ರಾಮಾಯಣದ ನಟ ಹಳಿಯಲ್ಲಿ ಶವವಾಗಿ ಪತ್ತೆ

ಮುಂಬೈ, ನ.17: ದೂರದರ್ಶನದಲ್ಲಿ ಪ್ರಸಾರವಾದ ಅತ್ಯಂತ ಜನಪ್ರಿಯ ಧಾರಾವಾಹಿ, ರಮಾನಂದ ಸಾಗರ್ ಅವರ ರಾಮಾಯಣದಲ್ಲಿ ವಿಭೀಷಣ ಪಾತ್ರ ನಿರ್ವಹಿಸಿದ್ದ ಪ್ರತಿಭಾವಂತ ಕಿರುತೆರೆ ನಟ, ಗುಜರಾತಿ ರಂಗಕರ್ಮಿ ಮುಖೇಶ್ ರಾವಲ್ ಅವರ ಶವ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ.
ಖಾಂಡಿವಿಲಿ ರೈಲು ನಿಲ್ದಾಣದ ಬಳಿ ಮಂಗಳವಾರ ಬೆಳಿಗ್ಗೆ ರಾವಲ್ ಶವ ಪತ್ತೆಯಾಗಿದೆ ಎಂದು ಸರಕಾರಿ ರೈಲ್ವೆ ಪೊಲೀಸರು ಹೇಳಿದ್ದಾರೆ. ರಾವತ್ (66) ರೈಲು ಹಳಿ ದಾಟುತ್ತಿದ್ದಾಗ ರೈಲು ಢಿಕ್ಕಿ ಹೊಡೆದು ಮೃತಪಟ್ಟಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.
ಖಾಂಡಿವಿಲಿ ಪಶ್ಚಿಮ ಪ್ರದೇಶದಲ್ಲಿ ವಾಸವಾಗಿದ್ದ ರಾವಲ್, ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮುಂಜಾನೆ 9.30ರ ಸುಮಾರಿಗೆ ಖಾಂಡಿವಿಲಿ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್ ಪೊಲೀಸರಿಗೆ ಅಪಘಾತದ ವಿಷಯ ತಿಳಿಸಿದರು. ತಕ್ಷಣ ಪೊಲೀಸರು ಆಗಮಿಸಿ, ಅವರನ್ನು ಆಸ್ಪತ್ರೆಗೆ ಸಾಗಿಸಿದರೂ, ಆ ವೇಳೆಗಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದರು. ಅವರ ಬಳಿ ಮೊಬೈಲ್ ಇಲ್ಲದ ಕಾರಣ ತಕ್ಷಣಕ್ಕೆ ಅವರ ಗುರುತು ಪತ್ತೆ ಮಾಡುವುದು ಸಾಧ್ಯವಾಗಲಿಲ್ಲ. ಬುಧವಾರ ಅವರ ಕುಟುಂಬದವರು ವಿವಿಧ ಆಸ್ಪತ್ರೆಗಳಲ್ಲಿ ಅವರ ಬಗ್ಗೆ ವಿಚಾರಣೆ ನಡೆಸಿತು. ಬಳಿಕ ಭಾವಚಿತ್ರದೊಂದಿಗೆ ಪೊಲೀಸ್ ಠಾಣೆಗಳಿಗೆ ತೆರಳಿದಾಗ, ರೈಲ್ವೆ ಪೊಲೀಸರ ಬಳಿ ವಿಚಾರಿಸುವಂತೆ ಪೊಲೀಸರು ಸೂಚಿಸಿದರು. ಬಳಿಕ ಅವರ ಮೃತದೇಹವನ್ನು ಅವರು ಧರಿಸಿದ್ದ ಬಟ್ಟೆಯ ಆಧಾರದಲ್ಲಿ ಪತ್ತೆ ಮಾಡಲಾಯಿತು. ಬುಧವಾರ ರಾತ್ರಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಅಪಘಾತ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸಾವಿನ ಎಲ್ಲ ಸಾಧ್ಯತೆಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ. ರಾಮಾಯಣ ಹೊರತಾಗಿ ಇವರು, ಗುಜರಾತಿ ಧಾರಾವಾಹಿ ಹಾಗೂ ಚಿತ್ರಗಳಲ್ಲಿ ನಟಿಸಿದ್ದರು. ಪ್ರಸ್ತುತ ಗುಜರಾತಿ ಟಿವಿ ಧಾರಾವಾಹಿ "ನಸ್ ನಸ್ ಮೈ ಖುನ್ನಾಸ್"ನಲ್ಲಿ ನಟಿಸುತ್ತಿದ್ದರು.







