ಓಟಗಾರ ಧರ್ಮಬೀರ್ ಸಿಂಗ್ ಗೆ ಎಂಟು ವರ್ಷಗಳ ನಿಷೇಧ

ಹೊಸದಿಲ್ಲಿ, ನ.17: ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ಕೊನೆಯ ಕ್ಷಣದಲ್ಲಿ ರಿಯೋ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶವನ್ನು ಕಳೆದುಕೊಂಡಿದ್ದ ಹರ್ಯಾಣದ ಓಟಗಾರ ಧರ್ಮಬೀರ್ ಸಿಂಗ್‌ಗೆ ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ(ನಾಡಾ) ಎಂಟು ವರ್ಷಗಳ ಕಾಲ ನಿಷೇಧ ಹೇರಿದೆ.
ಜು.11 ರಂದು ಬೆಂಗಳೂರಿನಲ್ಲಿ ನಡೆದ ಇಂಡಿಯನ್ ಗ್ರಾನ್‌ಪ್ರಿ ಕ್ರೀಡಾ ಕೂಟದ ವೇಳೆ ನಾಡಾ ನಡೆಸಿದ ಡೋಪಿಂಗ್ ಪರೀಕ್ಷೆಯಲ್ಲಿ 200 ಮೀ. ದೂರ ಓಟಗಾರ ಧರ್ಮಬೀರ್ ನಿಷೇಧಿತ ಅನಾಬಾಲಿಕ್ ಸ್ಟೀರಾಯ್ಡೆ ಸೇವಿಸಿರುವುದು ಪತ್ತೆಯಾಗಿತ್ತು.
ಡೋಪಿಂಗ್ ಪರೀಕ್ಷೆಯಲ್ಲಿ ಎರಡನೆ ಬಾರಿ ಸಿಲುಕಿರುವ ಧರ್ಮಬೀರ್‌ಗೆ ನಾಡಾದ ಉದ್ದೀಪನಾ ತಡೆ ಘಟಕದ ಶಿಸ್ತುಸಮಿತಿ 8 ವರ್ಷಗಳ ದೀರ್ಘಾವಧಿ ಶಿಕ್ಷೆ ವಿಧಿಸಿದೆ.
‘‘ಧರ್ಮಬೀರ್ ಎರಡನೆ ಬಾರಿ ಡೋಪಿಂಗ್ ಪರೀಕ್ಷೆಯಲ್ಲಿ ತಪ್ಪಿತಸ್ಥರಾಗಿರುವ ಕಾರಣ ನಾಡಾ ಸಮಿತಿ 8 ವರ್ಷಗಳ ಕಾಲ ನಿಷೇಧ ಹೇರಿದೆ. ಧರ್ಮಬೀರ್‌ಗೆ ನಿಷೇಧ ವಿಧಿಸಲಾಗಿರುವ ವಿಷಯವನ್ನು ನಾಡಾವು ಐಎಎಎಫ್ ಹಾಗೂ ವಾಡಾಕ್ಕೆ ಮಾಹಿತಿ ನೀಡಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
2012ರ ರಾಷ್ಟ್ರೀಯ ಅಂತರ್-ರಾಜ್ಯ ಚಾಂಪಿಯನ್‌ಶಿಪ್‌ನ ವೇಳೆ ಕಡ್ಡಾಯ ಡೋಪಿಂಗ್ ಪರೀಕ್ಷೆಗೆ ಹಾಜರಾಗದ 27ರ ಪ್ರಾಯದ ಧರ್ಮಬೀರ್‌ರಿಂದ ಚಿನ್ನದ ಪದಕವನ್ನು ಹಿಂದಕ್ಕೆ ಪಡೆಯಲಾಗಿತ್ತು. ಇದೀಗ 8 ವರ್ಷಗಳ ಕಾಲ ನಿಷೇಧಕ್ಕೆ ಗುರಿಯಾಗಿರುವ ಧರ್ಮಬೀರ್ ವೃತ್ತಿಜೀವನ ಬಹುತೇಕ ಕೊನೆಗೊಂಡಿದೆ.
ಒಲಿಂಪಿಕ್ಸ್‌ನಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳಲು ಭಾರತದ ಅಥ್ಲೆಟಿಕ್ಸ್ ಒಕ್ಕೂಟ ಜುಲೈ 11 ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ನಾಲ್ಕನೆ ಆವೃತ್ತಿಯ ಇಂಡಿಯನ್ ಗ್ರ್ಯಾನ್ ಪ್ರಿ ಟೂರ್ನಿಯಲ್ಲಿ 200 ಮೀ. ಓಟವನ್ನು 20.45 ಸೆಕೆಂಡ್‌ನಲ್ಲಿ ಗುರಿ ತಲುಪಿದ್ದ ಧರ್ಮಬೀರ್ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಒಲಿಂಪಿಕ್ಸ್‌ಗೆ ತೇರ್ಗಡೆಯಾಗಲು 20.50 ಸೆಕೆಂಡ್‌ನಲ್ಲಿ ಗುರಿ ತಲುಪಬೇಕಾಗಿತ್ತು.
ಧರ್ಮಬೀರ್ ಶ್ರೇಷ್ಠ ಸಮಯದಲ್ಲಿ ಗುರಿ ತಲುಪಿರುವ ಬಗ್ಗೆ ಕೆಲವರು ಶಂಕೆ ವ್ಯಕ್ತಪಡಿಸಿದ್ದರು. ಧರ್ಮಬೀರ್ ರಾಷ್ಟ್ರೀಯ ಶಿಬಿರದಲ್ಲಿ ಭಾಗವಹಿಸದೇ ವೈಯಕ್ತಿಕ ಕೋಚ್ ಸಹಾಯದಿಂದ ತರಬೇತಿ ಪಡೆದುಕೊಂಡಿದ್ದರು.
.......







