ರೂ.500ರ ಹೊಸ ನೋಟು ಮುದ್ರಣಕ್ಕೆ ಬೇಕು 6 ತಿಂಗಳು!

ಹೊಸದಿಲ್ಲಿ, ನ.17: ರದ್ದಾಗಿರುವ ನೋಟುಗಳ ಬದಲಿಗೆ ಹೊಸ ನೋಟುಗಳು ಶೀಘ್ರವೇ ಚಲಾವಣೆಗೆ ಬರಲಿವೆಯೇ? ದೇಶದ ಎಲ್ಲ ನೋಟು ಮುದ್ರಣಾಲಯಗಳ ಸಾಮರ್ಥ್ಯವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಬಹುಶಃ ಇಲ್ಲ.
ನೋಟು ಮುದ್ರಣಾಲಯಗಳ ಸಾಮರ್ಥ್ಯವನ್ನಾಧರಿಸಿದ ಇತ್ತೀಚಿನ ಲೆಕ್ಕಾಚಾರದ ಪ್ರಕಾರ ರದ್ದಾದ ನೋಟುಗಳಷ್ಟು ಹೊಸ ನೋಟುಗಳು ಬರಬೇಕಾದರೆ ಸುಮಾರು 6 ತಿಂಗಳು ಬೇಕಾಗಬಹುದು.
ನ.10ರ ಬಳಿಕ ಮುದ್ರಿಸಲು ತೊಡಗಲಾಗಿದೆಯೆನ್ನಲಾಗಿರುವ ರೂ. 500ರ ನೋಟುಗಳ ಮಟ್ಟಿಗಂತೂ ಇದು ಹೆಚ್ಚು ಸತ್ಯ. ರೂ.500ರ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಚಲಾವಣೆಗೆ ಬಾರದೆ ‘ನೋಟಿನ ಬೇನೆ’ ಕೊನೆಗೊಳ್ಳದು. ಏಕೆಂದರೆ ರೂ.2 ಸಾವಿರದ ನೋಟನ್ನು ಸಣ್ಣ ವೌಲ್ಯದ ನೋಟುಗಳಿಗೆ ಚಿಲ್ಲರೆ ಮಾಡಿಸುವುದು. ಅಲ್ಲಿಯ ವರೆಗೆ ಬಹಳ ಕಷ್ಟವಾಗಲಿದೆ. ಆದಾಗ್ಯೂ ರೂ.2 ಸಾವಿರದ ನೋಟುಗಳು ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಮುದ್ರಣಗೊಂಡಿವೆಯೆಂಬುದನ್ನು ಲೆಕ್ಕಾಚಾರ ತೋರಿಸುತ್ತಿದೆ.
ಶೀಘ್ರವೇ ಸಾಕಷ್ಟು ಪ್ರಮಾಣದ ಹಣ ಚಲಾವಣೆಗೆ ಬರಲಿದೆಯೆಂದು ಪ್ರತಿಪಾದಿಸುವಲ್ಲಿ ಸರಕಾರವು ಭಾರೀ ಆಶಾವಾದಿಯಾಗಿದೆಯೆಂಬುದು ಸಾರ್ವಜನಿಕ ಮೂಲಗಳಿಂದ ಬರುವ ಮಾಹಿತಿ ತೋರಿಸುತ್ತಿದೆ. ಇಂತಹ ಹಠಾತ್ ಹಾಗೂ ಭಾರೀ ಕೆಲಸಕ್ಕೆ ಬೇಕಾದ ಮಿತ ಸಾಮರ್ಥ್ಯ ದೇಶದ ನೋಟು ಮುದ್ರಣಾಲಯಗಳಿಗಿರುವುದು ಇದಕ್ಕೆ ಕಾರಣ.
ಮಹಾರಾಷ್ಟ್ರದ ನಾಶಿಕ್, ಮಧ್ಯಪ್ರದೇಶದ ದಿವಾಸ್, ಪಶ್ಚಿಮಬಂಗಾಳದ ಸಾಲ್ಬೊನಿ ಹಾಗೂ ಕರ್ನಾಟಕದ ಮೈಸೂರುಗಳಲ್ಲಿ ನೋಟು ಮುದ್ರಣಾಲಯಗಳಿವೆ. ಮೊದಲ ಎರಡು ಮುದ್ರಣಾಲಯಗಳು ಸೆಕ್ಯುರಿಟಿ ಪ್ರಿಂಟಿಂಗ್ ಆ್ಯಂಡ್ ಮಿಂಟಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿ. ಮೂಲಕ ಕೇಂದ್ರ ಸರಕಾರದ ಸ್ವಾಮ್ಯಕ್ಕೆ ಒಳಪಟ್ಟಿವೆ. ಅವುಗಳ ನೋಟು ಮುದ್ರಣದ ವಾರ್ಷಿಕ ಸಾಮರ್ಥ್ಯವು ದೇಶದ ಒಟ್ಟು ನೋಟು ಮುದ್ರಣದ ಶೇ.40ರಷ್ಟೆಂದು ವಿತ್ತ ಸಚಿವಾಲಯದ ಇತ್ತೀಚಿನ ವಾರ್ಷಿಕ ವರದಿ ತಿಳಿಸಿದೆ.
ನಾಶಿಕ್ ಹಾಗೂ ದಿವಾಸ್‌ಗಳಲ್ಲಿರುವ ಇನ್ನೆರಡು ಮುದ್ರಣಾಲಯಗಳು ಭಾರತೀಯ ರಿಸರ್ವ್ ಬ್ಯಾಂಕ್‌ನ(ಆರ್‌ಬಿಐ) ಅಂಗ ಸಂಸ್ಥೆ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈ. ಲಿ. ಯ(ಬಿಆರ್‌ಬಿಎನ್‌ಎಂಪಿಎಲ್) ಭಾಗವಾಗಿರುತ್ತವೆ. ಒಟ್ಟು ನೋಟು ಮುದ್ರಣದ ಶೇ.60ರಷ್ಟು ಸಾಮರ್ಥ್ಯವಿರುವ ಈ ಮುದ್ರಣಾಲಯಗಳು ವರ್ಷಕ್ಕೆ 2 ಶಿಫ್ಟ್‌ಗಳಲ್ಲಿ 16 ಶತಕೋಟಿ ನೋಟುಗಳನ್ನು ಮುದ್ರಿಸಲು ಶಕ್ತವಾಗಿವೆಯೆಂದು ಬಿಆರ್‌ಬಿಎನ್‌ಎಂಪಿಎಲ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿ ಹೇಳುತ್ತಿವೆ.
ಅಂದರೆ, ದೇಶದ ವಾರ್ಷಿಕ 2 ಶಿಫ್ಟ್‌ಗಳಲ್ಲಿ ನೋಟು ಮುದ್ರಣ ಸಾಮರ್ಥ್ಯ 26.66 ಶತಕೋಟಿ ನೋಟುಗಳು. ಸರಕಾರದ ಪ್ರಕಾರ ಈಗ ನಡೆಯುತ್ತಿರುವಂತೆ ಎಲ್ಲ 3 ಶಿಫ್ಟ್‌ಗಳಲ್ಲಿ ಕೆಲಸ ನಡೆದರೆ, ನಾಲ್ಕು ಪ್ರೆಸ್‌ಗಳು ವರ್ಷಕ್ಕೆ 40 ಶತಕೋಟಿ ನೋಟು(ಯಾವುದೇ ಮುಖಬೆಲೆಯ) ಮುದ್ರಿಸಬಲ್ಲವು.
ಸರಕಾರದ ಮಾಹಿತಿಯಂತೆ ರೂ.500 ಹಾಗೂ 1000ದ ನೋಟುಗಳು ರದ್ದಾಗುವ ಮೊದಲು ದೇಶದಲ್ಲಿ ಒಟ್ಟು ರೂ. 17.54 ಲಕ್ಷ ಕೋಟಿ ಅಥವಾ ರೂ.17,540 ಶತಕೋಟಿ ಚಲಾವಣೆಯಲ್ಲಿತ್ತು. ಇದರಲ್ಲಿ ಶೇ.45ರಷ್ಟು ರೂ.500ರ ನೋಟುಗಳಾಗಿದ್ದವು. ಅವುಗಳ ಒಟ್ಟು ವೌಲ್ಯ ರೂ.7.89 ಲಕ್ಷ ಕೋಟಿ ಅಥವಾ ರೂ.7,890 ಶತಕೋಟಿ ಶೇ.39ರಷ್ಟು ರೂ.1000ದ ನೋಟುಗಳು. ಅಂದರೆ ರೂ.6.84 ಲಕ್ಷ ಕೋಟಿ ಅಥವಾ ರೂ.6,840 ಶತಕೋಟಿ ಚಲಾವಣೆಯಲ್ಲಿದ್ದವು.
ಅಂದರೆ, ದೇಶದಲ್ಲಿ ರೂ.500 ಮುಖಬೆಲೆಯ 15.78 ಶತಕೋಟಿ ಹಾಗೂ ರೂ.1000 ಮುಖ ಬೆಲೆಯ 6.84 ಶತಕೋಟಿ ನೋಟುಗಳು ಚಲಾವಣೆಯಲ್ಲಿದ್ದವು. ರದ್ದುಪಡಿಸಲಾಗಿರುವ ರೂ. 1000ದ ನೋಟುಗಳ ವೌಲ್ಯಕ್ಕೆ ಸಮವಾದ ರೂ.2,000ದ ನೋಟುಗಳನ್ನು ಮುದ್ರಿಸಿದರೂ(ರೂ.6.84 ಲಕ್ಷ ಕೋಟಿ ವೌಲ್ಯ) ಅವುಗಳ ಅರ್ಧದಷ್ಟು ಅಂದರೆ 3.42 ಶತಕೋಟಿ ನೋಟುಗಳಾಗುತ್ತವೆ.
ಆದುದರಿಂದ ಕೆಲವು ಪ್ರೆಸ್‌ಗಳ ಅಧಿಕಾರಿಗಳು ಹೇಳುವಂತೆ ಸೆಪ್ಟಂಬರ್ ಆರಂಭದಲ್ಲಿ ಮುದ್ರಣ ಆರಂಭವಾಗಿದ್ದಲ್ಲಿ ಸಂಪೂರ್ಣ ಅಗತ್ಯದ ರೂ.2000ದ ನೋಟುಗಳ ಮುದ್ರಣಕ್ಕೆ 2 ತಿಂಗಳು ಹಾಗೂ ಕೆಲವು ದಿನಗಳು ಬೇಕಾಗುತ್ತವೆ. ಅಂದರೆ, ಅಗತ್ಯವಿರುವಷ್ಟು ರೂ.2 ಸಾವಿರದ ನೋಟುಗಳು ಈಗಾಗಲೇ ಮುದ್ರಣವಾಗಿವೆ.
ಇದೇ ಲೆಕ್ಕಾಚಾರದಂತೆ ನ.10ರಂದು ರೂ.500ರ ನೋಟುಗಳ ಮುದ್ರಣ ಆರಂಭವಾಗಿದ್ದರೂ ಅಗತ್ಯವಿರುವ ನೋಟುಗಳ ಮುದ್ರಣಕ್ಕೆ 5.9 ತಿಂಗಳುಗಳು ಬೇಕಾಗುತ್ತವೆ.







