ದತ್ತು ಗ್ರಾಮದಲ್ಲಿ ಸಚಿನ್ ತೆಂಡುಲ್ಕರ್

ಹೊಸದಿಲ್ಲಿ, ನ. 17: ಸಂಸದರ ದತ್ತು ಗ್ರಾಮಾಭಿವೃದ್ಧಿಯಂಗವಾಗಿ ಸಂಸದ್ ಆದರ್ಶ್ ಯೋಜನಾ ಪ್ರಕಾರ ಸಚಿನ್ ತೆಂಡುಲ್ಕರ್ ದತ್ತು ಪಡೆದ ಆಂಧ್ರಪ್ರದೇಶದ ಪುಟ್ಟಂರಾಜುವಾರಿ ಗ್ರಾಮವನ್ನು ಸಂಪೂರ್ಣ ಬಯಲು ಶೌಚಾಲಯ ಮುಕ್ತಗ್ರಾಮವೆಂದು ಘೋಷಿಸಲಾಗಿದೆ.
ಒಂದನೆ ಹಂತದ ಅಭಿವೃದ್ಧಿಗೆ ಸಂಬಂಧಿಸಿ ಹೊಸ ಆಟದ ಮೈದಾನವನ್ನು ನಿರ್ಮಿಸಲಿರುವ ಸಚಿನ್ ಮಕ್ಕಳಿಗೆ ಕ್ರಿಕೆಟ್ ಬ್ಯಾಟ್ ಮತ್ತು ಆಟದ ಕಿಟ್‌ಗಳನ್ನು ವಿತರಿಸಿದ್ದಾರೆಂದು ವರದಿಯಾಗಿದೆ. 2014ರಲ್ಲಿ ಗ್ರಾಮವನ್ನು ದತ್ತು ಪಡೆದ ಸಚಿನ್ ಗ್ರಾಮದಲ್ಲಿ ಮೂರು ಮನೆಗಳನ್ನು ಇಷ್ಟರಲ್ಲಿ ನಿರ್ಮಿಸಿಕೊಟ್ಟಿದ್ದಾರೆ. ಸುದೀರ್ಘಕಾಲದಿಂದ ಕತ್ತಲಲಿದ್ದ ಗ್ರಾಮಕ್ಕೆ ಸಚಿನ್‌ರ ಆಗಮನದಿಂದಾಗಿ ಪೂರ್ಣಾವಧಿ ವಿದ್ಯುತ್ ಸರಬರಾಜು ಸೌಲಭ್ಯಕಲ್ಪಿಸಲಾಗಿದ್ದು, ಕಿಲೊಮೀಟರ್ ದೂರದಿಂದ ಕುಡಿಯುವ ನೀರು ತರುತ್ತಿದ್ದ ಮಹಿಳೆಯರ ಪರಿಸ್ಥಿತಿಯೂ ಈಗ ಬದಲಾಗಿದೆ.
ಮನೆಯ ನೂರು ಮೀಟರ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಲು ಸಚಿನ್ ಮುಂದೆ ಬಂದಿದ್ದರು. ಹತ್ತು ಎಕರೆ ಪ್ರದೇಶದಲ್ಲಿ ಆಟದ ಮೈದಾನ ನಿರ್ಮಾಣ ಪೂರ್ಣಗೊಳ್ಳುವುದರೊಂದಿಗೆ ಕ್ರಿಕೆಟ್‌ನ ಜೊತೆಗೆ ಎಲ್ಲ ಕ್ರೀಡೆಗಳನ್ನು ಇಲ್ಲಿಗೆ ತರಲು ಸಚಿನ್ ಯೋಜನೆ ಹಾಕಿದ್ದೇನೆ ಎಂದು ಬಯಲು ಶೌಚಾಲಯ ಮುಕ್ತ ಗ್ರಾಮ ಘೋಷಣಾ ಸಮಾರಂಭದಲ್ಲಿ ಸಚಿನ್ ತೆಂಡುಲ್ಕರ್ ಹೇಳಿದ್ದಾರೆ. ಜೊತೆಗೆ ಸಮೀಪದ ಗ್ರಾಮ ಗೋಪಾಲಹಳ್ಳಿಯನ್ನು ಕೂಡಾ ದತ್ತು ತೆಗೆದುಕೊಳ್ಳುವುದಾಗಿ ಸಮಾರಂಭದಲ್ಲಿ ಸಚಿನ್ ಘೋಷಿಸಿದ್ದಾರೆಂದು ವರದಿ ತಿಳಿಸಿದೆ.







