ಪ್ಯಾರಿಸ್ ನಲ್ಲಿ ಮಲ್ಲಿಕಾ ಶೆರಾವತ್ ಮೇಲೆ ಹಲ್ಲೆ

ಪ್ಯಾರಿಸ್, ನ. 17: ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್‌ರ ಪ್ಯಾರಿಸ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಅವರ ಮೇಲೆ ಮೂವರು ಮುಸುಕುಧಾರಿ ಆಗಂತುಕರು ಅಶ್ರುವಾಯು ಹರಿಸಿ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
‘ಲೆ ಪ್ಯಾರಿಸಿಯನ್’ ಎಂಬ ಪತ್ರಿಕೆ ಈ ಬಗ್ಗೆ ಮೊದಲು ವರದಿ ಮಾಡಿದೆ.
ಆಗಂತುಕರು ಒಂದೇ ಒಂದು ಮಾತನಾಡದೆ ಶೆರಾವತ್ ಮತ್ತು ಅವರ ಜೊತೆಗಿದ್ದ ಪುರುಷನೋರ್ವನ ಮೇಲೆ ಅಶ್ರುವಾಯು ಹರಿಸಿದರು ಹಾಗೂ ಬಳಿಕ ಮುಷ್ಟಿಯಿಂದ ಹೊಡೆದರು ಎಂದು ಪತ್ರಿಕೆ ಹೇಳಿದೆ.
ಮಲ್ಲಿಕಾ ಅಂತಾರಾಷ್ಟ್ರೀಯ ಚಿತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.
ಅವರು ತನ್ನ ಸ್ನೇಹಿತನೊಂದಿಗೆ ನವೆಂಬರ್ 11 ಶುಕ್ರವಾರದಂದು ಅಪಾರ್ಟ್‌ಮೆಂಟ್‌ಗೆ ಆಗಮಿಸಿದ್ದರು.
ಆಕ್ರಮಣಕಾರರು ಪರಾರಿಯಾದ ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದರು.
ಪ್ಯಾರಿಸ್‌ನ ಹೊಟೇಲೊಂದರಲ್ಲಿ ರಿಯಲಿಟಿ ಟಿವಿ ತಾರೆ ಕಿಮ್ ಕಾರ್ಡಶಿಯನ್ ಮೇಲೆ ಇಂಥದೇ ದಾಳಿ ನಡೆದು ಒಂದು ತಿಂಗಳು ತುಂಬುವ ಮುನ್ನವೇ ಈ ಘಟನೆ ನಡೆದಿದೆ.
‘‘ಹಲ್ಲೆಕೋರರು ಬಳಿಕ ಪರಾರಿಯದರು. ಆಘಾತಗೊಂಡ ಮಲ್ಲಿಕಾ ಮತ್ತು ಅವರ ಸ್ನೇಹಿತ ತುರ್ತು ಸೇವೆಗೆ ಕರೆ ಮಾಡಿದರು. ಕ್ರಿಮಿನಲ್ ತನಿಖೆ ಆರಂಭಗೊಂಡಿದೆ. ದುಷ್ಕರ್ಮಿಗಳು ದರೋಡೆಗೆ ಯೋಜನೆ ರೂಪಿಸಿರಬಹುದು ಎಂಬ ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ’’ ಎಂದು ವರದಿ ಹೇಳಿದೆ.







