ದಲಿತ ಯುವಕನಿಗೆ 48 ಗಂಟೆ ಕಸ್ಟಡಿ: ತನಿಖೆಗೆ ಮಾನವಹಕ್ಕು ಆಯೋಗ ಸೂಚನೆ

ಕಣ್ಣೂರ್ ,ನ. 16:ಕಸ್ಟಡಿಗೆ ಪಡೆದ ದಲಿತಯುವಕನನ್ನು ಬಂಧನವನ್ನು ದಾಖಲಿಸದೆ 48 ಗಂಟೆಗಳಿಗೂ ಅಧಿಕ ಸಮಯ ಠಾಣೆಯಲ್ಲಿ ತಡೆದಿರಿಸಿದ ಘಟನೆಯನ್ನು ತನಿಖೆ ನಡೆಸಬೇಕೆಂದು ಮಾನವ ಹಕ್ಕು ಆಯೋಗ ಸೂಚನೆ ನೀಡಿದೆ. ಪಾಪ್ಪಿನಶ್ಶೇರಿ ತುರುತ್ತಿ ಪನಯನ್ ಸತಿ ಸಲ್ಲಿಸಿದ ದೂರಿನ ಪ್ರಕಾರ ಆಯೋಗ ತನಿಖೆನಡೆಸಲು ಕಣ್ಣೂರ್ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದೆ. ಡಿಸೆಂಬರ್ ಮೂರರೊಳಗೆ ವರದಿ ಸಲ್ಲಿಸಬೇಕೆಂದು ಆಯೋಗದ ಅಧ್ಯಕ್ಷ ಪಿ. ಮೋಹನ್‌ದಾಸ್ ಸೂಚಿಸಿದ್ದಾರೆಂದು ವರದಿಯಾಗಿದೆ.
ಕಳೆದ ಶನಿವಾರ ಸತಿ ಎಂಬವರ ಪುತ್ರ ಸಂಜೋಶ್‌ನನ್ನು ವಳಪಟ್ಟಣಂ ಪೊಲೀಸರು ಮನೆಯಿಂದ ಕರೆದುಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿ ಕೇವಲ ಮಹಿಳೆಯರು ಮಾತ್ರ ಇದ್ದರು. ಇವರೊಂದಿಗೆ ಪೊಲೀಸರು ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಸತಿ ದೂರಿನಲ್ಲಿ ತಿಳಿಸಿದ್ದಾರೆ. ಶನಿವಾರ ಬೆಳಗ್ಗೆ ಕಸ್ಟಡಿಗೆ ಪಡೆದ ಪುತ್ರನನ್ನು ಸೋಮವಾರ ಮಧ್ಯಾಹ್ನ ಬಿಡುಗಡೆಗೊಳಿಸಿದ್ದಾರೆ. ಆದರೆ ತಾವು ಬಂಧಿಸಿದ್ದನ್ನು ಪೊಲೀಸರು ದಾಖಲಿಸಿಲ್ಲ ಎಂದು ಸತಿ ದೂರಿನಲ್ಲಿ ವಿವರಿಸಿದ್ದಾರೆಂದು ವರದಿ ತಿಳಿಸಿದೆ.





