ಬಂಟ್ವಾಳ: ಕನಕದಾಸ ಜಯಂತಿ ಆಚರಣೆ

ಬಂಟ್ವಾಳ, ನ. 17: ಸಾಹಿತ್ಯ ಕ್ಷೇತ್ರ ಮೇಲ್ವರ್ಗದ ಜನರಿಗೆ ಮಾತ್ರ ಸೀಮಿತ ಎನ್ನುವ ಕಾಲಘಟ್ಟದಲ್ಲಿ ಕೀರ್ತನೆಗಳ ಮೂಲಕ ಸಾಹಿತ್ಯವನ್ನು ರಚಿಸಿ ಸಾಮಾನ್ಯ ಜನರಿಗೂ ತನ್ನ ಅನುಭವದ ಅನುಭಾವವನ್ನು ನೀಡಿ ದಾಸ ಸಾಹಿತ್ಯಕ್ಕೆ ಮೇಲ್ಪಂಕ್ತಿ ಹಾಕಿದವರು ಕನಕದಾಸರು ಎಂದು ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ರವೀಶ್ ಸಿ.ಆರ್. ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಬಿ.ಸಿ.ರೋಡಿನ ತಾಲೂಕು ಕಚೇರಿಯಲ್ಲಿ ನಡೆದ ಕನಕ ಜಯಂತಿ ಆಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತನ್ನ ಅಚಲ ಭಕ್ತಿಯ ಮೂಲಕ ಉಡುಪಿಯಲ್ಲಿ ಶ್ರೀ ಕೃಷ್ಣನನ್ನೇ ತನ್ನೆಡೆಗೆ ತಿರುಗುವಂತೆ ಮಾಡಿದ ಕನಕದಾಸರ ದಾರ್ಶನಿಕತೆ ಅಗಾಧವಾದುದು ಎಂದರು.
ತಹಶೀಲ್ದಾರ್ ಪುರಂದರ ಹೆಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿನ ಜಾತಿಪದ್ದತಿಗಳನ್ನು ನಿವಾರಿಸಲು ಸರಕಾರಗಳು ಹಲವಾರು ಕಾನೂನುಗಳನ್ನು ಜಾರಿಗೆ ತರುತ್ತಿವೆ. ಆದರೆ ಐದುನೂರು ವರುಷಗಳ ಹಿಂದೆಯೇ ಜಾತಿಪದ್ದತಿಗಳ ವಿರುದ್ದ ಹೋರಾಟ ನಡೆಸಿ ತನ್ನ ಕೀರ್ತನೆಗಳ ಮೂಲಕ ಸಮಾಜದಲ್ಲಿ ಅನಿಷ್ಠಪದ್ದತಿಗಳನ್ನು ಎತ್ತಿ ತೋರಿಸಿದ ಕನಕದಾಸರು ಎಲ್ಲಾ ಕಾಲಕ್ಕೂ ಪ್ರಸ್ತುತರು ಎಂದು ಅಭಿಪ್ರಾಯಪಟ್ಟರು.
ಪುರಸಬೆ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ಶುಭ ಕೋರಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಸಿಪ್ರಿಯಾನ್ ಮಿರಾಂಡ ಕ್ಷೇತ್ರ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಶ್ರೀಕಾಂತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಉಪತಹಶೀಲ್ದಾರ್ ಭಾಸ್ಕರ ರಾವ್, ಪರಮೇಶ್ವರ ನಾಯ್ಕ, ಸರ್ವೇ ಮೇಲ್ವಿಚಾರಕ ನಿಸಾರ್ ಅಹ್ಮದ್, ಕಂದಾಯ ನಿರೀಕ್ಷಕ ದಿವಾಕರ್ ಹಾಜರಿದ್ದರು. ಉಪತಹಶೀಲ್ದಾರ್ ಪರಮೇಶ್ವರ ಮೊಯಿಲಿ ಸ್ವಾಗತಿಸಿದರು. ಕಂದಾಯ ನಿರೀಕ್ಷಕ ರಾಮ ಕೆ. ವಂದಿಸಿದರು. ನವೀನ್ ಕಾರ್ಯಕ್ರಮ ನಿರೂಪಿಸಿದರು.







