ಫರಂಗಿಪೇಟೆ: ಆಟೊ ಚಾಲಕನಿಗೆ ಹಲ್ಲೆ

ಬಂಟ್ವಾಳ, ನ. 17: ಬಾಡಿಗೆಗೆ ಎಂದು ಕರೆದು ಆಟೊರಿಕ್ಷಾ ಚಾಲಕನೋರ್ವನಿಗೆ ಹಲ್ಲೆ ನಡೆಸಿರುವ ಘಟನೆ ಪುದು ಗ್ರಾಮದ ಕುಂಪನಮಜಲು ಎಂಬಲ್ಲಿ ನಡೆದಿದ್ದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂಪಣಮಜಲು ನಿವಾಸಿ ಅಬೂಬಕರ್ ಎಂಬವರ ಪುತ್ರ ಸಿರಾಜ್ ಹಲ್ಲೆಗೊಳಗಾದ ಆಟೊರಿಕ್ಷಾ ಚಾಲಕ. ಇಲ್ಲಿನ ನಿವಾಸಿ ಇರ್ಫಾನ್ ಎಂಬಾತ ಹಲ್ಲೆ ನಡೆಸಿರುವ ಆರೋಪಿ. ಇಂದು ಬೆಳಗ್ಗೆ 11 ಗಂಟೆಯ ವೇಳೆಗೆ ಫರಂಗಿಪೇಟೆ ಆಟೋ ನಿಲ್ದಾಣದಲ್ಲಿದ್ದ ಸಿರಾಜ್‌ನನ್ನು ಬಾಡಿಗೆಗೆಂದು ಕುಂಪನಮಜಲಿಗೆ ಕರೆದ ಆರೋಪಿ ಇರ್ಫಾನ್ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿ ಇರ್ಫಾನ್ ಕೈಯಿಂದ ಹಲ್ಲೆ ನಡೆಸಿದ್ದಲ್ಲದೆ ರಿಕ್ಷಾದ ಗಾಜು ಪುಡಿಗೈದು ಆಟೋಗೆ ಹಾನಿಗೊಳಿಸಿದ್ದಾನೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆಟೊಚಾಲಕ ಸಿರಾಜ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಸಿರಾಜ್ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಕರಣ ದಾಖಲಿಸಿರುವ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.





