ಟಿಪ್ಪುವಿನಿಂದ ಉಪಕೃತರಾಗಿದ್ದವರು ಕೃತಘ್ನರೇ?
(MobileWap.Mobi).gif)
ಟಿಪ್ಪುಅಷ್ಟು ಜನರನ್ನು ಕೊಂದ, ಇಷ್ಟು ಜನರನ್ನು ಮತಾಂತರ ಮಾಡಿದ ಎಂದು ಹಲವು ದಿನಗಳಿಂದ ಕೇಸರಿ ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪೂರ್ವಾಗ್ರಹ ಪೀಡಿತರ ಅರೆಜ್ಞಾನದ ಲೇಖನಗಳು ಹರಿದಾಡುತ್ತಿದ್ದುವನ್ನು ನೋಡಿದ್ದೇವೆ. ಆದರೆ ಮೊಟ್ಟ ಮೊದಲು ಟಿಪ್ಪು ಸೈನ್ಯದ ಒಟ್ಟು ಬಲ ಎಷ್ಟಿತ್ತು ಹಾಗೂ ಅದರಲ್ಲಿ ಮುಸ್ಲಿಂ ಸೈನಿಕರ ಸಂಖ್ಯೆ ಮತ್ತು ಹಿಂದೂ ಸೈನಿಕರ ಸಂಖ್ಯೆ ಶೇಕಡವಾರು ಎಷ್ಟಿತ್ತು ಎಂದು ಯಾರೂ ಸ್ಪಷ್ಟಪಡಿಸಿಲ್ಲ. ಟಿಪ್ಪುವಿನಿಂದ ಯಾವ ಯಾವ ಹಿಂದೂ ಜಾತಿ- ಜನಾಂಗಗಳಿಗೆ ಅನ್ಯಾಯವಾಗಿದೆ ಎನ್ನುವ ಐತಿಹಾಸಿಕ ಸಂಶೋಧನೆ ಪತ್ರಿಕೆ ಗಳಲ್ಲಿ ಹರಿದಾಡುತ್ತಿದ್ದವು. ಆದರೆ ಟಿಪ್ಪುವಿನಿಂದ ಯಾವ ಯಾವ ಹಿಂದೂ ಸಮುದಾಯಗಳಿಗೆ ಉಪಕಾರ ಆಗಿದೆ ಎನ್ನುವ ವಿವರ ಈ ಪತ್ರಿಕೆಗಳಲ್ಲಿ ಎಲ್ಲಿಯೂ ಕಂಡಿಲ್ಲ.
ಟಿಪ್ಪುವಿನಿಂದ ಯಾವ ಯಾವ ನಿರ್ದಿಷ್ಟ ಹಿಂದೂ ಸಮುದಾಯಗಳು ಪ್ರಯೋಜನ ಪಡೆದಿವೆ ಎಂಬುದನ್ನು ಮುಖ್ಯವಾಗಿ ವಿಶ್ಲೇಷಿಸಬೇಕಾಗಿದೆ. ಟಿಪ್ಪುವಿನಿಂದ ಪ್ರಯೋಜನ ಪಡೆದು ಅದನ್ನು ಇಂದಿನ ತಲೆಮಾರಿನವರೆಗೂ ಅನುಭವಿಸುತ್ತಿರುವ ಸಮುದಾಯಗಳಲ್ಲಿ ಬ್ರಾಹ್ಮಣರು, ಅರೆಭಾಷೆ ಗೌಡರು, ಮರಾಠಿ ದರ್ಜಿಗಳು ಮತ್ತು ಮರಾಠ ಕ್ಷತ್ರಿಯರು ಪ್ರಮುಖರು. ಟಿಪ್ಪುಕಾಲದಲ್ಲಿ ಹೆಚ್ಚಿನ ಎಲ್ಲಾ ಗ್ರಾಮ ಲೆಕ್ಕಿಗರು, ಕಂದಾಯ ಸಂಗ್ರಾಹಕರು ಬ್ರಾಹ್ಮಣರಾಗಿದ್ದರು. ಟಿಪ್ಪುವಿನ ಕಂದಾಯ ಮಂತ್ರಿ ಆಗಿದ್ದ ಪೂರ್ಣಯ್ಯ ತನ್ನದೇ ಜಾತಿಯವರನ್ನು ಎಲ್ಲೆಡೆ ಗ್ರಾಮ ಲೆಕ್ಕಿಗ ಮತ್ತು ಕಂದಾಯ ಸಂಗ್ರಾ ಹಕರಾಗಿ ನೇಮಿಸಿದ್ದರು. ಟಿಪ್ಪುವಿನಅಸ್ಥಾನದಲ್ಲಿ ಪೂರ್ಣಯ್ಯನಲ್ಲದೆ ಇನ್ನೂ ಐದು ಮಂತ್ರಿಗಳು ಬ್ರಾಹ್ಮಣರಾಗಿದ್ದರು. ಮೈಸೂರು ಮಂಡ್ಯ ಜಿಲ್ಲೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಲಿಂಗಾಯತರಿದ್ದರೂ ಅವರನ್ನು ಈ ಬ್ರಾಹ್ಮಣ ಮಂತ್ರಿಗಳು ಉದ್ದೇಶ ಪೂರ್ವಕವಾಗಿ ಟಿಪ್ಪುಆಡಳಿತದಿಂದ ದೂರ ಇಟ್ಟಿದ್ದರು.
ಎರಡನೆಯದಾಗಿ, ಟಿಪ್ಪುಸೈನಿಕರು ಕೊಡಗಿನ ದಂಗೆಯನ್ನು ಅಡಗಿಸಿದ ಮೇಲೆ ದೊಡ್ಡ ಸಂಖ್ಯೆಯಲ್ಲಿ ಎರಡೂ ಕಡೆಯವರು ಸತ್ತರು. ಟಿಪ್ಪು ಸೈನ್ಯದಲ್ಲಿಯೂ ಹಿಂದೂ ಕೊಡವ ಯೋಧರು ಇದ್ದರು. ಸತ್ತ ಯೋಧರಲ್ಲಿ ಹೆಚ್ಚಿನವರು ಕೃಷಿಕರಾಗಿದ್ದರು. ಹಾಗಾಗಿ ಆ ಕೊಡಗಿನ ಯುದ್ಧದ ನಂತರ ಕೊಡಗಿನ ಕೃಷಿಗೆ ಭಾರಿ ಹೊಡೆತ ಬಿತ್ತು. ಟಿಪ್ಪು ಕೃಷಿಗೆ ತುಂಬಾ ಮಹತ್ವ ಕೊಡುತ್ತಿದ್ದುದರಿಂದ ಅವನು ನೆರೆಯ ಸುಳ್ಯ ಮತ್ತ್ತು ಬೆಳ್ತಂಗಡಿ ತಾಲೂಕಿನಿಂದ ಅರೆಭಾಷೆ ಗೌಡ ರೈತರನ್ನು ಕರೆತಂದು ಕೊಡಗಿನಲ್ಲಿ ನೆಲೆಗೊಳಿಸಿ ಅವರಿಗೆ ಯುದ್ಧದಲ್ಲಿ ಸತ್ತ ಕೊಡವರ ಹೊಲಗದ್ದೆಗಳನ್ನು ಕೃಷಿ ಮಾಡಲು ಕೊಟ್ಟರು. ಅರೆಭಾಷೆ ಗೌಡರು ಯೋಧ ಜನಾಂಗ ಅಲ್ಲವಾದು ದರಿಂದ ಟಿಪ್ಪುವಿಗೆ ಗೌಡರ ಬಗ್ಗೆ ಯಾವುದೇ ಭಯ ಇರಲಿಲ್ಲ. ಅಂದು ಟಿಪ್ಪುಮಾಡಿದ ಈ ಉಪಕಾರದ ಸಿಹಿಫಲ ಕೊಡಗಿನಲ್ಲಿ ಅರೆಭಾಷೆ ಗೌಡರ ಇಂದಿನ ತಲೆಮಾರೂ ಸವಿಯುತ್ತಿದೆ. ಈ ಕೊಡಗಿನ ಗೌಡರು ಮೂಲತಃ ತುಳುನಾಡಿನವರು ಎನ್ನುವುದಕ್ಕೆ ಸಾಕ್ಷಿ ಅವರ ಅರೆಕನ್ನಡ ಭಾಷೆಯಲ್ಲಿ ಹೇರಳವಾಗಿರುವ ತುಳು ಶಬ್ದಗಳು ಮತ್ತು ಅವರು ಈಗಲೂ ನಂಬುವ ಭೂತಾರಾಧನೆ ಮತ್ತು ನಾಗಾರಾಧನೆ. ವಿಪರ್ಯಾಸವೆಂದರೆ ಟಿಪ್ಪುವಿನಿಂದ ಅರೆಗೌಡರ ಹತ್ತಾರು ತಲೆಮಾರಿಗೆ ಪ್ರಯೋಜನವಾಗಿದ್ದರೂ ಕೊಡಗಿನ ಮತ್ತು ಸುಳ್ಯದ ಅರೆಭಾಷೆ ಗೌಡರಲ್ಲಿ ಹೆಚ್ಚಿನವರು ಈಗ ಟಿಪ್ಪು ದ್ವೇಷಿಗಳು ಹಾಗೂ ಕಟ್ಟಾ ಹಿಂದುತ್ವವಾದಿಗಳು. ಟಿಪ್ಪುವಿನಿಂದಾದ ಪ್ರಯೋಜನದ ಲಾಭ ಈಗಲೂ ಉಣ್ಣುವಾಗ ಈಗಿನ ತಲೆಮಾರಿಗೆ ಅವರ ಆತ್ಮಸಾಕ್ಷಿ ಚುಚ್ಚುವುದಿಲ್ಲವೇ?
ಟಿಪ್ಪುವಿನಿಂದ ಲಾಭ ಪಡೆದ ಇನ್ನೊಂದು ಹಿಂದೂ ಗುಂಪು ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಈಗಲೂ ನೆಲೆಸಿರುವ ಮರಾಠಿ ದರ್ಜಿ (ಸಿಂಪಿಗ) ಜಾತಿಯವರು. ತನ್ನ ರಾಜಕೀಯ ಮಿತ್ರರಾಗಿದ್ದ ಫ್ರೆಂಚ್ ಸೈನಿಕರ ಸುಂದರ ಸಮವಸ್ತ್ರ ನೋಡಿದ ಟಿಪ್ಪು ತನ್ನ ಸೈನಿಕರಿಗೂ ಅಂತಹದ್ದೇ ಸಮವಸ್ತ್ರ ಹೊಲಿಸಲು ನಿರ್ಧರಿಸಿದಾಗ ತನ್ನ ರಾಜ್ಯದ ಕನ್ನಡಿಗರಲ್ಲಿ ಅದಕ್ಕೆ ಸರಿಯಾದ ನುರಿತ ದರ್ಜಿಗಳು ಸಿಗಲಿಲ್ಲವೆಂದು ಟಿಪ್ಪುಮರಾಠಿ ಪ್ರದೇಶದಿಂದ ದರ್ಜಿ ಕುಟುಂಬಗಳನ್ನು ಕರೆತಂದು ಅವರನ್ನು ಮೈಸೂರು ಮಂಡ್ಯದಲ್ಲಿ ನೆಲೆಗೊಳಿಸಿದರು. ಟಿಪ್ಪು ಅವಸಾನದ ನಂತರ ಈ ಮರಾಠಿ ದರ್ಜಿ ಜಾತಿಯವರಿಗೆ ಒಡೆಯರ್ ಅರಸರು ಮೈಸೂರಿನಲ್ಲಿ ನೆಲೆ ಒದಗಿಸಿದರು. ಇವತ್ತು ಈ ಮರಾಠಿಗರು ಮೈಸೂರು ನಗರದಲ್ಲಿ ಹೆಚ್ಚಿನ ಟೈಲರಿಂಗ್ ಅಂಗಡಿಗಳನ್ನು ಹೊಂದಿರುವುದಲ್ಲದೆ ದೊಡ್ಡ ದೊಡ್ಡ ಬಟ್ಟೆ ಮಳಿಗೆಯನ್ನೂ ಹೊಂದಿದ್ದು ಕೋಟ್ಯಾಧೀಶರಾಗಿದ್ದಾರೆ. ಆದರೆ ಮಹಾರಾಷ್ಟ್ರ ಗುಜರಾತಿನಲ್ಲಿರುವ ಅವರದೇ ಜಾತಿಯವರು ಈಗಲೂ ಕಡು ಬಡತನದಲ್ಲಿಯೇ ಕೊಳೆಯುತ್ತಿದ್ದಾರೆ. ವಿಪರ್ಯಾಸವೆಂದರೆ ಈಗ ಮೈಸೂರಿನ ಈ ಮರಾಠಿ ದರ್ಜಿ (ಭಾವಾಸರ್) ಜಾತಿಯ ಹೆಚ್ಚಿನವರು ತಮಗೆ ಟಿಪ್ಪು ಮಾಡಿರುವ ಉಪಕಾರವನ್ನು ಒಂಚೂರೂ ನೆನಪಿಡದೆ ಸಂಘ ಪರಿವಾರದ ಕಟ್ಟಾ ಅನುಯಾಯಿಗಳಾಗಿದ್ದಾರೆ. ಟಿಪ್ಪುವಿನಿಂದ ಉಪಕಾರ ಪಡೆದ ಮತ್ತೊಂದು ಗುಂಪು ಮರಾಠಾ (ಕ್ಷತ್ರಿಯ) ಜಾತಿಯವರದ್ದು. ಇವರನ್ನೂ ಟಿಪ್ಪುಮಹಾರಾಷ್ಟ್ರದಿಂದ ಕರೆತಂದು ತನ್ನ ಅಶ್ವದಳದಲ್ಲಿ ಸೇರಿಸಿದ್ದಲ್ಲದೇ ಅವರನ್ನು ಇಲ್ಲಿಯೇ ಶಾಶ್ವತವಾಗಿ ಉಳಿಸಿಕೊಳ್ಳಲು ಭೂಮಿ ಕೂಡಾ ಕೊಟ್ಟಿದ್ದರು. ಈಗಲೂ ಮೈಸೂರಿನ ಮರಾಠರು ಟಿಪ್ಪುಕೊಟ್ಟ ಆ ಭೂಮಿಯ ಅನ್ನ ಉಣ್ಣುತ್ತಿದ್ದಾರೆ, ಆದರೆ ಇವರೂ ಮೈಸೂರಿನ ಆರೆಸ್ಸೆಸ್ಸಿನ ಬೆನ್ನೆಲುಬು.
ಟಿಪ್ಪುಸೈನ್ಯದಲ್ಲಿ ಕೇವಲ ಶೇ. 20 ಮಾತ್ರ ಮುಸ್ಲಿಮರಿದ್ದು ಶೇ. 80 ಸೈನಿಕರು ಹಿಂದೂಗಳಾಗಿದ್ದರು. ಹಿಂದೂ ಸೈನಿಕರಲ್ಲಿ ಹೆಚ್ಚಿನವರು ನಾಯಕ- ವಾಲ್ಮೀಕಿ ಮತ್ತು ಒಕ್ಕಲಿಗ ಸಮುದಾಯದವರಾಗಿದ್ದರು. ಕುರುಬರೂ ಟಿಪ್ಪುಸೈನಿಕರಾಗಿದ್ದರು. ಇವರೆಲ್ಲಾ ಬಲಾತ್ಕಾರದ ಮತಾಂತರದಲ್ಲಿ ತೊಡಗಿ ಕೊಂಡಿದ್ದರೆನ್ನುವುದು ಹಾಸ್ಯಾಸ್ಪದ. ಅದು ನಿಜವಾಗಿದ್ದರೆ ಇಂದು ಮೈಸೂರು ಮಂಡ್ಯ ಜಿಲ್ಲೆಯಲ್ಲಿ ಕೇರಳದ ಮಲಪ್ಪುರಂನಂತೆ ಶೇ. 70 ಜನಸಂಖ್ಯೆ ಮುಸ್ಲಿಮರಾಗಿರಬೇಕಿತ್ತು. ಆದರೆ ನಿಜದಲ್ಲಿ ಮೈಸೂರು ನಗರ ಸಹಿತ ಹಳೆ ಮೈಸೂರಿನ ಯಾವುದೇ ಭಾಗದಲ್ಲಿಯೂ ಮುಸ್ಲಿಮರು ಶೇ. 15ಕ್ಕಿಂತ ಹೆಚ್ಚಿಲ್ಲ. ಹೀಗಾಗಿ ಟಿಪ್ಪು ಕರ್ನಾಟಕದಲ್ಲಿ ಬಲಾತ್ಕಾರದ ಮತಾಂತರದಲ್ಲಿ ತೊಡಗಿದ್ದರು ಎಂಬುದು ಸುಳ್ಳು ಎಂದು ಸಾಬೀತಾಗುತ್ತದೆ. ಮಲಬಾರ್ ಪ್ರದೇಶದಲ್ಲಿ ಟಿಪ್ಪುಮತಾಂತರ ಮಾಡಿದ್ದು ನಿಜ. ಅದಕ್ಕೆ ಕಾರಣ ಅಲ್ಲಿಯ ನಾಯರ್‌ಗಳು ದಂಗೆ ಎದ್ದಿದ್ದನ್ನು ಸದೆಬಡಿದು ಅವರು ಮುಂದೆಂದೂ ಧರ್ಮದ ಹೆಸರಲ್ಲಿ ದಂಗೆ ಏಳಬಾರದು ಎಂಬ ಮುನ್ನೆಚ್ಚರಿಕೆಗಾಗಿ. ಆದರೆ ಅತೀ ವಿಚಿತ್ರ ಸಂಗತಿಯೆಂದರೆ ಟಿಪ್ಪುದಾಳಿಯಾದಾಗ ನಾಯರ್ ಮತ್ತು ನಂಬೂದರಿಗಳು ದಕ್ಷಿಣ ಕೇರಳಕ್ಕೆ ಪಲಾಯನ ಮಾಡಿದರು, ಹಾಗೂ ಮುಸ್ಲಿಂ ಆಗಿ ಮತಾಂತರ ಅದವರು ಹೆಚ್ಚಿನವರು ಕೆಳಜಾತಿಯ ಈಳವ, ಮೀನುಗಾರ ಮತ್ತು ದಲಿತರು. ಇವರಿಗೆ ಟಿಪ್ಪುನಾಯರ್‌ಗಳಿಂದ ವಶಪಡಿಸಿಕೊಂಡ ಭೂಮಿ ಕೊಟ್ಟಿದ್ದರು. ಆದರೆ ಕೇವಲ ಎಂಟೇ ವರ್ಷಗಳ ನಂತರ ಟಿಪ್ಪುಗತಿಸಿದ ಮೇಲೆ ನಾಯರ್ ಮತ್ತು ನಂಬೂದರಿಗಳು ವಾಪಸ್ ಬಂದು ಬ್ರಿಟಿಷರ ಸಹಾಯದಿಂದ ತಮ್ಮ ಜಮೀನುದಾರಿಕೆ ಮರು ಸ್ಥಾಪಿಸಿ ಕೆಳ ಜಾತಿಯವರನ್ನು ಮತ್ತೆ ಭೀಕರವಾಗಿ ಶೋಷಿಸ ತೊಡಗಿದರು. ಕೆಳಜಾತಿ ಮಹಿಳೆಯರು ರವಿಕೆ ಹಾಕುವುದನ್ನು ಮತ್ತೆ ನಿಷೇಧಿಸಿದರು. ಟಿಪ್ಪುರಾಜಕೀಯ ಕಾರಣಕ್ಕಾಗಿ ಮತಾಂತರ ಮಾಡಿದ್ದಕ್ಕಿಂತ ಹೆಚ್ಚಿನ ಸ್ವಾರ್ಥ ತೋರಿದವರು ಮಲಬಾರಿನ ಆಗಿನ ಹಿಂದೂ ಧಾರ್ಮಿಕ ನೇತಾರರು. ತಮ್ಮ ಮಹಾಸ್ವಾರ್ಥಿ ಹಿಂದೂ ಪೂರ್ವಜರು ಮಾಡಿದ ತಪ್ಪಿಗೆ ಇಂದಿನ ಮುಸ್ಲಿಮರನ್ನು ಹಿಂದುತ್ವವಾದಿಗಳು ದ್ವೇಷಿಸಿ ಫಲವಿದೆಯೇ?
ನಾವು ಇತಿಹಾಸದಲ್ಲಿ ಬದುಕುವುದನ್ನು ಬಿಟ್ಟು ಈಗಿನ ಕಾಲಕ್ಕೆ ಸರಿಯಾಗಿ ಆಲೋಚಿಸಬೇಕಿದೆ. ಇತಿಹಾಸದಲ್ಲಾದ ಅನ್ಯಾಯದ ನೆಪವೊಡ್ಡಿ ವರ್ತಮಾನದಲ್ಲಿ ಮುಸ್ಲಿಂ ದ್ವೇಷ ಹುಟ್ಟು ಹಾಕಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವವರನ್ನು ಗುರುತಿಸಿ ಅವರನ್ನು ದೂರ ಇಡಬೇಕಿದೆ.







