ಕಾಪು ಕ್ಷೇತ್ರದ ಅಭಿವೃದ್ಧಿಗೆ 300 ಕೋಟಿ ರೂ. ಅನುದಾನ: ಸೊರಕೆ

ಪಡುಬಿದ್ರೆ, ನ.17: ಪ್ರಸ್ತುತ ವಾರ್ಷಿಕ ವರ್ಷದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿವಿಧ ಮೂಲಗಳಿಂದ ಸುಮಾರು 300 ಕೋಟಿ ರೂ. ತೊಡಗಿಸಿಕೊಳ್ಳಲಾಗುತ್ತಿದೆ ಎಂದು ಕಾಪು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.
ಗುರುವಾರ ಪಡುಬಿದ್ರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧೆಡೆ ಶಿಲಾನ್ಯಾಸ ಮತ್ತು ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಡ್ಸಾಲು ಗ್ರಾಮದ ಕಲ್ಲಟ್ಟೆ ಶ್ರೀ ಬ್ರಹ್ಮಮುಗೇರ್ಕಳ ದೈವಸ್ಥಾನದಲ್ಲಿ ಸಭಾಭವನ ನಿರ್ಮಾಣ ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶಿಲಾನ್ಯಾಸ ನೆರವೇರಿಸಿದ ಅವರು ಅಂಬೇಡ್ಕರ್ ಮೇಧಾಶಕ್ತಿಯಿಂದಾಗಿ ಇಂದು ಎಲ್ಲರಿಗೂ ಮೂಲಭೂತ ಹಕ್ಕು ಸಿಕ್ಕಿದೆ. ನಾನಾ ರೀತಿಯ ಸಾಮಾಜಿಕ ಭದ್ರತೆ ಇಲ್ಲದ ಕಾರಣ ಮೇಲು-ಕೀಳೂ, ಬಡವ-ಧನಿಕನೆಂಬ ಅಂತರ ಸೃಷ್ಟಿಯಾಯಿತು. ಆದರೆ ಪರಿಶಿಷ್ಟ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಬೆಳಗಾಂ ಅಧಿವೇಶನದಲ್ಲಿ ತೀರ್ಮಾನ ಕೈಗೊಂಡು ಪರಿಶಿಷ್ಠ ಜಾತಿ, ವರ್ಗಗಳ ಅಭಿವೃದ್ಧಿಗೆ 16 ಸಾವಿರ ಕೋಟಿ ಹಣ ವಿನಿಯೋಗಿಸಲಾಗುತ್ತಿದೆ ಎಂದು ಹೇಳಿದರು.
ಕಂಚಿನಡ್ಕ ಪೊಲೀಸ್ ಕ್ವಾಟ್ರಸ್‌ನಿಂದ ಅಬ್ಬೇಡಿ ತುಳುವ ಸಂಗಮ ಪರಿಶಿಷ್ಟ ಜಾತಿ ಕಾಲನಿ ರಸ್ತೆ ಅಭಿವೃದ್ಧಿಗಾಗಿ ಸುಮಾರು 10 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿ ಮತ್ತು ಮುರುಡಿ ಬ್ರಹ್ಮಸ್ಥಾನದಿಂದ ಪಡುಬಿದ್ರೆ ಗುಡ್ಡೆ ಹೌಸ್ ದಲಿತ ಕಾಲನಿ ರಸ್ತೆ ಅಭಿವೃದ್ಧಿಗಾಗಿ 10 ಲಕ್ಷದ ಕಾಮಗಾರಿಯ ಶಂಕುಸ್ಥಾಪನೆಗಳನ್ನು ನೆರವೇರಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಪಡುಬಿದ್ರೆ, ತಾಲೂಕು ಪಂಚಾಯತ್ ಸದಸ್ಯ ದಿನೇಶ್ ಕೋಟ್ಯಾನ್ ಪಲಿಮಾರ್, ನೀತಾ ಗುರುರಾಜ್, ಗ್ರಾಮ ಪಂಚಾಯತ್ ಅಧ್ಯಕ್ಷೆ ದಮಯಂತಿ ವಿ.ಅಮೀನ್, ಉಪಾಧ್ಯಕ್ಷ ವೈ. ಸುಕುಮಾರ್, ವೈ. ಸುಧೀರ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.







