ಅಜ್ಜಿಯೆಡೆಗೆ ಮದುವೆ ರಾಯಭಾರ

ಧಾರಾವಾಹಿ-42
‘‘ಯಾಕಮ್ಮ ಮಾತಾಡ್ತಾ ಇಲ್ಲ. ನಿನಗೆ ಇಷ್ಟವಿಲ್ಲವಾ?’’
‘‘ನನಗೆ ಇಷ್ಟ ಅಪ್ಪಾ. ಆ ಹುಡುಗಿ ನನಗೆ ತುಂಬಾ ಇಷ್ಟ. ನಿನಗೆ ಹೇಳಿ ಮಾಡಿಸಿದ ಹೆಣ್ಣು ಅವಳು. ಆದರೆ ಅಜ್ಜಿ ಒಪ್ಪಬೇಕಲ್ಲ. ಮತ್ತೆ ಅವಳ ತಾಯಿ?’’
ಅಜ್ಜಿಯನ್ನು ನೀನು ಹೇಳಿ ಒಪ್ಪಿಸಬೇಕಮ್ಮಾ. ಅವಳಮ್ಮನ ಹತ್ತಿರ ನಾನು ಮಾತಾಡ್ತೇನೆ.
ನಾನು ಹೇಳ್ತೇನಪ್ಪ... ಆದರೆ ಆ ತಾಯಿ ಮಗಳು ಈ ಜನ್ಮದಲ್ಲಿ ಒಂದಾಗಲಿಕ್ಕಿಲ್ಲ. ಅವಳ ತಾಯಿ ಮತ್ತೆ ಈ ಮನೆಗೆ ಬರಲಿಕ್ಕಿಲ್ಲ. ನನಗಿದು ನಡೆಯುವ ಬಗ್ಗೆ ಒಂದು ಚೂರೂ ನಂಬಿಕೆಯಿಲ್ಲ.
ನಾನು 2-3 ವಾರ ಬಿಟ್ಟು ಬರ್ತೇನೆ. ನೀನು ಅಜ್ಜಿಯ ಹತ್ತಿರ ಕೇಳಿ ನೋಡಮ್ಮ. ಅಜ್ಜಿ ಒಪ್ಪಿದ ಮೇಲೆ ಮತ್ತೆ ಅವಳ ಅಮ್ಮನಲ್ಲಿ ಮಾತನಾಡುತ್ತೇನೆ.
ಐಸು ತಲೆಯಾಡಿಸಿದಳು.
ನಾಸರ್ ಅಜ್ಜಿಯ ಕೋಣೆಗೆ ಬಂದ. ಅಜ್ಜಿ ಬಾಯಿ ಅಗಲಿಸಿ ಅಂಗಾತ ಮಲಗಿದ್ದರು. ಅವರ ಕಣ್ಣುಗಳು ತೆರೆದಿತ್ತು. ಎಚ್ಚರದಲ್ಲಿದ್ದಂತಿರಲಿಲ್ಲ.
‘‘ಅಜ್ಜೀ’’ ಆತ ಅವರ ತಲೆ ಪಕ್ಕ ಕುಳಿತು ಕರೆದ.
ಅಜ್ಜಿಯಲ್ಲಿ ಯಾವುದೇ ಚಲನೆ ಇಲ್ಲ.
‘‘ಅಜ್ಜೀ’’ ಆತ ಅವರ ಕೈಯನ್ನು ತನ್ನ ಕೈಗೆ ತೆಗೆದುಕೊಂಡು ತಲೆ ಸವರಿದ.
ಅಜ್ಜಿಯ ಕಣ್ಣು ಹೊರಳಿತು. ಅವನನ್ನೇ ದಿಟ್ಟಿಸಿ ನೋಡಿತು.
‘‘ಅಜ್ಜೀ, ನಾನು ಹೋಗ್ತೇನೆ.’’
ಅಜ್ಜಿ ಈಗಲೂ ಮಿಸುಕಾಡಲಿಲ್ಲ. ಅವನನ್ನೇ ನೋಡುತ್ತಿದ್ದರು.
‘‘ಅಜ್ಜೀ’’ ಆತ ಅವರ ಭುಜ ಹಿಡಿದು ಅಲುಗಾಡಿಸಿದ. ಇಲ್ಲ, ಅಜ್ಜಿಗೆ ಎಚ್ಚರವಾಗಲಿಲ್ಲ.
‘‘ಅಜ್ಜೀ, ನಾನು ಹೋಗ್ತೇನೆ. 2-3 ವಾರ ಬಿಟ್ಟು ಬರ್ತೇನೆ.’’ ಅಜ್ಜಿಯ ಕಿವಿಯ ಬಳಿ ಮುಖವಿಟ್ಟು ಹೇಳಿದ.
ಅಜ್ಜಿಯ ಬಾಯಿಯಿಂದ ‘ಹೂಂ..’ ಎಂಬ ಶಬ್ದ ಹೊರಬಂತು ಅಷ್ಟೆ. ಆತ ಅಜ್ಜಿಯ ಕೆನ್ನೆಗೆ ಕೆನ್ನೆ ತಾಗಿಸಿದ. ಹಣೆಗೆ ಮುತ್ತಿಟ್ಟ. ಅವರ ಕೈಯನ್ನು ಹಿಡಿದು ಮುಖಕ್ಕೆ ಒತ್ತಿಕೊಂಡ. ಚುಂಬಿಸಿದ. ಅದಾಗಲೇ ಅವನ ಕಣ್ಣುಗಳಲ್ಲಿ ಹನಿ ಉದುರತೊಡಗಿತ್ತು. ಮತ್ತೆ ಅಲ್ಲಿ ನಿಲ್ಲಲಾಗದೆ ಕೋಣೆಯಿಂದ ಹೊರಬಂದವನು ಅಮ್ಮನಲ್ಲಿ ಹೇಳಿ ಹೊರಟು ಹೋಗಿದ್ದ.
ನಾಲ್ಕೈದು ದಿನ ಕಳೆಯುವುದರೊಳಗೆ ಅಜ್ಜಿ ಸರಿಯಾದರು. ಕೋಲೂರಿ ನಡೆಯತೊಡಗಿದರು. ಮಾತನಾಡತೊಡಗಿದರು. ತಿನ್ನ ತೊಡಗಿದರು. ನಮಾಝ್ ಮಾಡತೊಡಗಿದರು.
ಅಜ್ಜಿ ಒಳ್ಳೆಯ ಮೂಡ್‌ನಲ್ಲಿದ್ದ ಸಂದರ್ಭ ನೋಡಿ ಐಸು ಅವರ ಪಕ್ಕ ಹೋಗಿ ಕುಳಿತಳು. ಅವಳ ಹೃದಯ ಜೋರಾಗಿ ಬಡಿದು ಕೊಳ್ಳತೊಡಗಿತ್ತು. ಅವಳು ಅಜ್ಜಿಯ ಕೈಯನ್ನು ತನ್ನ ಕೈಗೆ ತೆಗೆದುಕೊಂಡು ‘ಅಜ್ಜೀ’ ಎಂದು ಕರೆದಳು.
ಅಜ್ಜಿ ‘ಏನು?’ ಎಂಬಂತೆ ಮುಖ ಹೊರಳಿಸಿ ಅವಳನ್ನೇ ನೋಡಿದರು.
ಐಸುಳ ನಾಲಗೆ ಒಣಗತೊಡಗಿತ್ತು. ಅವಳ ಕೈ ಕಾಲುಗಳು ಸಣ್ಣಗೆ ಕಂಪಿಸುತ್ತಿದ್ದವು.
‘‘ಅಜ್ಜಿ, ನಾನೊಂದು ಮಾತು ಕೇಳ್ತೇನೆ. ನೀವು ಕೋಪಿಸಿಕೊಳ್ಳಬಾರದು’’ ಐಸುಳ ಬಾಯಿಯಿಂದ ಬಿಡಿ ಬಿಡಿಯಾಗಿ ಶಬ್ದಗಳು ಉದುರಿದವು.
ಅಜ್ಜಿ ಮಾತನಾಡಲಿಲ್ಲ.
‘‘ಅಜ್ಜಿ, ನಾನು ಹೇಳುವುದು ಕೇಳಿಸ್ತಾ?’’
‘‘ಹೂಂ, ಕೇಳಿಸ್ತು ಹೇಳು’’ ಅಜ್ಜಿ ತನ್ನಷ್ಟಕ್ಕೆ ಎಂಬಂತೆ ಹೇಳಿದರು.
‘‘ನೀವು ಕೋಪ ಮಾಡಿಕೊಳ್ಳಬಾರದು.’’
‘‘ಕೋಪ ಬಂದರೆ ಏನು ಮಾಡಬೇಕು?’’
ಐಸುಳ ಬಾಯಿ ಕಟ್ಟಿತು. ಅವರು ಹಾಗೆಯೇ, ಒಮ್ಮಿಮ್ಮೆ ಎದೆಗೆ ಒದ್ದಂತೆ ಮಾತನಾಡುತ್ತಾರೆ.
‘‘ಕೋಪ ಮಾಡಿಕೊಳ್ಳಬಾರದು. ಕೋಪ ಬಂದರೆ ನನಗೆ ಬೇಜಾರಾಗುತ್ತದೆ.’’
‘‘ಎಂಥದದು ಅಂಥ ವಿಷಯ?’’ ಈಗಲೂ ಅಜ್ಜಿಯ ಮಾತಲ್ಲಿ ಕುತೂಹಲವಿರಲಿಲ್ಲ.
‘‘ನಾಸರ್‌ಗೆ ತಾಹಿರಾಳನ್ನು ಮದುವೆಯಾಗ ಬೇಕೂಂತ ಆಸೆಯಂತೆ. ನಿಮ್ಮಲ್ಲಿ ಕೇಳಲಿಕ್ಕೆ ಹೇಳಿದ್ದಾನೆ.’’
ಅಜ್ಜಿ ಮೌನವಾಗಿ ಕುಳಿತುಬಿಟ್ಟರು. ಉತ್ತರಿಸಲಿಲ್ಲ.
‘‘ಅಜ್ಜಿ, ನಾನು ಹೇಳಿದ್ದು ಕೇಳಿಸ್ತಾ?’’ ಅಜ್ಜಿಯ ಮೌನ ಸಹಿಸಲಾಗದೆ ಐಸು ಮತ್ತೆ ಕೇಳಿದಳು.
‘‘ಹೂಂ, ಕೇಳಿಸ್ತು.’’
‘‘ಮತ್ತೆ, ನೀವು ಮಾತಾಡ್ತಾ ಇಲ್ಲ.’’
‘‘ನಿನಗೆ ಹಾಗೆ ಯಾರು ಹೇಳಿದ್ದು.’’
‘‘ನಾಸರ್’’
‘‘ಏನು ಹೇಳಿದ’’
‘‘ಅಜ್ಜಿ ಒಪ್ಪಿದರೆ ನಾನು ತಾಹಿರಾಳನ್ನು ಮದುವೆಯಾಗುತ್ತೇನೆ’’ ಎಂದ.
‘‘ಅದಕ್ಕೆ ನೀನೇನು ಹೇಳಿದೆ.’’
‘‘ಅಜ್ಜಿಯಲ್ಲಿ ಕೇಳಿ ಹೇಳುತ್ತೇನೆ’’ ಎಂದೆ.
‘‘ಅದಕ್ಕೆ ಅವನೇನು ಹೇಳಿದ.’’
‘‘2-3 ವಾರ ಬಿಟ್ಟು ಬರ್ತೇನೆ. ಅಜ್ಜಿಯಲ್ಲಿ ಕೇಳು’’ ಎಂದ. ‘‘ಈಗ ನೀನೇನು ಹೇಳುತ್ತೀ’’
‘‘ನಾನೇನೂ ಹೇಳುವುದಿಲ್ಲ. ಎಲ್ಲ ಅಜ್ಜಿ ಹೇಳಬೇಕು.’’
‘‘ಈಗ ನಾನೇನು ಹೇಳಬೇಕು.’’
‘‘ಒಪ್ಪಿಗೆ ಎಂದರೆ ಒಪ್ಪಿಗೇಂತ ಹೇಳಬೇಕು. ಬೇಡ ಎಂದರೆ ಬೇಡಾಂತ ಹೇಳಬೇಕು.’’
ಅಜ್ಜಿಯ ಪ್ರಶ್ನೆಗಳಿಂದ ಐಸುಗೆ ಕೋಪ ಬಂದಿತ್ತು.
‘‘ನಾನು ಬೇಡ ಎಂದರೆ ಏನು ಮಾಡ್ತಿ’’
‘‘ಬೇಡ ಎಂದರೆ ಬೇಡ’’
‘‘ನಾನು ಒಪ್ಪಿಗೆ ಎಂದರೆ ನಿನಗೆ ಖುಷಿಯಾಗುತ್ತಾ?’’
‘‘................’’
‘‘ಯಾಕೆ ಮಾತಾಡ್ತಾ ಇಲ್ಲ. ನಿನಗೆ ಒಪ್ಪಿಗೇಂತ ಹೇಳಲಿಕ್ಕೆ ಇಷ್ಟೆಲ್ಲ ಮಾತು ಅಲ್ಲವಾ?’’
‘‘ಹಾಗಲ್ಲ ಅಜ್ಜೀ’’
‘‘ಮತ್ತೆ ಹೇಗೆ?’’
‘‘ನನಗೆ ಒಪ್ಪಿಗೆ ಇದ್ದರೂ ಅಜ್ಜಿ ಬೇಡ ಎಂದರೆ ಬೇಡ. ನನಗೆ ಒಪ್ಪಿಗೆ ಇಲ್ಲದಿದ್ದರೂ ಅಜ್ಜಿ ಬೇಕು ಎಂದರೆ ಬೇಕು.’’
‘‘ಓ.. ಹಾಗೆ ಅಲ್ಲವಾ? ನಾನು ಒಪ್ಪಿದರೆ ಮಾತ್ರ ಮದುವೆ.’’
‘‘ಹೌದಜ್ಜಿ, ನಿಮ್ಮಿಷ್ಟ ಮೀರಿ ನಾನಾಗಲಿ, ನಾಸರ್ ಆಗಲಿ ಎಂದೂ ಹೋಗುವುದಿಲ್ಲ.’’
‘‘ತಾಹಿರಾ ಒಪ್ಪಿದ್ದಾಳಾ?’’
‘‘ಗೊತ್ತಿಲ್ಲ’’
‘‘ಅವಳನ್ನು ನಾಸರ್ ಕೇಳಿದ್ದಾನಾ?’’
‘‘ಗೊತ್ತಿಲ್ಲ’’
‘‘ನೀನು ಕೇಳಿದ್ದಿಯಾ?’’
‘‘ಇಲ್ಲ’’
‘‘ಮದುವೆಯಾಗುವುದು ಅವಳು, ಅವಳಲ್ಲಿ ಕೇಳದೆ ನನ್ನಲ್ಲಿ ಕೇಳ್ತಾ ಇದ್ದಿಯಲ್ಲ.’’
‘‘ಹೌದು. ನೀವು ಒಪ್ಪಿದರೆ ಅವಳಲ್ಲಿ ಕೇಳುವುದು.’’
‘‘ಅವಳಲ್ಲಿ ಯಾರು ಕೇಳುವುದು.’’
‘‘ನಾನೇ ಕೇಳುತ್ತೇನೆ.’’
‘‘ಓ... ಹಾಗೆ ಅಲ್ಲವಾ ವಿಷಯ. ಹಾಗಾದರೆ ನಿನಗೆ ಒಪ್ಪಿಗೇಂತ ಆಯಿತು. ಕಳ್ಳಿ ಈಗ ಸಿಕ್ಕಿ ಬಿದ್ದಳು’’ ಅಜ್ಜಿಯ ಮುಖ ಅರಳಿತು.
ಐಸು ನಾಚಿದವಳಂತೆ ಅಜ್ಜಿಯನ್ನು ತಬ್ಬಿಕೊಂಡಳು.
‘‘ತಾಹಿರಾ ಬರಲಿ. ಯಾವುದಕ್ಕೂ ಮೊದಲು ಅವಳಲ್ಲಿ ಕೇಳು. ಅವಳು ಒಪ್ಪಿದರೆ ಮತ್ತೆ ಯೋಚನೆ ಮಾಡುವ. ಈ ಲೋಕದಲ್ಲಿ ಯಾವುದೂ ನಾವೆಣಿಸಿದಂತೆ ಆಗುವುದಿಲ್ಲ. ಆಗು ವುದೆಲ್ಲವೂ ಯಾರು ತಡೆದರೂ ಆಗಿಯೇ ಆಗುತ್ತೆ. ಆಗದೇ ಇರುವುದು ನಾವೆಷ್ಟೇ ತಲೆ ಕಾಲು ಹೊಡೆದುಕೊಂಡರೂ ಅದು ಆಗುವುದೇ ಇಲ್ಲ. ನೋಡೋಣ ಏನಾಗುತ್ತೇಂತ’’ ಅಜ್ಜಿ ಸ್ವಲ್ಪ ಹೊತ್ತು ಯೋಚಿಸುವಂತೆ ಸುಮ್ಮನೆ ಕುಳಿತವರು ಮತ್ತೆ ಕೇಳಿದರು.
‘‘ತಾಹಿರಾ ಯಾವಾಗ ಬರ್ತಾಳೆ?’’
‘‘ಗೊತ್ತಿಲ್ಲ’’
‘‘ನಾಸರ್ ಯಾವಾಗ ಬರ್ತಾನೆ?’’
‘‘2-3 ವಾರ ಬಿಟ್ಟು ಬರ್ತೇನೆ ಎಂದು ಹೇಳಿದ್ದಾನೆ.’’
ಅಜ್ಜಿ ಮತ್ತೆ ಮೌನವಾದರು.
ಅಜ್ಜಿಯ ಮಾತುಗಳು ಐಸುಗೆ ತುಂಬಾ ಇಷ್ಟವಾ ಗಿತ್ತು. ಅವಳು ಮತ್ತೆ ಆ ವಿಷಯದಲ್ಲಿ ಏನೂ ಕೇಳಲಿಲ್ಲ.
ದಿನ ಕಳೆಯುತ್ತಿದ್ದಂತೆಯೇ ಅಜ್ಜಿ ಗೆಲುವಾಗ ತೊಡಗಿ ದರು. ಅವರು ದಿನಕ್ಕೆ ಒಂದು ಹತ್ತು ಸಲವಾದರೂ ‘‘ತಾಹಿರಾ ಯಾವಾಗ ಬರ್ತಾಳೆ’’-‘‘ನಾಸರ್ ಯಾವಾಗ ಬರ್ತಾನೆ’’ ಎಂದು ಕೇಳುತ್ತಿದ್ದರು.
ಐಸು ‘ಗೊತ್ತಿಲ್ಲ’ ಎಂದಾಗ ಅವರ ಮುಖದ ತುಂಬಾ ನಿರಾಶೆ ಕವಿಯುತ್ತಿತ್ತು.
2-3 ವಾರಗಳಲ್ಲಿ ಬರ್ತೇನೆ ಎಂದು ಹೋಗಿದ್ದ ನಾಸರ್ ತಿಂಗಳು ಕಳೆದ ಮೇಲೆ ಒಂದು ದಿನ ಪ್ರತ್ಯಕ್ಷನಾಗಿದ್ದ.
‘‘ನಾಸರ್ ಬಂದಿದ್ದಾನೆ’’ ಅಜ್ಜಿಗೆ ಬೆಳಗ್ಗಿನ ತಿಂಡಿ ಕೊಡುತ್ತಾ ಐಸು ಹೇಳಿದಳು.
‘‘ಎಲ್ಲಿದ್ದಾನೆ?’’
‘‘ಮಲಗಿದ್ದಾನೆ.’’
‘‘ಎದ್ದ ಕೂಡಲೇ ನನ್ನ ಬಳಿ ಕರೆದುಕೊಂಡು ಬಾ.’’
‘‘ಯಾಕಜ್ಜಿ.’’
‘‘ಮದುವೆ ಮಾಡ್ಲಿಕ್ಕೆ’’ ಅಜ್ಜಿ ಐಸುಳ ಮುಖ ನೋಡಿ ಭುಜ ಕುಣಿಸಿ ನಕ್ಕರು.
‘‘ಅಜ್ಜಿ ಮದುವೆಗಾಗಿಯೇ ಕಾಯುವಂತಿದೆ.’’
‘‘ಹೌದು. ನನಗೆ ಅವನ ಮದುವೆ ನೋಡಬೇಕು.’’
‘‘ಆಯಿತು. ಹಾಗಾದರೆ ಬೇಗ ಮಾಡಿ ಬಿಡುವ’’ ಐಸು ನಕ್ಕಳು.
‘‘ಅವಳು ಯಾವಾಗ ಬರ್ತಾಳೆ.’’
‘‘ಯಾರು?’’
‘‘ತಾಹಿರಾ’’
‘‘ಗೊತ್ತಿಲ್ಲ.’’
‘‘ಅವಳು ಬಾರದೆ ಮಾತನಾಡುವುದು ಹೇಗೆ?’’
‘‘ಬರಬಹುದು, ನೋಡೋಣ.’’
ಅಜ್ಜಿ ತಿಂಡಿ ಮುಗಿಸಿ ಕೋಣೆಗೆ ಹೋದರು.
ಐಸು ಮಗನನ್ನು ಎಬ್ಬಿಸಿ, ತಿಂಡಿ ಕೊಟ್ಟು ತಾನು ಅಜ್ಜಿ ಜೊತೆ ಮಾತನಾಡಿದ್ದ ವಿಷಯವೆಲ್ಲ ತಿಳಿಸಿದಳು. ಮತ್ತೆ ಅವನನ್ನು ಕರೆದುಕೊಂಡು ಅಜ್ಜಿ ಕೋಣೆಗೆ ನಡೆದಳು.
ಅಜ್ಜಿಯ ಹಾಸಿಗೆಯಲ್ಲಿ ಅಜ್ಜಿಯ ಎಡ-ಬಲ ತಾಯಿ-ಮಗ ಇಬ್ಬರೂ ಕುಳಿತರು.
ಅಜ್ಜಿ ಅವರಿಬ್ಬರನ್ನೂ ಪಿಳಿಪಿಳಿ ನೋಡಿದರು. ಮಾತನಾಡಲಿಲ್ಲ.
‘‘ಅಜ್ಜಿ ನಾಸರ್ ಬಂದಿದ್ದಾನೆ’’ ಐಸು ಹೇಳಿದಳು.
‘‘................’’
‘‘ಅಜ್ಜಿ ನನ್ನನ್ನು ಕರೆದಿರಂತೆ’’ ನಾಸರ್ ಅವರ ಭುಜ ಹಿಡಿದು ಕೇಳಿದ.
‘‘ಕರೆದೆನಾ? ಇಲ್ವಲ್ಲ.’’
ಅಜ್ಜಿ ಬೇಕೆಂದೇ ಮಾಡ್ತಾ ಇದ್ದಾರಾ, ಅಲ್ಲ ನಿಜವಾಗಿಯೂ ಮರೆತಿದ್ದಾರಾ ಗೊತ್ತಾಗದೆ ತಾಯಿ ಮಗ ಮುಖ ಮುಖ ನೋಡಿಕೊಂಡರು.
‘‘ನಾಸರ್ ಎದ್ದರೆ ಕರೆದುಕೊಂಡು ಬಾ, ಮದುವೆ ವಿಷಯ ಮಾತನಾಡಬೇಕು ಎಂದು ಈಗ ತಿಂಡಿ ತಿನ್ನುವಾಗ ನೀವೇ ಹೇಳಿದ್ದಲ್ಲವಾ ಅಜ್ಜೀ’’ ಐಸು ಹೇಳಿದಳು.
‘‘ನಾನು ಹಾಗೆ ಹೇಳಿದೆನಾ?’’
‘‘ಹೌದು’’
‘‘ಯಾರಿಗೆ ಮದುವೆ?’’
‘‘ನನಗೆ’’ ನಾಸರ್ ಹೇಳಿದ.
‘‘ಹುಡುಗಿ ಯಾರು?’’
‘‘ನಿಮ್ಮ ಮೊಮ್ಮಗಳು ತಾಹಿರಾ.’’
‘‘ಓ, ಅವಳಾ... ಅವಳು ಒಪ್ಪಿದ್ದಾಳಾ?’’
‘‘ಹೌದು’’
‘‘ಯಾರ ಹತ್ತಿರ ಒಪ್ಪಿದ್ದು?’’
‘‘ನನ್ನ ಹತ್ತಿರ.’’
‘‘ನೀನು ಏನು ಕೇಳಿದೆ?’’
‘‘ನನ್ನನ್ನು ಮದುವೆಯಾಗ್ತಿಯಾ’’ ಕೇಳಿದೆ.
‘‘ಅವಳೇನು ಹೇಳಿದಳು?’’
‘‘................’’
‘‘ಯಾಕೆ ಮಾತಾಡ್ತಾ ಇಲ್ಲ. ಹೇಳು ಅವಳೇನು ಹೇಳಿದಳು?’’
‘‘ಅವಳೇನು ಹೇಳಲಿಲ್ಲ. ಅವಳಿಗೆ ಇಷ್ಟ ಇದೆ.’’
‘‘ಅದು ನಿನಗೆ ಹೇಗೆ ಗೊತ್ತಾಯಿತು?’’
‘‘ಅವಳ ಮೌನ ನೋಡಿ ಗೊತ್ತಾಯಿತು.’’
‘‘ಅವಳು ಯಾವಾಗ ಬರ್ತಾಳೆ.’’
‘‘ಗೊತ್ತಿಲ್ಲ... ಬರಬಹುದು.’’
‘‘ಅವಳು ಬರಲಿ, ಅವಳಲ್ಲಿ ನಾನೇ ಕೇಳುತ್ತೇನೆ.’’
‘‘ಅಜ್ಜಿ, ನಿಮಗೆ ಒಪ್ಪಿಗೆನಾ’’ ನಾಸರ್ ಕೇಳಿದ.
‘‘ಈ ಮಾತನ್ನು ನೀನು ಅವಳಲ್ಲಿ ಕೇಳಬೇಕು. ಮದುವೆಯಾಗುವುದು ಅವಳಲ್ಲವಾ?’’
(ರವಿವಾರದ ಸಂಚಿಕೆಗೆ)







