ಸಾವಿನ ಮನೆಯಲ್ಲಿ ಕ್ಯಾಬರೆ ನರ್ತನ
ನವೆಂಬರ್ 8ರಂದು ರಾತ್ರೋರಾತ್ರಿ ನೋಟು ನಿಷೇಧ ಘೋಷಣೆ ಮಾಡಿ ವಿದೇಶಕ್ಕೆ ಹಾರಿದ್ದ ನಮ್ಮ ಪ್ರಧಾನಮಂತ್ರಿ ಮೋದಿಯವರು, ಜಪಾನ್‌ನಲ್ಲಿ ಮಾಡಿದ ಭಾಷಣದಲ್ಲಿ ಒಂದು ಜೋಕನ್ನು ಉದುರಿಸಿದ್ದರು ‘‘ಭಾರತದಲ್ಲಿ ನನ್ನ ನೋಟು ನಿಷೇಧ ಘೋಷಣೆಯಿಂದ ಎಲ್ಲವೂ ತಲೆಕೆಳಗಾಗಿದೆ. ಮದುವೆ ನಿಶ್ಚಯವಾಗಿದೆ. ಆದರೆ ಖರ್ಚು ಮಾಡಲು ನೋಟುಗಳಿಲ್ಲ...’’ ಹೀಗೆಂದು ತಮಾಷೆಯಾಗಿ ಹೇಳಿ ಸ್ವತಃ ನರೇಂದ್ರ ಮೋದಿಯವರೇ ನಕ್ಕಿದ್ದರು. ಹೌದು, ಭಾರತದಲ್ಲಿ ನೂರಾರು ಮದುವೆ ಸಮಾರಂಭಗಳು ನಿಂತಿವೆ. ಹಲವು ಹೆಣ್ಣು ಮಕ್ಕಳು ಕಣ್ಣೀರಿನಿಂದ ಕೈ ತೊಳೆಯುತ್ತಿದ್ದಾರೆ. ಆದರೆ ಮದುವೆಗಳು ನಿಂತಿರುವುದು ಯಾವುದೇ ಕಾಳಧನ ಹೊಂದಿದಾತನದ್ದಲ್ಲ. ಯಾಕೆಂದರೆ, ಕರ್ನಾಟಕದಲ್ಲಿ ಹಲವು ನೂರು ಕೋಟಿಗಳ ವೆಚ್ಚದಲ್ಲಿ ನಡೆಯುತ್ತಿರುವ ಮದುವೆ ಸಮಾರಂಭವೊಂದು ಇದೀಗ ಮೋದಿಯ ಜೋಕಿಗೆ ಸವಾಲೆಸೆಯುವಂತಿದೆ. ಈ ದೇಶದ ಬಡವರ ಸಂಕಷ್ಟವನ್ನು ಅಣಕಿಸುವಂತೆ ಈ ಅದ್ದೂರಿ ಮದುವೆ ನಡೆಯುತ್ತಿದೆ. ಜನಾರ್ದನ ರೆಡ್ಡಿಯವರ ಮಗಳ ಮದುವೆಯನ್ನು ಒಂದೇ ವಾಕ್ಯದಲ್ಲಿ ವರ್ಣಿಸುವುದಾದರೆ ‘ಸಾವಿನ ಮನೆಯಲ್ಲಿ ಕ್ಯಾಬರೆ ನರ್ತನ’.
ಜನಾರ್ದನ ರೆಡ್ಡಿಯ ಬಳಿ ಇರುವ ಕಪ್ಪು ಹಣದ ಪ್ರಮಾಣ ತೆರಿಗೆ ಇಲಾಖೆಗೆ ಗೊತ್ತಿಲ್ಲದೇ ಇರಬಹುದು. ಆದರೆ ಈ ದೇಶದ ಪ್ರತಿ ಮಗುವಿಗೂ ಗೊತ್ತಿದೆ. ಈ ಹಿಂದೆ ಅಮ್ಮ ಸುಶ್ಮಾ ಸ್ವರಾಜ್ ಅವರು ಪ್ರತಿ ವರಮಹಾಲಕ್ಷ್ಮಿಪೂಜೆಗೆ ವಿಶೇಷವಾಗಿ ಆಗಮಿಸಿ, ಕೋಟಿ ಕೋಟಿ ಹಣವನ್ನು ಸಾಗಿಸುತ್ತಿದ್ದುದು ಮಾಧ್ಯಮಗಳಲ್ಲಿ ಚರ್ಚೆಯಾಗಿತ್ತು. ಬಳಿಕ ಗಣಿದೊರೆಗಳು ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಕಂಬಿ ಎಣಿಸುವಂತಾಯಿತು.ಅಮ್ಮ ಕೈ ಬಿಟ್ಟಳು. ಇದೀಗ ಜೈಲಿನಿಂದ ಹೊರ ಬಂದಿರುವ ರೆಡ್ಡಿ, ತನ್ನ ಕಳೆದು ಹೋದ ವರ್ಚಸ್ಸನ್ನು ಮತ್ತೆ ದುಡ್ಡಿನ ಮೂಲಕವೇ ಪುನರ್ ಸ್ಥಾಪಿಸುವ ಹವಣಿಕೆಯಲ್ಲಿದ್ದಾರೆ. ತನ್ನ ಮಗಳ ಮದುವೆಯನ್ನು ಇಂದ್ರ-ಚಂದ್ರಲೋಕದಲ್ಲಿ ನಡೆಸಲು ಹೊರಟಿದ್ದಾರೆ. ಮದುವೆಯ ಆಮಂತ್ರಣ ಪತ್ರಿಕೆಗೇ ಹಲವು ಕೋಟಿಗಳನ್ನು ಅವರು ಸುರಿದಿದ್ದಾರೆ. ಸರಿ. ತನ್ನ ಹಣ, ತನ್ನ ಮಗಳ ಮದುವೆ. ಕೇಳುವವರಿಲ್ಲ. ತಾನು ವ್ಯಯ ಮಾಡುತ್ತಿರುವುದು ಕಪ್ಪು ಹಣವನ್ನಲ್ಲ, ಬಿಳಿ ಹಣವನ್ನು ಎಂದೂ ಅವರು ಹೇಳುತ್ತಿದ್ದಾರೆ. ಮದುವೆಗೆ ಸುರಿಯುತ್ತಿರುವ ಕೋಟ್ಯಂತರ ಹಣಕ್ಕೆ ಟ್ಯಾಕ್ಸ್ ಕಟ್ಟಿದ್ದೇವೆ ಎಂದೂ ಮಾಧ್ಯಮಗಳಲ್ಲಿ ಸಮರ್ಥಿಸಿಕೊಳ್ಳುತ್ತಾರೆ. ಇರಲಿ. ಕಾನೂನು ಚಾಪೆಯಡಿಗೆ ತೂರಿದರೆ, ಕಾಳದಂಧೆಕೋರರಿಗೆ ರಂಗೋಲಿಯಡಿಗೆ ತೂರಲು ಯಾರೂ ಕಲಿಸಬೇಕಾಗಿಲ್ಲ. ಆದರೆ ಕನಿಷ್ಠ ಆತ್ಮಸಾಕ್ಷಿಯೊಂದಿದ್ದಿದ್ದರೆ ಜನಾರ್ದನ ರೆಡ್ಡಿ ಸದ್ಯದ ಸಂದರ್ಭದಲ್ಲಿ ಅದ್ದೂರಿ ಮದುವೆಯಿಂದ ಹಿಂದೆ ಸರಿದು, ಅದನ್ನು ಸರಳ ರೂಪಕ್ಕೆ ಇಳಿಸುತ್ತಿದ್ದರು.
ನೋಟು ನಿಷೇಧದ ಬಳಿಕ ಭಾರತದ ಮುಕ್ಕಾಲು ಭಾಗ ಜನರು ಬ್ಯಾಂಕಿನ ಬಾಗಿಲಲ್ಲಿ ತತ್ತರಿಸಿ ಕೂತಿದ್ದಾರೆ. ಮಧ್ಯಮವರ್ಗದ ಜನರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಕಪ್ಪು ಹಣವನ್ನು ಹತೋಟಿಯಲ್ಲಿಡಲು ಈ ಕ್ರಮ ಎಂದು ಪ್ರಧಾನಿ ಮೋದಿ ಹೇಳಿದ್ದರೂ, ದೇಶದ ಬಡಜನರ ಮೇಲೆಯೇ ಅದು ತೀವ್ರ ಪರಿಣಾಮವನ್ನು ಎಸಗಿದೆ. ಇಂತಹ ಸಂದರ್ಭದಲ್ಲಿ ‘‘ದೇಶಕ್ಕಾಗಿ ತ್ಯಾಗ ಮಾಡಿ’’ ಎಂದು ನರೇಂದ್ರ ಮೋದಿ ಕರೆ ನೀಡುತ್ತಿದ್ದಾರೆ. ಜನರೂ ಅದನ್ನೇ ಪಾಲಿಸುತ್ತಿದ್ದಾರೆ. ಆದರೆ ಒಂದೆಡೆ ಜನರು ಆತಂಕ,ಭಯದಲ್ಲಿ ಕಂಗಾಲಾಗಿರುವ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಅದ್ದೂರಿ ಮದುವೆಯನ್ನು ಮಾಡುವುದು ಏನನ್ನು ಸೂಚಿಸುತ್ತದೆ? ಈ ಬಡವರ ದುಃಖದ ಅಣಕವನ್ನು ತಾನೇ? ಒಂದೆಡೆ ಬಡವರು ಎರಡು ಸಾವಿರ ರೂಪಾಯಿಗಾಗಿ ಬ್ಯಾಂಕಿನ ಮುಂದೆ ಗಂಟೆಗಟ್ಟಲೆ ಸಾಲಿನಲ್ಲಿ ನಿಂತಿರುವಾಗ, ಹಣವನ್ನು ನೀರಿನಂತೆ ಚೆಲ್ಲುವುದಕ್ಕೆ ರೆಡ್ಡಿ ಕುಟುಂಬದ ಆತ್ಮಸಾಕ್ಷಿಯಾದರೂ ಹೇಗೆ ಒಪ್ಪುತ್ತದೆ? ಬರದ ನಾಡಿನಲ್ಲಿ ಅನ್ನವನ್ನು ರಸ್ತೆಗೆ ಚೆಲ್ಲಿದಂತೆಯೇ ಇದುವು ಕೂಡ.
ಸರಿ. ರೆಡ್ಡಿಗೆ ಆತ್ಮಸಾಕ್ಷಿಯೆನ್ನುವುದು ಇದ್ದಿದ್ದರೆ ಅವರು ಈ ನಾಡನ್ನು ಹಣಕ್ಕಾಗಿ ಈ ರೀತಿಯಲ್ಲಿ ಗಬ್ಬೆಬ್ಬಿಸುತ್ತಿರಲಿಲ್ಲ. ಕನಿಷ್ಠ ಈ ರಾಜ್ಯದ ಬಿಜೆಪಿ ಮುಖಂಡರಾದರೂ ತಮ್ಮ ನಾಯಕ ಮೋದಿಯ ಕರೆಯನ್ನು ಪಾಲಿಸಬೇಕಾಗಿತ್ತು. ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿಯೇ ಘೋಷಿಸಿದ್ದಾರೆ ‘‘ಈ ದೇಶದ ಬಡವರು ಸುಖವಾಗಿ ನಿದ್ದೆ ಮಾಡುತ್ತಿದ್ದಾರೆ. ಕಾಳ ದಂಧೆಕೋರರು ನಿದ್ದೆ ಮಾತ್ರೆ ಸೇವಿಸುತ್ತಿದ್ದಾರೆ’’. ಅಂದರೆ ಜನಾರ್ದನ ರೆಡ್ಡಿಯ ಸಂಭ್ರಮಕ್ಕೆ ನರೇಂದ್ರ ಮೋದಿಯವರು ಕ್ಲೀನ್ ಚಿಟ್ ನೀಡುತ್ತಿದ್ದಾರೆಯೇ? ದೇಶದ ಬಡಜನರಿಗೆ ತ್ಯಾಗ ಮಾಡಲು ಕರೆಕೊಟ್ಟಿರುವ ನರೇಂದ್ರ ಮೋದಿಯ ಪಕ್ಷದವರು ಜನಾರ್ದನ ರೆಡ್ಡಿಯ ಮಗಳ ಮದುವೆಯಲ್ಲಿ ಯಾವ ಸಂಕೋಚವೂ ಇಲ್ಲದೆ ಪಾಲ್ಗೊಂಡಿದ್ದಾರೆ. ಆ ಮೂಲಕ ಜನಾರ್ದನ ರೆಡ್ಡಿಯ ಹಣದ ಸಾಚಾತನವನ್ನು ಎತ್ತಿ ಹಿಡಿದಿದ್ದಾರೆ. ಜೊತೆಗೆ, ಈ ನಾಡಿನಲ್ಲಿ ಜನರು ಯಾವ ಬವಣೆಯನ್ನೂ ಪಡುತ್ತಿಲ್ಲ, ಎಲ್ಲರೂ ಸುಖ ಶಾಂತಿಯಿಂದ ಜೀವಿಸುತ್ತಿದ್ದಾರೆ ಎಂದು ಘೋಷಿಸಿದ್ದಾರೆ. ಬಡವರ ಬಳಿ ತ್ಯಾಗವನ್ನು ನಿರೀಕ್ಷಿಸುವ ನರೇಂದ್ರ ಮೋದಿಯವರು, ರೆಡ್ಡಿಯ ಮಗಳ ಮದುವೆಯಲ್ಲಿ ಭಾಗವಹಿಸಿರುವ ತಮ್ಮದೇ ಪಕ್ಷದ ನಾಯಕರಿಂದ ಯಾಕೆ ತ್ಯಾಗವನ್ನು ಬಯಸಿಲ್ಲ. ಅಥವಾ ಒಂದು ಮದುವೆಯನ್ನು ತ್ಯಾಗಮಾಡುವುದಕ್ಕೂ ಸಿದ್ಧರಿಲ್ಲದ ಬಿಜೆಪಿಯ ನಾಯಕರು, ಈ ದೇಶದ ಬಡವರಿಂದ ತ್ಯಾಗವನ್ನು ಬಯಸುವುದರಲ್ಲಿ ಕ್ರೌರ್ಯವಲ್ಲದೆ ಇನ್ನೇನೂ ಕಾಣುತ್ತಿಲ್ಲ. ಮದುವೆಯೆನ್ನುವುದು ಎರಡು ಹೃದಯಗಳನ್ನು ಬೆಸೆಯುವ ಸಂಭ್ರಮ. ನಾಲ್ದಿಕ್ಕುಗಳಲ್ಲಿ ದುಃಖಗಳಿರುವಾಗ ನಮ್ಮ ಸಂತೋಷ, ಸಂಭ್ರಮವನ್ನು ತುಸು ಹತ್ತಿಕ್ಕುವುದು ಮಾನವೀಯತೆಯ ಭಾಗ. ಲಕ್ಷಾಂತರ ಜನರು ಸಂಕಟದಲ್ಲಿದ್ದಾಗ, ಹಣವನ್ನು ನೀರಿನಂತೆ ಚೆಲ್ಲಿ, ಹಾಡು ಸಂಗೀತದ ಜೊತೆಗೆ ಮೈಮರೆಯುವುದು ಯಾವ ರೀತಿಯಲ್ಲೂ ಮದುವೆಯೆನ್ನುವ ಸಮಾರಂಭಕ್ಕೆ ಶೋಭೆಯಲ್ಲ. ಕನಿಷ್ಠ ಆ ಅದ್ದೂರಿ ಮದುವೆಗೆ ಚೆಲ್ಲುವ ಹಣವನ್ನು ಜನಸಾಮಾನ್ಯರ ಸಂಕಟಗಳಿಗೆ ವ್ಯಯ ಮಾಡಿದ್ದಿದ್ದರೆ ಹೊಸ ಬದುಕಿಗೆ ಕಾಲಿಡುವ ದಂಪತಿಗೆ ಜನಸಾಮಾನ್ಯರ ಆಶೀರ್ವಾದವಾದರೂ ಸಿಗುತ್ತಿತ್ತು.
ಜನಾರ್ದನ ರೆಡ್ಡಿಯ ಹಣದ ಚೆಲ್ಲಾಟ, ನೋಟು ನಿಷೇಧವು ಬೃಹತ್ ಕಪ್ಪು ಹಣ ಹೊಂದಿದವರ ಕೂದಲನ್ನೂ ಕೊಂಕಿಸಿಲ್ಲ ಎಂಬ ಸತ್ಯವನ್ನು ಹೇಳುತ್ತದೆ. ಇದೇ ಸಂದರ್ಭದಲ್ಲಿ ಮಲ್ಯ ಅವರ ಸಂಸ್ಥೆಯ ಸಾಲವೂ ಸೇರಿದಂತೆ, ಸುಮಾರು 60ಕ್ಕೂ ಅಧಿಕ ಸಂಸ್ಥೆಯ 7014 ಕೋಟಿ ರೂಪಾಯಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೈ ಬಿಟ್ಟಿದೆ. ಅಂದರೆ ಅವರಿಗೆ ತಮ್ಮ ಸಾಲದಲ್ಲಿ ಕೆಲವು ಭಾಗವನ್ನು ಮನ್ನಾ ಮಾಡಿದೆ. ಇಂದಿನ ನೋಟು ನಿಷೇಧದ ನಿಜವಾದ ಕಾರಣವನ್ನೂ ಈ ಅಂಶ ತೆರೆದಿಡುತ್ತದೆ. ಇಂದು ಮಲ್ಯರಂತೆಯೇ ನೂರಾರು ಸಂಸ್ಥೆಗಳು ಬ್ಯಾಂಕಿಗೆ ನೀರು ಕುಡಿಸಲು ಕಾಯುತ್ತಿವೆ. ಸಹಸ್ರಾರು ಕೋಟಿ ಹಣ ಕಟ್ಟದೇ ಬಾಕಿ ಉಳಿದಿದ್ದು, ಬ್ಯಾಂಕುಗಳಿಂದ ಈ ಬೃಹತ್ ಉದ್ಯಮಿಗಳು ವಿನಾಯಿತಿಯನ್ನು ಬೇಡುತ್ತಿದ್ದಾರೆ. ಈ ದೇಶದ ಬ್ಯಾಂಕಿಂಗ್ ವ್ಯವಸ್ಥೆಯೇ ಇವರಿಂದ ಮುಳುಗುವ ಹಂತದಲ್ಲಿದೆ. ಈ ಕಾರಣದಿಂದ ಬ್ಯಾಂಕ್‌ಗಳನ್ನು ಮೇಲೆತ್ತುವ ಒಂದೇ ಒಂದು ಉದ್ದೇಶದಿಂದ ಜನಸಾಮಾನ್ಯರ ಜೇಬಿಗೆ ಕೈ ಹಾಕಿ ಆ ಹಣವನ್ನು ಸರಕಾರ ಬ್ಯಾಂಕಿಗೆ ಸುರಿಯುವಂತೆ ಮಾಡುತ್ತಿದೆ. ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಸಹಸ್ರಾರು ಕೋಟಿ ರೂಪಾಯಿ ಬ್ಯಾಂಕಿಗೆ ಬಂದು ಬೀಳುತ್ತಿರುವುದರಿಂದ ಬ್ಯಾಂಕ್‌ಗಳು ನಿಧಾನಕ್ಕೆ ಚೇತರಿಸಿಕೊಳ್ಳುತ್ತಿವೆ. ಮತ್ತು ಜನರು ಬ್ಯಾಂಕಿಗೆ ಹಾಕಿದ ಹಣವನ್ನು ಗರಿಷ್ಠ ಸಮಯದವರೆಗೆ ಬ್ಯಾಂಕಿನೊಳಗೆ ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಮಲ್ಯರಂತಹ ಬೃಹತ್ ಉದ್ಯಮಿಗಳು ಮಾಡಿಟ್ಟ ಸಾಲದ ಶೂಲವನ್ನು ಈ ದೇಶದ ತಳಸ್ತರದ ಜನರ ಕುತ್ತಿಗೆಗೆ ಕಟ್ಟುವ ಪ್ರಯತ್ನದಲ್ಲಿ ಮೋದಿ ಯಶಸ್ವಿಯಾಗಿದ್ದಾರೆ. ವಿದೇಶದಲ್ಲಿ ಕೂತು ನಗುತ್ತಿರುವ ವಿಜಯ ಮಲ್ಯ ಮತ್ತು ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲೇ ಬೆಂಗಳೂರಿನಲ್ಲಿ ನೂರಾರು ಕೋಟಿ ಸುರಿದು ಅದ್ದೂರಿ ಮದುವೆ ಮಾಡುತ್ತಿರುವ ಜನಾರ್ದನ ರೆಡ್ಡಿಯಂತಹ ಕುಳಗಳೇ, ನೋಟು ನಿಷೇಧದ ಸೋಲನ್ನು ದೇಶದ ಮುಂದಿಟ್ಟಿದ್ದಾರೆ. ಜನಸಾಮಾನ್ಯರು ಮಾತ್ರ, ದೇಶಕ್ಕಾಗಿ ಬ್ಯಾಂಕಿನ ಮುಂದೆ ಬಿಸಿಲಲ್ಲಿ ಒಣಗುತ್ತಾ ಕಪ್ಪಾಗುತ್ತಿದ್ದಾರೆ.







