಷಿಸಲಾಗಿದ್ದು ಕಂಪೆನಿಯ ಆಡಳಿತದಲ್ಲಿ ಅವ್ಯವಹಾರದಿಂದ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದವು.
ಅತ್ತ ಸಾಯಿ ಇನ್ಫೋ ಸಂಸ್ಥೆಯನ್ನು ಕೂಡ ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಉದ್ದೇಶಪೂರ್ವಕ ಸುಸ್ಥಿದಾರನೆಂದು ಘೋಷಿಸಲಾಗಿದ್ದು ಕಂಪೆನಿಯ ಮುಖ್ಯ ಪ್ರವರ್ತಕ ಸುನಿಲ್ ಕಕ್ಕಡ್ ದೇಶ ತ್ಯಜಿಸಿದ್ದರೂ ಆತನನ್ನು ಮತ್ತೆ ಭಾರತಕ್ಕೆ ಕರೆತಂದು ಬಂಧಿಸಲಾಗಿತ್ತು. ಪ್ರಸಕ್ತ ಆತ ಜಾಮೀನು ಪಡೆದು ಹೊರ ಬಂದಿದ್ದಾರೆ.







