ನೋಟು ರದ್ದತಿಯ ವಿರುದ್ಧ ವಿಚಾರಣೆಗೆ ತಡೆಯಾಜ್ಞೆ ಕೋರಿ ಸುಪ್ರೀಂಗೆ ಕೇಂದ್ರದ ಅರ್ಜಿ

ಹೊಸದಿಲ್ಲಿ, ನ.17: ದೊಡ್ಡ ನೋಟುಗಳ ರದ್ದತಿಯ ವಿರುದ್ಧ ಸುಪ್ರೀಂ ಕೋರ್ಟ್ ಹೊರತಾಗಿ ವಿವಿಧ ಹೈಕೋರ್ಟ್‌ಗಳು ಹಾಗೂ ಇತರ ನ್ಯಾಯಾಲಯಗಳಲ್ಲಿ ವಿಚಾರಣೆಗೆ ತಡೆ ನೀಡುವಂತೆ ಕೋರಿ ಕೇಂದ್ರ ಸರಕಾರ ಸಲ್ಲಿಸಿರುವ ಹೊಸ ಅರ್ಜಿಯ ವಿಚಾರಣೆಯನ್ನು ನಾಳೆ ನಡೆಸಲು ಸುಪ್ರೀಂಕೋರ್ಟ್ ಇಂದು ಸಮ್ಮತಿಸಿದೆ.
ಈ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನ ಹೊರತು ಇತರ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸುವುದರಿಂದ ಗೊಂದಲ ಸೃಷ್ಟಿಯಾಗಲಿದೆಯೆಂಬ ಅಟಾರ್ನಿ ಜನರಲ್ ಮುಕುಲ್ ರೊಹಟ್ಗಿಯವರ ವಾದವನ್ನು ನ್ಯಾಯಮೂರ್ತಿಗಳಾದ ಎ.ಆರ್. ದವೆ ಹಾಗೂ ಎ.ಎಂ. ಖಾನ್ವಿಲ್ಕರ್‌ರಿದ್ದ ಪೀಠವೊಂದು ಒಪ್ಪಿದೆ.
ನೋಟು ರದ್ದತಿಯ ವಿರುದ್ಧ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ನೇತೃತ್ವದ ಪೀಠವು ಕೇಂದ್ರ ಸರಕಾರದ ಅರ್ಜಿಯ ವಿಚಾರಣೆ ನಡೆಸಲಿದೆಯೆಂದು ಅದು ತಿಳಿಸಿದೆ.
ಸುಪ್ರೀಂಕೋರ್ಟ್ ನ.15ರಂದು ಸರಕಾರದ ನೋಟು ರದ್ದತಿಯ ನಿರ್ಧಾರಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು. ಆದಾಗ್ಯೂ, ಸಾರ್ವಜನಿಕರಿಗಾಗುವ ತೊಂದರೆಯನ್ನು ಕನಿಷ್ಠಗೊಳಿಸಲು ಕೈಗೊಂಡಿರುವ ಕ್ರಮವನ್ನು ತಿಳಿಸುವಂತೆ ಅದು ಸರಕಾರಕ್ಕೆ ಸೂಚಿಸಿತ್ತು.







