ಮೋಹನನ್ ಹತ್ಯೆ ಪ್ರಕರಣ: ಇನ್ನೂ ಇಬ್ಬರು ಆರೆಸ್ಸೆಸ್ಸಿಗರ ಬಂಧನ

ಕೂತ್ತಪರಂಬ್,ನ. 17: ಸಿಪಿಐಎಂ ನಾಯಕ ವಾಳಂಗಿಚ್ಚಾಲ್‌ನ ಮೋಹನನ್‌ರನ್ನು ಕಡಿದು ಕೊಲೆಗೈದ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೆಸ್ಸೆಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಪ್ರಕರಣದ ಪ್ರಧಾನ ಸೂತ್ರಧಾರರಾದ ಪಾದಿರಿಯಾಟ್ ಕನಕ ನಿವಾಸದ ಮಿನೀಷ್(32), ಓಡಕ್ಕಡವ್‌ನ ಪ್ರಿಯೇಶ್(23) ಎಂಬಿಬ್ಬರನ್ನು ಕೂತ್ತುಪರಂಬ್ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಪಿ. ಸುರೇಶ್ ಬಾಬು ನೇತೃತ್ವದ ವಿಶೇಷ ತನಿಖಾ ತಂಡ ಬಂಧಿಸಿದೆ.
ಇದರೊಂದಿಗೆ ಮೋಹನನ್ನ ಹತ್ಯೆ ಪ್ರಕರಣದಲ್ಲಿ ಬಂಧಿಸಲಾದ ಆರೆಸ್ಸೆಸ್ಸಿಗರ ಸಂಖ್ಯೆ ಒಂಬತ್ತಕ್ಕೇರಿದೆ. ಕೂತ್ತುಪರಂಬ್ ಜುಡಿಷಿಯಲ್ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್ ಕೋರ್ಟು ಆರೋಪಿಗಳಿಗೆ ರಿಮಾಂಡ್ ವಿಧಿಸಿದೆ. ಕಳೆದ ಅಕ್ಟೋಬರ್ ಹತ್ತರಂದು ಸಿಪಿಎಂ ವಾಳಂಗಿಚ್ಚಾಲ್ ಶಾಖಾ ಕಾರ್ಯದರ್ಶಿ ಪಡುವಿಲಾಯಿ ಸ್ಥಳೀಯ ಸಮಿತಿ ಸದಸ್ಯ ಕುಯಿಚ್ಚಾಲ್ ಮೋಹನನ್‌ರನ್ನು ತಂಡವೊಂದು ಮಾರಕವಾಗಿ ತಿವಿದು ಕೊಲೆಗೈದಿತ್ತು. ಮೋಹನನ್‌ರನ್ನು ಆಕ್ರಮಿಸಿದಾಗ ತಡೆಯಲುಶ್ರಮಿಸಿದಾಗ ಗಾಯಗೊಂಡಿರುವ ಸಿಪಿಎಂ ಕಾರ್ಯಕರ್ತ ಕುನ್ನೂರಿಕ್ಕದ ಅಶೋಕನ್ ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆಂದು ವರದಿ ತಿಳಿಸಿದೆ.





