ಬ್ಯಾಂಕ್ ಶಾಖೆಯನ್ನು ಸ್ಥಳಾಂತರಿಸಿ ಅನ್ಯಾಯ: ಆರೋಪ
ಕಡಬ, ನ.17: ಇಲ್ಲಿಗೆ ಸಮೀಪದ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯ ಜೆ.ಜೆ ಪ್ಲಾಜಾದಲ್ಲಿ ತನ್ನ ಪ್ರಯತ್ನದಿಂದಾಗಿ ವ್ಯವಹಾರ ಆರಂಭಿಸಿದ ವಿಜಯ ಬ್ಯಾಂಕಿನ ಶಾಖೆಯನ್ನು ಏಕಾಏಕಿ ಬೇರೆಡೆಗೆ ಸ್ಥಳಾಂತರಿಸುತ್ತಿರುವುದು ತೀರಾ ಅನ್ಯಾಯ ಎಂದು ಜೆ.ಜೆ.ಪ್ಲಾಜಾ ಕಟ್ಟಡ ಮಾಲಕ ಸ್ಯಾಮುವೆಲ್ ಜೋಸ್ ಆರೋಪಿಸಿದರು.
ಅವರು ಗುರುವಾರ ಕಡಬದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ವಿಜಯ ಬ್ಯಾಂಕಿನ ಅಧಿಕಾರಿಗಳ ಬೇಡಿಕೆಯಂತೆ 2013ರಲ್ಲಿ ಜೆಜೆ ಪ್ಲಾಜಾ ವಾಣಿಜ್ಯ ಕಟ್ಟಡದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಹಾರ್ಡ್‌ವೇರ್ ಅಂಗಡಿ, ಮಿನಿ ಸೂಪರ್ ಮಾರ್ಕೆಟ್ ಹಾಗೂ ರಬ್ಬರ್ ಖರೀದಿ ಕೇಂದ್ರ ಮುಂತಾದ ಮೂರು ವ್ಯಾಪಾರ ಕೇಂದ್ರಗಳನ್ನು ತೆರವುಗೊಳಿಸಿ ಬ್ಯಾಂಕಿನ ಬೇಡಿಕೆಗನುಸಾರವಾಗಿ 16 ಲಕ್ಷ ರೂ. ಖರ್ಚು ಮಾಡಿ ಕಟ್ಟಡ ಮರುವಿನ್ಯಾಸಗೊಳಿಸಿ ಬ್ಯಾಂಕ್‌ನ ಶಾಖೆಯನ್ನು ಪ್ರಾರಂಭಿಸಲಾಗಿತ್ತು. ತಿಂಗಳಿಗೆ 13,000 ರೂ. ಬಾಡಿಗೆ ರೂಪದಲ್ಲಿ ಆದಾಯ ಬರುತ್ತಿದ್ದ ವ್ಯವಹಾರಗಳನ್ನು ಬಿಟ್ಟು ಕೇವಲ 8,000 ರೂ.ಗೆ ಬ್ಯಾಂಕಿಗೆ ಬಾಡಿಗೆಗೆ ಕಟ್ಟಡವನ್ನು ನೀಡಲಾಗಿತ್ತು. ಕಳೆದ ವರ್ಷ ಬ್ಯಾಂಕಿನ ಅಧಿಕಾರಿಗಳು ಲಾಕರ್ ಬೇಕೆಂದಾಗ ಕಟ್ಟಡದಲ್ಲಿ ವ್ಯವಹಾರ ನಡೆಸುತ್ತಿದ್ದ ಹೋಟೆಲನ್ನು ತೆರವುಗೊಳಿಸಿ ಮಾಡಬೇಕಾಗುತ್ತದೆ. ಸ್ವಲ್ಪಮಟ್ಟಿನ ಬಾಡಿಗೆ ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ ಎಂದು ತಿಳಿಸಿದ್ದೆ. ಮಾತ್ರವಲ್ಲ ಅದೇ ಬ್ಯಾಂಕಿನಿಂದ 18 ಲಕ್ಷ ರೂ. ಸಾಲ ಮಾಡಿ ಹೊಸ ಕಟ್ಟಡದ ಕಾಮಗಾರಿ ಪ್ರಾರಂಭಿಸಿದೆ. ಈ ಮಧ್ಯೆ ಬ್ಯಾಂಕ್ ಬೇರೆ ಕಟ್ಟಡಕ್ಕೆ ಸ್ಥಳಾಂತರವಾಗುತ್ತದೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಆದರೆ ನನಗೆ ಯಾವುದೇ ಅಧಿಕೃತ ಮಾಹಿತಿ ಬ್ಯಾಂಕಿನಿಂದ ಬಂದಿರಲಿಲ್ಲ. ಈ ಬಗ್ಗೆ ಬ್ಯಾಂಕಿನ ವಿಬಾಗೀಯ ಕಚೇರಿ ಅಧಿಕಾರಿಗಳಲ್ಲಿ ವಿಚಾರಿಸಿದಾಗ, ವೆಬ್‌ಸೈಟ್ ಹಾಗು ನೊಟೀಸ್ ಬೋರ್ಡ್‌ನಲ್ಲಿ ಪ್ರಕಟನೆ ನೀಡಿರುವುದು ಹಾಗೂ ಎರಡು ಟೆಂಡರ್ ಆಹ್ವಾನ ಬಂದಿರುವುದು ಗೊತ್ತಾಯಿತು. ಇದೇ ವೇಳೆ ಅಧಿಕಾರಿಗಳು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಜೋಸ್ ಆರೋಪಿಸಿದರು.
ಇದೀಗ ಹೋಟೆಲ್ ತೆರವುಗೊಳಿಸಿ ಬ್ಯಾಂಕಿಗಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವಾಗ ದಿನಾಂಕ 19-10-2016 ರಂದು ಬ್ಯಾಂಕ್ ಸ್ಥಳಾಂತರಗೊಳ್ಳುವ ಕುರಿತು ಪತ್ರ ನೀಡಿರುತ್ತಾರೆ. ಆದರೆ ಪತ್ರದಲ್ಲಿ ಯಾವ ಕಾರಣಕ್ಕಾಗಿ ಬ್ಯಾಂಕ್ ಸ್ಥಳಾಂತರಗೊಳ್ಳುತ್ತಿದೆ ಎಂಬುದಾಗಿ ತಿಳಿಸಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಬ್ಯಾಂಕಿಗೋಸ್ಕರ ಸುಮಾರು ರೂ. 50 ಲಕ್ಷಕ್ಕಿಂತಲೂ ಹೆಚ್ಚಾಗಿ ಖರ್ಚು ಮಾಡಿ ಕಟ್ಟಡವನ್ನು ಪರಿವರ್ತನೆಗೊಳಿಸಿ ಒದಗಿಸಿದ ನನಗೆ ಸರಿಯಾದ ಮಾಹಿತಿಯನ್ನು ನೀಡದೇ ಏಕಾಏಕಿ ಸ್ಥಳಾಂತರಗೊಳಿಸುವುದು ಅನ್ಯಾಯ. 15 ವರ್ಷಗಳ ಅಗ್ರಿಮೆಂಟ್ ಇದ್ದರೂ ಬ್ಯಾಂಕ್ ತೆರೆದು ಕೇವಲ 3ನೇ ವರ್ಷದಲ್ಲಿ ಬ್ಯಾಂಕಿನ ಕೆಲವು ಅಧಿಕಾರಿಗಳ ಪಿತೂರಿಯಿಂದ ನನಗೆ ಅಪಾರ ನಷ್ಟವಾಗಿದೆ. ನೂಜಿಬಾಳ್ತಿಲ ಮತ್ತು ಸುತ್ತಮುತ್ತಲಿನ ಅಭಿವೃದ್ದಿಗಾಗಿ ನನ್ನ ಸಂಪಾದನೆಯನ್ನು ವ್ಯಯಮಾಡಿ ಒಂದೊಂದು ಉದ್ದಿಮೆಯನ್ನು ಪ್ರಾರಂಭಿಸುತ್ತಿದ್ದರೆ, ಅದನ್ನು ಸಹಿಸದ ಕೆಲವು ವಿಕೃತ ಮನಸ್ಸಿನವರೊಂದಿಗೆ ವಿಜಯಾ ಬ್ಯಾಂಕಿನ ಕೆಲವು ಸಿಬ್ಬಂದಿ ಹಾಗೂ ಅಧಿಕಾರಿಗಳು ಶಾಮೀಲಾಗಿ ನಡೆಸಿದ ಪಿತೂರಿಯಾಗಿದೆ. ಮಾತ್ರವಲ್ಲ ಬ್ಯಾಂಕ್ ಶಾಖೆ ಆರಂಭಿಸಿದಾಗ ನಾನು ಠೇವಣಿ ಇರಿಸಿದ್ದನ್ನು ಗೌಪ್ಯತೆಯಲ್ಲಿಡಬೇಕಾದ ಸಿಬ್ಬಂದಿ ಬಹಿರಂಗಪಡಿಸಿದ್ದಾರೆ ಎಂದು ಜೋಸ್ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಫಾ.ಕುರಿಯಕೋಸ್, ದಲಿತ ಮುಖಂಡ ಗುರುವಪ್ಪ ಕಲ್ಲುಗುಡ್ಡೆ, ತೋಮಸ್ ಇಡೆಯಾಲ್, ಪಿ.ಜಿ.ಚಾಕೋ. ಜಾನಕಿ ಎನ್. ಕುಬಲಾಡಿ, ಸನು ಕಲ್ಲುಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.
ಭದ್ರತೆಯ ದೃಷ್ಟಿಯಿಂದ ಸ್ಥಳಾಂತರ: ಡಿಜಿಎಂ
ವಿಜಯ ಬ್ಯಾಂಕಿನ ನೂಜಿಬಾಳ್ತಿಲ ಶಾಖೆಯನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸುವುದರಲ್ಲಿ ಯಾವುದೇ ದುರುದ್ದೇಶವಿಲ್ಲ. ಭದ್ರತೆಯ ದೃಷ್ಟಿಯಿಂದ ಸ್ಥಳಾಂತರ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶವಾಗಿರುವುದರಿಂದ ಇಲ್ಲಿನ ಗ್ರಾಹಕರ ಚಿನ್ನದ ಈಡಿನ ಸಾಲಕ್ಕೆ ಬೇಡಿಕೆಯಿತ್ತು. ಇದಕ್ಕಾಗಿ ಭದ್ರತಾ ಕೊಠಡಿಯನ್ನು ನಿರ್ಮಿಸಿಕೊಡುವಂತೆ ಕಟ್ಟಡ ಮಾಲಕರಲ್ಲಿ ಬೇಡಿಕೆ ಇಡಲಾಗಿತ್ತು. ಆದರೆ ಅವರು ಸಮಯಕ್ಕೆ ಸರಿಯಾಗಿ ನಮ್ಮ ಬೇಡಿಕೆಯನ್ನು ಈಡೇರಿಸಿಲ್ಲ. ಮಾತ್ರವಲ್ಲ ಬಾಡಿಗೆ ಕೂಡಾ ಹೆಚ್ಚು ನೀಡಬೇಕೆಂದು ಹೇಳಿದ್ದರು. ನಾವು ಭದ್ರತೆಯ ದೃಷ್ಟಿಯಿಂದ ಸ್ಥಳಾಂತರ ಮಾಡುತ್ತಿದ್ದೇವೆ ಹೊರತು ಇದರಲ್ಲಿ ಯಾವುದೇ ಪಿತೂರಿ ಇಲ್ಲ ಎಂದು ವಿಜಯ ಬ್ಯಾಂಕಿನ ಮಂಗಳೂರು ವಿಭಾಗೀಯ ಮಹಾ ಪ್ರಬಂಧಕ ಸುರೇಂದ್ರ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದಾರೆ.







