ಮೇಗಿನಹಿತ್ಲು: ನವವಿವಾಹಿತೆ ಕೆರೆಗೆ ಬಿದ್ದು ಮೃತ್ಯು
ಪುತ್ತೂರು, ನ.16: ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ನವವಿವಾಹಿತೆಯೊಬ್ಬರು ಕೆರೆಗೆ ಬಿದ್ದು ಮೃತಪಟ್ಟ ಘಟನೆ ಬುಧವಾರ ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಕೋಡ್ಯಾಡಿ ಮೇಗಿನ ಹಿತ್ಲು ಎಂಬಲ್ಲಿ ನಡೆದಿದೆ. ಕೋಡಿಂಬಾಡಿ ಗ್ರಾಮದ ಮೇಗಿನ ಹಿತ್ಲು ನಿವಾಸಿ ಅಶೋಕ್ ಗೌಡ ಅವರ ಪತ್ನಿ ಪುಷ್ಪಾ(28) ಮೃತಪಟ್ಟ ಮಹಿಳೆ. ಮೃತದೇಹಮನೆಯಿಂದ ಒಂದು ಪರ್ಲಾಂಗು ದೂರದಲ್ಲಿರುವ ತಾಪಂ ಮಾಜಿ ಸದಸ್ಯೆ ಲೀಲಾವತಿ ಎಂಬವರ ಒಡೆತನದಲ್ಲಿರುವ ಕೆರೆಯಲ್ಲಿ ಪತ್ತೆಯಾಗಿದೆ. ಹುಲ್ಲು ತರಲೆಂದು ಹೋಗಿದ್ದ ಪುಷ್ಪಾ ಆಕಸ್ಮಿಕವಾಗಿ ದಾರಿ ಬದಿಯಲ್ಲಿರುವ ಕೆರೆಗೆ ಬಿದ್ದು ಮೃತಪಟ್ಟಿರಬೇಕೆಂದು ಶಂಕಿಸಿ ಮೃತರ ಸಹೋದರ ಚಂದ್ರಹಾಸ ಎಂಬವರು ನೀಡಿರುವ ದೂರಿನಂತೆ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಪುತ್ತೂರು ತಾಲೂಕಿನ ಪೆರಾಬೆ ಗ್ರಾಮದ ಪಟ್ಟೆ ನಿವಾಸಿ ತ್ಯಾಂಪಣ್ಣ ಗೌಡರ ಪುತ್ರಿ ಪುಷ್ಪಾ ವಿವಾಹವು ಕೋಡಿಂಬಾಡಿಯ ಮೇಗಿನ ಹಿತ್ಲು ನಿವಾಸಿ ಅಶೋಕ್‌ರೊಂದಿಗೆ ಜುಲೈ 10ರಂದು ನಡೆದಿತ್ತು. ಅಶೋಕ್ ಅವರು ಮೇಸ್ತ್ರಿ ಕಾರ್ಮಿಕರಾಗಿ ದುಡಿಯುತ್ತಿದ್ದು, ಪುಷ್ಪಾ ವಿವಾಹದ ಬಳಿಕ ಪತಿಯ ಮನೆಯಲ್ಲಿ ಅನ್ಯೋನ್ಯವಾಗಿದ್ದರೆಂದು ತಿಳಿದು ಬಂದಿದೆ. ಬುಧವಾರ ಬೆಳಗ್ಗೆ ಪುಷ್ಪಾರ ಅತ್ತೆ ತೋಟಕ್ಕೆ ಹುಲ್ಲು ತರಲೆಂದು ಹೊರಟಿದ್ದ ಸಂದರ್ಭ ತಾನು ಪಾತ್ರೆಗಳನ್ನು ತೊಳೆದಿಟ್ಟು ಬರುವುದಾಗಿ ತಿಳಿಸಿದ್ದರು ಎನ್ನಲಾಗಿದೆ. ತೋಟಕ್ಕೆ ಹುಲ್ಲು ತರಲು ಹೋಗಿದ್ದ ಅವರ ಅತ್ತೆ ಬಹಳ ಹೊತ್ತಾದರೂ ಪುಷ್ಪಾ ಬಾರದ ಹಿನ್ನೆಲೆಯಲ್ಲಿ ಹಿಂದಿರುಗಿ ಬರುತ್ತಿದ್ದಾಗ ದಾರಿ ಪಕ್ಕದಲ್ಲಿರುವ ಕೆರೆಯ ಬಳಿ ಅವರ ಚಪ್ಪಲಿ ಮತ್ತು ತಲೆಗೆ ಧರಿಸುವ ಮುಟ್ಟಾಳೆ ಕಂಡು ಬಂದಿತ್ತು ಎನ್ನಲಾಗಿದೆ. ಈ ಕುರಿತು ಪರಿಶೀಲಿಸಿದಾಗ ಕೆರೆಯಲ್ಲಿ ಪುಷ್ಪಾ ಮೃತದೇಹ ಪತ್ತೆಯಾಗಿದೆ. ಈ ಘಟನೆಯ ವೇಳೆ ಪುಷ್ಪಾರ ಪತಿ ಅಶೋಕ್ ಸುಬ್ರಹ್ಮಣ್ಯದಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದರೆಂದು ತಿಳಿದು ಬಂದಿದೆ.





