ನೋಟು ನಿಷೇಧದಿಂದ ಬಡವರಿಗೆ ತೊಂದರೆ: ಸೊರಕೆ

ಪಡುಬಿದ್ರೆ, ನ.17: ಪೂರ್ವ ತಯಾರಿ ಇಲ್ಲದೆ ಕೇಂದ್ರ ಸರಕಾರ ನೋಟು ನಿಷೇಧಕ್ಕೆ ಮುಂದಾಗಿರುವುದರಿಂದ ಬಡಜನರಿಗೆ ಭಾರೀ ಸಮಸ್ಯೆಯಾಗಿದೆ ಎಂದು ಕಾಪು ಶಾಸಕ ವಿನಯಕುಮಾರ್ ಸೊರಕೆ ಆರೋಪಿಸಿದ್ದಾರೆ.
ಅವರು ಬುಧವಾರ ಪಲಿಮಾರಿನ ಅಂಚೆಕಚೇರಿಯಲ್ಲಿ ಚಿಲ್ಲರೆ ಸಮಸ್ಯೆಯಿಂದ ಪಿಂಚಣಿ ಹಣ ನೀಡದೆ ಇರುವುದರಿಂದ ಚಿಕಿತ್ಸೆಗೆ ಹಣವಿಲ್ಲದೆ ಮೃತಪಟ್ಟ ಪಲಿಮಾರಿನ ರಾಜೀವ್‌ನಗರದ ಮಹಾಬಲ ಪೂಜಾರಿಯರ ಮನೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಯುಪಿಎ ಸರಕಾರ 2006ರಲ್ಲಿ 500 ರೂ. ಮತ್ತು 1,000 ರೂ.ನ್ನು ನಿಷೇಧಿಸಲು ಮುಂದಾದಾಗ ಬಿಜೆಪಿ ಸರಕಾರ ವಿರೋಧಿಸಿತ್ತು. ಆದರೆ ಇದೀಗ ಏಕಾಏಕಿ ಯಾವುದೇ ಪೂರ್ವ ತಯಾರಿ ಇಲ್ಲದೆ ನೋಟುಗಳನ್ನು ನಿಷೇಧಿಸಲು ಹೊರಟಿರುವುದರಿಂದ ಶ್ರೀಮಂತರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಆದರೆ ಬಡವರಿಗೆ ಇದು ತುಂಬಾ ಸಮಸ್ಯೆಯಾಗಿದೆ ಎಂದರು.
ಪಿಂಚಣಿ ಹಣವನ್ನು ವೃದ್ಧರಿಗೆ ಚಿಲ್ಲರೆ ಸಮಸ್ಯೆ ನೀಡಿ ತಡೆಹಿಡಿದಿರುವುದರಿಂದ ವೃದ್ಧರು ತುಂಬಾ ಸಮಸ್ಯೆ ಎದುರಿಸುತ್ತಿದ್ದಾರೆ. ಕೂಡಲೇ ಈ ಸಮಸ್ಯೆ ಪರಿಹರಿಸಿ ಪಿಂಚಣಿ ಹಣವನ್ನು ನೀಡಬೇಕು ಎಂದು ಒತ್ತಾಯಿಸಿದರು. ಭೇಟಿಯ ವೇಳೆ ಅವರ ಪತ್ನಿ ಇಂದಿರಾ ಪೂಜಾರ್ತಿಗೆ ಸಾಂತ್ವನ ಹೇಳಿ ವೈಯಕ್ತಿಕ ನೆಲೆಯಲ್ಲಿ ಧನಸಹಾಯ ನೀಡಿದರು.
ತಾಲೂಕು ಪಂಚಾಯತ್ ಸದಸ್ಯ ದಿನೇಶ್ ಪಲಿಮಾರ್, ಗೋಪಾಲ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.





