‘ಜನರಾಜ್ಯೋತ್ಸವ’ ಪ್ರಶಸ್ತಿ!
ಜೇನು ಕುರುಬರ ಸೋಮಣ್ಣನಿಗೆ ಜನರೇ ನೀಡಿದರು

ಕಳೆದ ಶನಿವಾರ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ನೂರಾರು ಮಂದಿಯ ಸಮ್ಮುಖದಲ್ಲಿ ಹೆಗ್ಗಡದೇವನಕೋಟೆಯ ಮೊಟ್ಟ ಹಾಡಿ ಬುಡಕಟ್ಟು ಕಾಲನಿಯಲ್ಲಿ ನಡೆದ ಸಮಾರಂಭದಲ್ಲಿ ಸೋಮಣ್ಣ ಅವರ ಜೀವನ ಹಾಗೂ ಸಂಘರ್ಷವನ್ನು ಬಿಂಬಿಸಲಾಯಿತು. ಖ್ಯಾತ ಲೇಖಕ ಹಾಗೂ ಬುದ್ಧಿಜೀವಿ ದೇವನೂರ ಮಹಾದೇವ ಅವರು, ಖ್ಯಾತ ಬುಡಕಟ್ಟು ಹೋರಾಟಗಾರನಿಗೆ ‘ಜನರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಿದರು.
ಹೆಗ್ಗಡೆದೇವನಕೋಟೆಯ ದಟ್ಟ ಅರಣ್ಯದಲ್ಲಿ ವಾಸವಾಗಿದ್ದ ಆ ಬುಡಕಟ್ಟು ಬಾಲಕನ ಹೆಸರು ಸೋಮಣ್ಣ. ಬಿದ್ದ ಮರಸೇಬು ಈತನಿಗೆ ದೈನಂದಿನ ಉಪಹಾರ. ಹೀಗಿರುವಾಗ ಒಂದು ದಿನ ಬೆಳಗಿನ ಉಪಹಾರಕ್ಕೆ ಮರಸೇಬು ಈತನಿಗೆ ಸಿಗಲೇ ಇಲ್ಲ. ಈತನಿಗಿಂತ ಮೊದಲೇ ಯಾರೋ ಹೆಕ್ಕಿಕೊಂಡು ಹೋಗುತ್ತಿರುವುದು ಈತನ ಗಮನಕ್ಕೆ ಬಂತು. ತನ್ನ ಹೊಟ್ಟೆ ಮೇಲೆ ಹೊಡೆಯುತ್ತಿರುವವರು ಯಾರು ಎಂದು ಪತ್ತೆ ಮಾಡಬೇಕು ಎಂದು ರಾತ್ರಿಯಿಡೀ ಮರದ ಹಿಂದೆಯೇ ಅವಿತು ಕುಳಿತ. ಒಬ್ಬ ವ್ಯಕ್ತಿ ಮರದಿಂದ ಬಿದ್ದ ಮರಸೇಬನ್ನು ಹೆಕ್ಕಿಕೊಂಡು ಅದನ್ನು ಪಕ್ಕದ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಒಯ್ಯುವುದನ್ನು ಗಮನಿಸಿದ. ಈ ಬಡಹುಡುಗನಿಗೆ ಪೌಷ್ಟಿಕ ಉಪಹಾರವಾಗಿದ್ದ ಈ ಕಾಡುಹಣ್ಣು ಮತ್ತೊಬ್ಬನಿಗೆ ವಾಣಿಜ್ಯ ಉತ್ಪನ್ನವಾಯಿತು.
ಇದೀಗ ಸೋಮಣ್ಣನ ವಯಸ್ಸು ಅರುವತ್ತು. ಅವರಿಗೆ ಇದೀಗ ಅಂಥದ್ದೇ ಮತ್ತೊಂದು ಅನುಭವ ಆಯಿತು. ಅಕ್ಟೋಬರ್ ಕೊನೆಯ ವಾರ, ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ಅಂತಿಮಪಡಿಸುವ ಹಂತದಲ್ಲಿದ್ದಾಗ. ಸೋಮಣ್ಣ ಅವರ ಹೆಸರೂ ಇದರಲ್ಲಿ ಸೇರಿತ್ತು. ಸರಕಾರಿ ಅಧಿಕಾರಿಗಳು ಅವರ ವೈಯಕ್ತಿಕ ಮಾಹಿತಿಗಳನ್ನೂ ಸಂಗ್ರಹಿಸಿದರು. ಬುಡಕಟ್ಟು ಜನರ ಹಕ್ಕು ರಕ್ಷಿಸಲು ನಡೆಸಿದ ಹೋರಾಟವನ್ನು ಗುರುತಿಸಿ, ಸೋಮಣ್ಣ ಅವರನ್ನು ಗೌರವಿಸಲು ನಿರ್ಧರಿಸಲಾಗಿತ್ತು. ಇದು ಅವರ ಗೆಳೆಯರು ಹಾಗೂ ಹಿತೈಷಿಗಳ ಪುಳಕಕ್ಕೆ ಕಾರಣವಾಗಿತ್ತು. ಆದರೆ ಅಂತಿಮಪಟ್ಟಿ ಪ್ರಕಟವಾದಾಗ ಅವರ ಹೆಸರು ಕಾಣೆಯಾಗಿತ್ತು. ಇದು ಹಲವರನ್ನು ಕೆರಳಿಸಿತ್ತು. ನಿಜವಾಗಿ ಪ್ರಶಸ್ತಿಗೆ ಅರ್ಹರಾಗಿದ್ದ ಸೋಮಣ್ಣ ಅವರಿಗೆ ಪಟ್ಟಭದ್ರ ಹಿತಾಸಕ್ತಿಗಳು ವಂಚಿಸಿದರು ಎಂಬ ಭಾವನೆ ಬಲವಾಯಿತು. ಸೋಮಣ್ಣ ಅವರ ಮರಸೇಬಿನ ಕಥೆಯಂತೆ.
ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಬುಡಕಟ್ಟು ಅಧ್ಯಯನ ವಿಭಾಗದ ಸಹ ಪ್ರೊಫೆಸರ್ ಡಾ.ಎ.ಎಸ್.ಪ್ರಭಾಕರ್, ಸುದೀರ್ಘ ಕಾಲದವರೆಗೆ ಸೋಮಣ್ಣ ಜತೆ ಕಾರ್ಯ ನಿರ್ವಹಿಸಿದವರು. ಇವರು ಸೋಮಣ್ಣ ಪರವಾಗಿ ಆಂದೋಲನ ಆರಂಭಿಸಿದರು. ತಕ್ಷಣ ನೂರಾರು ಮಂದಿ ಹೋರಾಟಗಾರರು, ಸಾಹಿತಿಗಳು, ಶಿಕ್ಷಣತಜ್ಞರು ಇದಕ್ಕೆ ಕೈಜೋಡಿಸಿದರು. ಸರಕಾರದ ಇಂಥ ಭಾವಸೂಕ್ಷ್ಮರಹಿತ ನಿರ್ಧಾರವನ್ನು ಖಂಡಿಸುವುದು ಮಾತ್ರವಲ್ಲದೇ, ಏನಾದರೂ ವಿಶಿಷ್ಟವಾದದ್ದು ಮಾಡಬೇಕು ಎಂಬ ದೃಢ ನಿರ್ಧಾರ ಕೈಗೊಂಡರು. ಜನರಾಜ್ಯೋತ್ಸವ ಎಂಬ ವಿಶಿಷ್ಟ ಪ್ರಶಸ್ತಿಯ ಮೂಲಕ ಅವರನ್ನು ಗೌರವಿಸಲು ನಿರ್ಧರಿಸಿದರು.
ಸೋಮಣ್ಣ ಮೂಲತಃ ತೀರಾ ಬಡಕುಟುಂಬದಿಂದ ಬಂದವರು. ನಾಲ್ಕನೇ ತರಗತಿ ಮುಗಿಸಿದ ತಕ್ಷಣ, ಅವರ ಪೋಷಕರು ಬಾಲಕನನ್ನು ಸ್ಥಳೀಯ ಜಮೀನ್ದಾರರ ಬಳಿ ಜೀತ ಕೆಲಸಕ್ಕೆ ಬಿಟ್ಟರು. 1976ರಲ್ಲಿ ಜೀತಕಾರ್ಮಿಕ ವ್ಯವಸ್ಥೆ (ನಿಷೇಧ) ಕಾಯ್ದೆ ಜಾರಿಗೆ ಬಂದಾಗ, ಸೋಮಣ್ಣ ಮುಕ್ತಿ ಪಡೆದರು. ಆಗ ಸೋಮಣ್ಣಗೆ 19 ವರ್ಷ. ತನಗೆ ವೈಯಕ್ತಿಕವಾಗಿ ಮುಕ್ತಿ ಸಿಕ್ಕಿದರೂ, ಬುಡಕಟ್ಟು ಜನಾಂಗದ ಅಸಂಖ್ಯಾತ ಮಂದಿ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವುದು ಅವರಿಗೆ ಮನವರಿಕೆಯಾಯಿತು. 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದಾಗ, ತಮ್ಮ ಸುತ್ತಮುತ್ತಲಿನ ನೂರಾರು ಬುಡಕಟ್ಟು ಕಾಲನಿಗಳು ಸ್ಥಳಾಂತರಗೊಂಡಿದ್ದವು. 1974ರಲ್ಲಿ ಕಬಿನಿ ಅಣೆಕಟ್ಟು ನಿರ್ಮಾಣ ಆರಂಭವಾದಾಗ, ದೊಡ್ಡ ಪ್ರಮಾಣದಲ್ಲಿ ಅರಣ್ಯಭೂಮಿ ನಾಶವಾದದ್ದನ್ನೂ ಸೋಮಣ್ಣ ನೋಡಿದ್ದರು. ಇದರಿಂದ ಕೇವಲ ನೈಸರ್ಗಿಕ ಅರಣ್ಯ ಮಾತ್ರ ನಾಶವಾಗುವುದಲ್ಲ; ಬದಲಾಗಿ ಬುಡಕಟ್ಟು ಜನರ ಜೀವನ, ಸಂಸ್ಕೃತಿ ಹಾಗೂ ಜ್ಞಾನವೂ ನಾಶವಾಗುತ್ತದೆ ಎನ್ನುವುದನ್ನು ಇಡೀ ಸಮುದಾಯಕ್ಕೆ ಸೋಮಣ್ಣ ಮನವರಿಕೆ ಮಾಡಿದರು. ಜೇನುಕುರುಬರು, ಕಾಡಕುರುಬರು, ಯರವರು ಹಾಗೂ ಇತರ ಬುಡಕಟ್ಟು ಸಮುದಾಯದವರು ತಮ್ಮ ಹಕ್ಕುಗಳಿಗಾಗಿ ಹೋರಾಡಲು ಮನವೊಲಿಸಿದರು.
ಭೂರಹಿತ ಬುಡಕಟ್ಟು ಜನರ ಪರವಾಗಿ ಸೋಮಣ್ಣ ಒಂದು ದಶಕಕ್ಕೂ ಹೆಚ್ಚಿನ ಅವಧಿಯ ಹೋರಾಟ ನಡೆಸಿದರು. ಅಂತಿಮವಾಗಿ ಸರಕಾರ ಈ ಸಮುದಾಯಗಳಿಗೆ ಆರು ಸಾವಿರ ಎಕರೆ ಭೂಮಿ ವಿತರಿಸಿತು. ಕಬಿನಿ ಯೋಜನೆಯಿಂದ ನಿರಾಶ್ರಿತರಾದ ಬುಡಕಟ್ಟು ಜನಾಂಗಗಳ ಪುನರ್ವಸತಿ ಸೂಕ್ತವಾಗಿ ಆಗದೇ ಇರುವ ಕಾರಣದಿಂದ, ಬುಡಕಟ್ಟು ಜನರು ನೀರಿನಿಂದ ಹೊರತೆಗೆದ ಮೀನಿನಂತೆ ಒದ್ದಾಡುತ್ತಿರುವುದು ಕೂಡಾ ಅವರಿಗೆ ಮನವರಿಕೆಯಾಯಿತು. ಇದಕ್ಕಾಗಿ ಇವರು ಅವಿರತವಾಗಿ ಹೋರಾಡಿದ್ದರ ಪರಿಣಾಮ, ಅಂತಿಮವಾಗಿ ಜನರ ಪುನರ್ವಸತಿಗೆ ಸರಕಾರ ವ್ಯವಸ್ಥೆ ಮಾಡಿತು. ಅದುವರೆಗೂ ಕಾಗದಕ್ಕಷ್ಟೇ ಸೀಮಿತವಾಗಿದ್ದ ಪುನರ್ವಸತಿ, ಜನರ ಅಗತ್ಯತೆಗೆ ಅನುಗುಣವಾಗಿ ತಳಮಟ್ಟದಲ್ಲಿ ಅನುಷ್ಠಾನಕ್ಕೆ ಬಂತು.
ಆ ಬಳಿಕ ಕೆಲ ಸ್ವಯಂಸೇವಾಸಂಸ್ಥೆಗಳ ಜತೆ ಸೇರಿ ಸೋಮಣ್ಣ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾರಣದಿಂದ ಸ್ಥಳಾಂತರ ಗೊಂಡವರ ಪರವಾಗಿ ಹೋರಾಟ ಕೈಗೆತ್ತಿಕೊಂಡರು. ಸೋಮಣ್ಣ ಹಾಗೂ ಇತರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಸ್ಥಳಾಂತರಗೊಂಡ ಬುಡಕಟ್ಟು ಜನಾಂಗದವರ ಪುನರ್ವಸತಿ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲು ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ.ಮುಜಾಫರ್ ಅಸ್ಸಾದಿ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿತು.
ಎರಡು ವರ್ಷಗಳ ಹಿಂದೆ ಈ ತ್ರಿಸದಸ್ಯ ಸಮಿತಿ 130 ಪುಟಗಳ ಮಧ್ಯಂತರ ವರದಿ ಸಲ್ಲಿಸಿತು. ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನವನದಿಂದಾಗಿ ಸ್ಥಳಾಂತರಗೊಂಡ ಬಹುತೇಕ ಬುಡಕಟ್ಟು ಜನರು ಮೈಸೂರು ಹಾಗೂ ಕೊಡಗು ಜಿಲ್ಲೆಗಳ ಮೂರು ತಾಲೂಕುಗಳಲ್ಲಿ ಹರಿದು ಹಂಚಿಹೋಗಿದ್ದಾರೆ. ಇವರು ಭೂರಹಿತ ಕಾರ್ಮಿಕರಾಗಿ, ಕಡುಬಡತನದ ಬದುಕು ಸವೆಸುತ್ತಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಈ ಸಮಿತಿಯ 36 ಶಿಫಾರಸ್ಸುಗಳ ಬಗ್ಗೆ ಸರಕಾರ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ.
ನಾಗರಹೊಳೆ ಅರಣ್ಯದ ಮಧ್ಯಭಾಗದಲ್ಲಿ ಪಂಚತಾರಾ ಹೋಟೆಲ್ ನಿರ್ಮಿಸುವ ತಾಜ್ ಸಮೂಹದ ಯೋಜನೆಗೆ ತಡೆ ತಂದದ್ದು ಸೋಮಣ್ಣ ಇವರ ಇನ್ನೊಂದು ಮಹತ್ವದ ಸಾಧನೆ. ತಲೆತಲಾಂತರಗಳಿಂದ ಕಾಡುಮೇಡುಗಳಲ್ಲೇ ವಾಸಿಸುತ್ತಾ ಬಂದ ಬುಡಕಟ್ಟು ಜನರು ರಾಷ್ಟ್ರೀಯ ಉದ್ಯಾನವನ ಆವರಣ ತೊರೆಯಬೇಕು ಎಂದಾದರೆ, ಶ್ರೀಮಂತರಿಗೆ ಕೂಡಾ ಕಾಡಿನ ಮಧ್ಯದಲ್ಲಿ ವಾಸಿಸುವ ಹಕ್ಕು ಇಲ್ಲ ಎಂಬ ಕಾನೂನು ಹೋರಾಟವನ್ನು ತಾತ್ವಿಕ ಅಂತ್ಯಕ್ಕೆ ತಲುಪಿಸುವಲ್ಲಿ ಸೋಮಣ್ಣ ಯಶಸ್ವಿಯಾದರು.
ಇಂಥ ಅರ್ಹ ವ್ಯಕ್ತಿಗೆ ಸಲ್ಲಬೇಕಿದ್ದ ರಾಜ್ಯೋತ್ಸವ ಗೌರವ ಕೊನೆ ಕ್ಷಣದಲ್ಲಿ ಕೈ ತಪ್ಪಿದಾಗಲೂ ಬೇಸರಗೊಳ್ಳದೆ, ಸ್ನೇಹಿತರು ಹಾಗೂ ಹಿತೈಷಿಗಳ ಆಕ್ರೋಶವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದರು. ಕಳೆದ ಶನಿವಾರ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ನೂರಾರು ಮಂದಿಯ ಸಮ್ಮುಖದಲ್ಲಿ ಹೆಗ್ಗಡದೇವನಕೋಟೆಯ ಮೊಟ್ಟ ಹಾಡಿ ಬುಡಕಟ್ಟು ಕಾಲನಿಯಲ್ಲಿ ನಡೆದ ಸಮಾರಂಭದಲ್ಲಿ ಸೋಮಣ್ಣ ಅವರ ಜೀವನ ಹಾಗೂ ಸಂಘರ್ಷವನ್ನು ಬಿಂಬಿಸಲಾಯಿತು. ಖ್ಯಾತ ಲೇಖಕ ಹಾಗೂ ಬುದ್ಧಿಜೀವಿ ದೇವನೂರ ಮಹಾದೇವ ಅವರು, ಖ್ಯಾತ ಬುಡಕಟ್ಟು ಹೋರಾಟಗಾರನಿಗೆ ‘ಜನರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಿದರು.
ರಾಜ್ಯೋತ್ಸವ ಪ್ರಶಸ್ತಿ ಒಂದು ಲಕ್ಷ ರೂಪಾಯಿ ನಗದು ಬಹುಮಾನ ಒಳಗೊಂಡಿ ರುವ ಹಿನ್ನೆಲೆಯಲ್ಲಿ ಸೋಮಣ್ಣ ಅವರಿಗೆ ಜನರಾಜ್ಯೋತ್ಸವ ಪ್ರಶಸ್ತಿ ಜತೆಗೆ ಒಂದು ಲಕ್ಷದ ಒಂದು ರೂಪಾಯಿ ಯನ್ನು ನೀಡಲಾಯಿತು. ಈ ಇಡೀ ಮೊತ್ತವನ್ನು ಅವರ ಹಿತೈಷಿ ಗಳಿಂದಲೇ ಸಂಗ್ರಹಿಸಲಾಗಿತ್ತು. ಈ ಮೂಲಕ ಜನರಾಜ್ಯೋತ್ಸವ ಪ್ರಶಸ್ತಿ ಸಮುದಾಯ ದೇಣಿಗೆಯ ಪ್ರಪ್ರಥಮ ಪ್ರಶಸ್ತಿ ಎನಿಸಿಕೊಂಡಿತು.
ಪಾದರಸದಂಥ ವ್ಯಕ್ತಿತ್ವದ ಸೋಮಣ್ಣ, ಅರಣ್ಯದ ಲಯಕ್ಕೆ ಅನುಗುಣವಾಗಿಯೇ ಬದುಕು ಸವೆಸುತ್ತಾ ಬಂದವರು. ಅವರು ಇಂದಿಗೂ ಬುಡಕಟ್ಟು ಸರಳತೆಯ ಸಾಕಾರ ಮೂರ್ತಿ. ಅರಣ್ಯ ಸಂಪತ್ತು, ಬುಡಕಟ್ಟು ಜೀವನಶೈಲಿ ಹಾಗೂ ವಿವಿಧ ಆಯುರ್ವೇದ ಗಿಡಗಳ ಔಷಧೀಯ ಗುಣಗಳ ಬಗೆಗಿನ ಜ್ಞಾನದ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲವರು. ಗಿಡಮೂಲಿಕೆ ಹಾಗೂ ಇತರ ಅರಣ್ಯ ಉತ್ಪತ್ತಿ ಬಗ್ಗೆಯೂ ಅಪಾರ ಜ್ಞಾನ ಹೊಂದಿದ್ದಾರೆ. ಅಂಥ ಮಹಾನ್ ವ್ಯಕ್ತಿಗೆ ಅಧಿಕೃತ ಸರಕಾರಿ ಗೌರವ ತಪ್ಪಿಹೋಗಿದೆ. ಸರಕಾರ ನೀಡುವ ಪ್ರಶಸ್ತಿಗಳ ಹಿಂದೆ ದೊಡ್ಡ ರಾಜಕೀಯ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಇದು ಒಳ್ಳೆಯ ನಿದರ್ಶನ.







