ದಿಲ್ಲಿಯಲ್ಲಿ ಭೂಕಂಪನ!

ಹೊಸದಿಲ್ಲಿ, ನ.17: ಮುಂಜಾನೆ ಸುಖನಿದ್ದೆಯಲ್ಲಿದ್ದ ರಾಜಧಾನಿಯ ಜನ ಭೂಕಂಪದಿಂದ ಒಮ್ಮೆಗೆ ಕಂಗಾಲಾದ ಘಟನೆ ನಡೆದಿದೆ. ದೆಹಲಿ, ಗುರಗಾಂವ್, ಫರೀದಾಬಾದ್, ನೋಯ್ಡಾ ಹಾಗೂ ಗಾಝಿಯಾಬಾದ್ ನಲ್ಲಿ ಗುರುವಾರ ಮುಂಜಾನೆ ಭೂಕಂಪ ಸಂಭವಿಸಿದೆ.
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 4.2ರಷ್ಟಿತ್ತು ಎಂದು ಅಮೆರಿಕದ ಜಿಯಾಲಾಜಿಕಲ್ ಸರ್ವೆ (ಯುಎಸ್ಜಿಎಸ್) ಹೇಳಿದೆ. ಮುಂಜಾನೆ 4.30ರ ಸುಮಾರಿಗೆ ಈ ಪ್ರದೇಶದಲ್ಲಿ ಭೂಮಿ ಒಂದು ನಿಮಿಷ ಕಾಲ ಕಂಪಿಸಿತು.
ಈ ಭೂಕಂಪದ ಕೇಂದ್ರಬಿಂದು ಹರ್ಯಾಣದ ರೇವರಿ ಜಿಲ್ಲೆಯ ಭಾವಲ್ ನಲ್ಲಿ, ಭೂಮಿಯ 10 ಕಿಲೋಮೀಟರ್ ಆಳದಲ್ಲಿತ್ತು ಎಂದು ಯುಎಸ್ಜಿಎಸ್ ಅಂದಾಜು ಮಾಡಿದೆ. ಆದರೆ ಯಾವುದೇ ಆಸ್ತಿಪಾಸ್ತಿ ಅಥವಾ ಜೀವಹಾನಿಯಾದ ವರದಿ ಬಂದಿಲ್ಲ.
ಒಂದೆಡೆ ಭೂಮಿ ಕಂಪಿಸುತ್ತಿದ್ದರೂ, ಜನ ಮುಂಜಾನೆ ಕೂಡಾ ಟ್ವಿಟ್ಟರ್ನಲ್ಲಿ ಭೂಕಂಪದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು. ಟ್ವಿಟ್ಟರ್ ಬಳಕೆದಾರರೊಬ್ಬರು, "ದೆಹಲಿ ಭೂಕಂಪವನ್ನು ಯಾವುದೇ ಸುದ್ದಿ ವಾಹಿನಿಗಳಿಗಿಂತ ವೇಗವಾಗಿ ಟ್ವಿಟ್ಟರ್, ವಿಶ್ವಕ್ಕೆ ಪರಿಚಯಿಸಿದೆ" ಎಂದು ಟ್ವೀಟ್ ಮಾಡಿದ್ದಾರೆ.





