ಪ್ರತಿಪಕ್ಷಗಳೊಂದಿಗೆ ಕೈ ಜೋಡಿಸಿದ ಶಿವಸೇನೆ
ಉದ್ಧವ್ ಜೊತೆ ರಾಜನಾಥ್ ಮಾತುಕತೆ

ಹೊಸದಿಲ್ಲಿ,ನ.17: ನೋಟು ನಿಷೇಧ ಕ್ರಮದ ವಿರುದ್ಧ ಪ್ರತಿಭಟಿಸಲು ಎನ್‌ಡಿಎ ಅಂಗಪಕ್ಷ ಶಿವಸೇನೆಯು ಬುಧವಾರ ಪ್ರತಿಪಕ್ಷಗಳೊಂದಿಗೆ ಕೈಜೋಡಿಸಿದ ಹಿನ್ನೆಲೆಯಲ್ಲಿ ಗೃಹಸಚಿವ ರಾಜನಾಥ ಸಿಂಗ್ ಅವರು ಇಂದು ಸೇನೆಯ ವರಿಷ್ಠ ಉದ್ಧವ್ ಠಾಕ್ರೆ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆಗಳನ್ನು ನಡೆಸಿದರು. ಶಿವಸೇನೆಯ ಕ್ರಮದ ಬಗ್ಗೆ ಬಿಜೆಪಿಯ ಅಸಮಾಧಾನವನ್ನು ಅವರು ಈ ವೇಳೆ ಠಾಕ್ರೆಯವರಿಗೆ ತಿಳಿಸಿದರು ಎನ್ನಲಾಗಿದೆ.
ಸುಮಾರು ಹತ್ತು ನಿಮಿಷಗಳ ಕಾಲ ಮಾತನಾಡಿದ ಸಿಂಗ್, ಮೋದಿ ಸರಕಾರದ ಭಾಗವಾಗಿದ್ದರೂ ಶಿವಸೇನೆಯು ಪ್ರತಿಪಕ್ಷಗಳೊಂದಿಗೆ ಕೈಜೋಡಿಸಿರುವುದು ಗೊಂದಲಕಾರಿ ಸಂಕೇತವನ್ನು ರವಾನಿಸುತ್ತದೆ ಮತ್ತು ಇದನ್ನು ನಿವಾರಿಸಬಹುದಾಗಿದೆ ಎಂದು ತಿಳಿಸಿದರೆನ್ನಲಾಗಿದೆ.
ನೋಟು ನಿಷೇಧ ಕ್ರಮವನ್ನು ವಿರೋಧಿಸಿ ಬುಧವಾರ ಆಪ್ ಹಾಗೂ ನ್ಯಾಷನಲ್ ಕಾನಫರೆನ್ಸ್ ಭಾಗಿತ್ವದಲ್ಲಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಬುಧವಾರ ರಾಷ್ಟ್ರಪತಿ ಭವನಕ್ಕೆ ಕೈಗೊಳ್ಳಲಾಗಿದ್ದ ಜಾಥಾದಲ್ಲಿ ಶಿವಸೇನೆಯೂ ಪಾಲ್ಗೊಂಡಿತ್ತು.
ಜಾಥಾದಲ್ಲಿ ಭಾಗಿಯಾಗಿದ್ದ ಇತರ ಪಕ್ಷಗಳು ರಾಷ್ಟ್ರಪತಿಗಳಿಗೆ ಸಲ್ಲಿಸಿದ ಅಹವಾಲಿನಲ್ಲಿ ನೋಟು ರದ್ದತಿ ಕ್ರಮವನ್ನು ತಕ್ಷಣ ಹಿಂದೆಗೆದುಕೊಳ್ಳಬೇಕೆಂದು ಬಯಸಿದ್ದರೆ, ಈ ವಿಷಯದಲ್ಲಿ ಭಿನ್ನ ನಿಲುವು ಪ್ರದರ್ಶಿಸಿದ ಶಿವಸೇನೆಯು ಪ್ರತ್ಯೇಕ ಅಹವಾಲು ಸಲ್ಲಿಸಿ ಹಳೆಯ ನೋಟುಗಳ ಸ್ವೀಕೃತಿಗೆ ಗಡುವನ್ನು ಸರಕಾರವು ವಿಸ್ತರಿಸಬೇಕು ಎಂದು ಒತ್ತಾಯಿಸಿದೆ.







