ಮುಖ್ಯಮಂತ್ರಿ ಗಳಿಂದ ಹಾಲು ಉತ್ಪಾದಕರ ಬೃಹತ್ ಸಮಾವೇಶ ಉದ್ಘಾಟನೆ, ಕನಕಪುರ ಡೇರಿ ಸಂಕೀರ್ಣ ಶಿಲಾನ್ಯಾಸ
ರಾಮನಗರದಲ್ಲಿ 63ನೇ ಅಖಿಲ ಭಾರತ ಸಹಕಾರ ಸಪ್ತಾಹ

ರಾಮನಗರ, ನ.16: ಪ್ರಸ್ತುತ ಲೀಟರ್ ಹಾಲಿಗೆ ನಾಲ್ಕು ರೂಪಾಯಿ ಸಬ್ಸಿಡಿ ನೀಡಲಾಗುತ್ತಿದೆ. ಬರಗಾಲದ ಹಿನ್ನೆಲೆಯಲ್ಲಿ ರಾಜ್ಯದ ಹಾಲು ಉತ್ಪಾದಕರಿಗೆ ನೀಡುತ್ತಿರುವ ಸಬ್ಸಿಡಿಯನ್ನು ಒಂದು ರೂಪಾಯಿ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ರಾಮನಗರದಲ್ಲಿ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು ನಮ್ಮದು ರೈತರ ಪರವಾದ ಸರಕಾರ. ಅವರ ಕಷ್ಟಗಳಿಗೆ ನಾವು ಸ್ಪಂದಿಸುತ್ತೇವೆ. ಸಬ್ಸಿಡಿ ಹೆಚ್ವಿಸಬೇಕೆಂಬ ಬೇಡಿಕೆಗೆ ಸ್ಥಳದಲ್ಲಿಯೇ ಸರಕಾರ ಸ್ಪಂದಿಸಿದೆ ಎಂದು ಸಿಎಂ ಹೇಳಿದರು.
ಸಬ್ಸಿಡಿ ಹೆಚ್ಚಳದಿಂದ ನಿತ್ಯ 3.50 ಕೋಟಿ ರೂ. ರೈತರ ಬ್ಯಾಂಕ್ ಖಾತೆಗಳಿಗೆ ತಲುಪುತ್ತವೆ. ಹಾಲು ಉತ್ಪಾದಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಎಷ್ಟೇ ಕಷ್ಟ ಆದರೂ ಸಬ್ಸಿಡಿ ನಿಲ್ಲಿಸುವುದಿಲ್ಲ. ಇದರಿಂದ ಹಾಲು ಉತ್ಪಾದನೆ ನಿತ್ಯ ಒಂದು ಕೋಟಿ ಲೀಟರ್ ತಲುಪಲಿವೆ ಎಂದು ಸಿಎಂ ತಿಳಿಸಿದರು.
ಹಾಲು ಉತ್ಪಾದನೆಯಲ್ಲಿ ನಾವು ಗುಜರಾತ್ ಗಿಂತ ಮುಂದೆ ಹೋಗಬೇಕು. ರೇಷ್ಮೆ ಉತ್ಪಾದನೆಯಲ್ಲೂ ನಾವು ಮುಂದೆ ಇದ್ದೇವೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ನೀಡುವ ಪ್ರೋತ್ಸಾಹಧನ ಯೋಜನೆಯನ್ನೂ ಮುಂದುವರಿಸುವುದಾಗಿ ಮುಖ್ಯಮಂತ್ರಿ ಗಳು ಹೇಳಿದ್ದಾರೆ.
ಸಹಕಾರ ಚಳವಳಿಗೆ ಬುನಾದಿ ಹಾಕಿದವರು ಜವಾಹರಲಾಲ್ ನೆಹರೂ. ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸುವ ಶಕ್ತಿ ಸಹಕಾರ ಚಳವಳಿಗೆ ಇದೆ. ನಾನು ಈ ಹಿಂದೆ ಪಶು ಸಂಗೋಪನಾ ಸಚಿವನಾಗಿದ್ದೆ. ಕೆಎಂಎಫ್ ಅಧ್ಯಕ್ಷನಾಗಿಯೂ ಕೆಲಸ ಮಾಡಿದ್ದೇನೆ.
ರಾಜ್ಯದಲ್ಲಿ ಪ್ರಸ್ತುತ 14 ಜಿಲ್ಲಾ ಹಾಲು ಒಕ್ಕೂಟಗಳಿವೆ. ಹಾಲು ಸಂಗ್ರಹಿಸುವ ಮತ್ತು ಮಾರಾಟ ಮಾಡುವ ಅಧಿಕಾರ ರೈತರಿಗೆ ಇರಬೇಕು ಎಂದು ತೀರ್ಮಾನ ಮಾಡಿದ್ದು ನಾನು ಪಶು ಸಂಗೋಪನೆ ಸಚಿವನಾಗಿದ್ದಾಗಲೇ. ರೇಷ್ಮೆ ಸಚಿವನಾಗಿಯೂ ನಾನು ಕೆಲಸ ಮಾಡಿದ್ದೇನೆ.
ಹೀಗಾಗಿ ರೇಷ್ಮೆ ಮತ್ತು ಪಶು ಸಂಗೋಪನೆ ನನಗೆ ಪ್ರಿಯವಾದ ಇಲಾಖೆಗಳು. ರೈತರಲ್ಲಿ ಆರ್ಥಿಕ ವಾಗಿ ಶಕ್ತಿ ತುಂಬುವ ಇಲಾಖೆಗಳು ಇವು. ರಾಜ್ಯದಲ್ಲಿ ಪ್ರತಿದಿನ 70-72 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತವೆ. ಹಾಲು ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲೇ ಎರಡನೆ ಸ್ಥಾನದಲ್ಲಿದೆ ಎಂದರು.
ನೋಟುಗಳ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಜನ ಸಾಮಾನ್ಯರಿಗೆ ಭಾರಿ ತೊಂದರೆ ಆಗಿದೆ. ಜನರು ಬ್ಯಾಂಕ್ ಗಳ ಮುಂದೆ ಸಾಲುಗಟ್ಟಿ ನಿಲ್ಲುವಂತಾಗಿದೆ. ರೈತರು, ಬಡವರು, ಕೂಲಿ ಕಾರ್ಮಿಕರು ಪರದಾಡುವಂತಾಗಿದೆ. ಪೂರ್ವ ಸಿದ್ಧತೆಯ ಕೊರತೆ ಇದಕ್ಕೆ ಕಾರಣ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆದಿದ್ದೇನೆ. ಭಾರತೀಯ ರಿಸರ್ವ್ ಬ್ಯಾಂಕ್ ಮುಖ್ಯಸ್ಥರಿಗೂ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.
ನುಡಿದಂತೆ ನಡೆಯುವ ಸರಕಾರ: ನುಡಿದಂತೆ ನಡೆಯುವ ಸರಕಾರ ನಮ್ಮದು. ಕೊಟ್ಟ ಮಾತಿಗೆ ನಮ್ಮ ಸರಕಾರ ಬದ್ಧ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಪೈಕಿ 120 ಈಡೇರಿಸಿದ್ದೇವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಚಿವರಾದ ಡಿ.ಕೆ.ಶಿವಕುಮಾರ್, ಮಹದೇವಪ್ರಸಾದ್, ಎ.ಮಂಜು, ಸಂಸದ ಡಿ.ಕೆ.ಸುರೇಶ್, ಶಾಸಕರಾದ ಬಾಲಕೃಷ್ಣ, ಯೋಗೇಶ್ವರ್ ಮತ್ತಿತರು ಉಪಸ್ಥಿತರಿದ್ದರು.







