ಆರೆಸ್ಸೆಸ್ ಕಾರ್ಯಕರ್ತನ ಕೊಲೆ ಪ್ರಕರಣ: ಸಿಪಿಐಎಂ ಕಾರ್ಯಕರ್ತರ ಸೆರೆ

ತಲಶ್ಶೇರಿ,ನ. 17: ಆರೆಸ್ಸೆಸ್ ಕಾರ್ಯಕರ್ತ ಪಿಣರಾಯಿ ಒಲಯಂಬಲದ ಕೊಲ್ಲನಾಂಡಿಯ ರಮಿತ್‌ನನ್ನು ಇರಿದು ಹತ್ಯೆಗೈದ ಪ್ರಕರಣದಲ್ಲಿ ಪೊಲೀಸರು ಮತ್ತೊಬ್ಬನನ್ನು ಬಂಧಿಸಿದ್ದಾರೆಂದು ವರದಿಯಾಗಿದೆ. ಬಂಧಿಸಲಾದ ಆರೋಪಿಯನ್ನು ಪಿಣರಾಯಿಯ ಸಿಪಿಐಎಂ ಕಾರ್ಯಕರ್ತ ಎಂದು ಗುರುತಿಸಲಾಗಿದೆ. ಜೊತೆಗೆ ಕೊಲೆಗೆ ಬಳಸಲಾಗಿದೆ ಎನ್ನಲಾದ ರಕ್ತ ಅಂಟಿದ ತಲವಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಿಣರಾಯಿ-ಪಾರಪ್ರಂ ರಸ್ತೆಯ ನಿರ್ಜನ ಪ್ರದೇಶವೊಂದರಲ್ಲಿ ತಲವಾರನ್ನು ಇರಿಸಲಾಗಿತ್ತು. ಕೋರ್ಟಿನ ಅನುಮತಿಯೊಂದಿಗೆ ತಲವಾರನ್ನು ಫಾರೆನ್ಸಿಕ್ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಕಳೆದ 10ಕ್ಕೆ ಬಂಧಿಸಲಾಗಿದ್ದು, ರಿಮಾಂಡ್‌ನಲ್ಲಿರುವ ಸಿಪಿಐಎಂ ಕಾರ್ಯಕರ್ತರಾದ ಪಿಣರಾಯಿ ಕಂಡೋತ್ತ್ ವೀಟ್ಟಿಲ್ ಜ್ಯೋತಿಷ್(25),ಪಿಣರಾಯಿ ಕಣ್ಣಾಡಿಮುಕ್ಕ್‌ನ ಶರಣ್ಯ ನಿವಾಸದ ಶರತ್(23)ರನ್ನು ಕಸ್ಟಡಿಗೆ ಪಡೆದು ಪ್ರಶ್ನಿಸಿದ ಹಿನ್ನೆಲೆಯಲ್ಲಿ ತಲವಾರು ಅಡಗಿಸಿಟ್ಟಿದ್ದ ಸ್ಥಳಪತ್ತೆಯಾಯಿತು ಎನ್ನಲಾಗಿದೆ. ಸರ್ಕಲ್ ಇನ್ಸ್‌ಪೆಕ್ಟರ್ ಪ್ರದೀಪನ್ ಎಂಬವರ ನೇತೃತ್ವದ ಪೊಲೀಸರ ತಂಡ ಆರೋಪಿಗಳನ್ನು ಕಸ್ಟಡಿಗೆ ಪಡೆದು ತನಿಖೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.





