ಕಾಸರಗೋಡು: ಸಾವಯವ ಕೃಷಿ ತರಬೇತಿ ಕೇಂದ್ರ ಉದ್ಘಾಟನೆ
-(1).jpg)
ಕಾಸರಗೋಡು, ನ.17: ಕೃಷಿ ಅಭಿವೃದ್ಧಿ ಇಲಾಖೆ ಮತ್ತು ಆತ್ಮ ಕಾಸರಗೋಡು ಇದರ ವತಿಯಿಂದ ಕಾಸರಗೋಡು ಯೋಜನಾ ನಿರ್ದೇಶಕರ ಕಟ್ಟಡ, ಸಾವಯವ ಕೃಷಿ ತರಬೇತಿ ಕೇಂದ್ರವನ್ನು ಕೇರಳ ಕೃಷಿ ಸಚಿವ ವಿ.ಎಸ್. ಸುನಿಲ್ ಕುಮಾರ್ ಗುರುವಾರ ಉದ್ಘಾಟಿಸಿದರು.
ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಲಯದಲ್ಲಿ ಆತ್ಮ ಯೋಜನೆ ಯಶಸ್ವಿ, ಕೃಷಿಕರಿಗೆ ಸವಲತ್ತು ನೀಡಲು ಅನುಕೂಲ ಮಾಡಿಕೊಟ್ಟಿದೆ. ಜಿಲ್ಲೆಯಲ್ಲಿ ಕೃಷಿ ಇಲಾಖಾ ಕಚೇರಿಗಳಲ್ಲಿ ಅಧಿಕಾರಿ, ಸಿಬ್ಬಂದಿಯ ಕೊರತೆ ಇದೆ. ಕಾಸರಗೋಡು ಜಿಲ್ಲೆಯಲ್ಲಿ ಕೆಲಸ ಮಾಡಲು ಹಿಂಜರಿಯುತ್ತಾರೆ. ಇಂತಹ ಉದ್ಯೋಗಿಗಳು ಸರಕಾರಿ ಕೆಲಸ ಬಯಸುವುದು ಬೇಡ. ಸರಕಾರಿ ಉದ್ಯೋಗಕ್ಕಿರುವ ಪರೀಕ್ಷೆ ಬರೆಯುವುದು ಬೇಡ ಎಂದು ಸಚಿವರು ಹೇಳಿದರು.
ನೋಟು ನಿಷೇಧದಿಂದ ಕೃಷಿಕರ ಸಬ್ಸಿಡಿ, ಸಾಲ ಮೊದಲಾದವುಗಳಿಗೆ ಅಡ್ಡಿಯಾಗಬಾರದು. ಕೃಷಿಕರ ಬಗ್ಗೆ ವಿಶೇಷ ಕಾಳಜಿ ಕೇಂದ್ರ ಸರಕಾರಕ್ಕಿರಬೇಕು. ಅಡಿಕೆ ಕೃಷಿಕರ ಸಮಸ್ಯೆ ಪರಿಹಾರಕ್ಕೆ ವಿಶೇಷ ಪ್ಯಾಕೇಜ್ ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಕೃಷಿಕರ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದರು.
ಕೃಷಿ ಅಧಿಕಾರಿ ಪಿ. ಪ್ರದೀಪ್, ಬಿಜುಕುಮಾರ್, ನಗರಸಭಾಧ್ಯಕ್ಷೆ ಬೀಫಾತಿಮ್ಮ ಇಬ್ರಾಹೀಂ, ಜಿಲ್ಲಾಧಿಕಾರಿ ಜೀವನ್ ಬಾಬು, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ .ಸಿ.ಬಷೀರ್ ಮೊದಲಾದವರು ಉಪಸ್ಥಿತರಿದ್ದರು.







