ಪುತ್ತೂರು: ಮರಳಿ ಮನೆ ಸೇರಿದ ಮಾನಸಿಕ ಅಸ್ವಸ್ಥೆ
ಸಾಮಾಜಿಕ ಕಾರ್ಯಕರ್ತೆ ಝೊಹರಾ ನಿಸಾರ್‌ರ ಪ್ರಯತ್ನ

ಪುತ್ತೂರು, ನ.17: ಉದನೆಯ ಬಸ್ ತಂಗುದಾಣದ ಬಳಿ ಮಂಗಳವಾರ ಮಧ್ಯರಾತ್ರಿಯ ವೇಳೆ ಕಾಣಿಸಿಕೊಂಡಿದ್ದ ಬೇಲೂರಿನ ಅಸ್ವಸ್ಥೆ ಮಹಿಳೆಯೊಬ್ಬರನ್ನು ಸಾರ್ವಜನಿಕರು ಗಮನಿಸಿ 108 ಆ್ಯಂಬುಲೆನ್ಸ್ ಮೂಲಕ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ವಿಚಾರವನ್ನು ಪೊಲೀಸರ ಮೂಲಕ ತಿಳಿದುಕೊಂಡ ಸಾಮಾಜಿಕ ಕಾರ್ಯಕರ್ತೆ, ಪುತ್ತೂರು ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಝೊಹರಾ ನಿಸಾರ್ ಅವರು ತನ್ನ ಸಂಬಂಧಿಕರ ಮೂಲಕ ಆಕೆಯ ಮನೆಯವರನ್ನು ಸಂಪರ್ಕಿಸಿ ಆಕೆಯನ್ನು ಮನೆಯವರಿಗೆ ಒಪ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಉದನೆಯ ಬಸ್ ತಂಗುದಾಣದ ಬಳಿ ಮಧ್ಯರಾತ್ರಿಯ ವೇಳೆ ನಿಂತುಕೊಂಡಿದ್ದ ಮಹಿಳೆಯನ್ನು ಸಾರ್ವಜಿನಿಕರು ವಿಚಾರಿಸಿದಾಗ ಆಕೆ ಯಾವುದೇ ಉತ್ತರ ನೀಡಿರಲಿಲ್ಲ. ಅಸ್ವಸ್ಥೆಯಂತೆ ಕಂಡು ಬಂದ ಮಹಿಳೆಯನ್ನು ಅಲ್ಲಿನ ಸಾರ್ವಜನಿಕರು 108 ಆ್ಯಂಬುಲೆನ್ಸ್ ಮೂಲಕ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ದಾಖಲಾದ ಮಹಿಳೆಯನ್ನು ವಿಚಾರಿಸಿದಾಗ ತನ್ನ ಊರು ಬೇಲೂರು, ಹೆಸರು ಲೋಲಾಕ್ಷಿ, ಪತಿಯ ಹೆಸರು ನಿಧಿ ಎಂದು ಹೇಳಿದ್ದರಲ್ಲದೆ ತಾನೊಂದು ತಪ್ಪುಮಾಡಿದ್ದೇನೆ ಎಂದು ಹೇಳಿ ಭಾವುಕರಾಗುತ್ತಿದ್ದರು. ಆ ದಿನ ರಾತ್ರಿಯ ವೇಳೆ ಆಸ್ಪತ್ರೆಯಿಂದಲೂ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ಹಿನ್ನಲೆಯಲ್ಲಿ ಆಸ್ಪತ್ರೆಯ ಗೇಟಿಗೆ ರಾತ್ರಿ ಬೀಗ ಹಾಕಿ ಆಕೆ ತಪ್ಪಿಸಿಕೊಳ್ಳದಂತೆ ಎಚ್ಚರವಹಿಸಲಾಗಿತ್ತು.
ಬುಧವಾರ ಪೊಲೀಸರು ಬಂದು ವಿಚಾರಿಸಿದ ವೇಳೆಯೂ ಆಕೆ ಸರಿಯಾದ ಉತ್ತರ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಬೇಲೂರಿನ ಸಂಪರ್ಕ ಹೊಂದಿರುವ ಸಾಮಾಜಿಕ ಕಾರ್ಯಕರ್ತೆ ಪುತ್ತೂರಿನ ಝೊಹರಾ ನಿಸಾರ್‌ರಿಗೆ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ರೊಹರಾ ನಿಸಾರ್ ಆಸ್ಪತ್ರೆಗೆ ಆಗಮಿಸಿ ಮಹಿಳೆಯ ಪೋಟೊ ತೆಗೆದು ವಾಟ್ಸ್‌ಆಪ್ ಮೂಲಕ ಬೇಲೂರಿನಲ್ಲಿರುವ ತನ್ನ ಸಂಬಂಧಿಕರಿಗೆ ಮತ್ತು ಪರಿಚಯಸ್ಥರಿಗೆ ಕಳುಹಿಸಿದ್ದರು. ರೊಹರಾ ಅವರ ಸಂಬಂಧಿಕರು ಹಾಗೂ ಪರಿಚಯಸ್ಥರು ಆ ಪೋಟೋವನ್ನು ಪರಿಶೀಲಿಸಿದಾಗ ಆಕೆ ಅಲ್ಲಿನ ಶಿಕ್ಷಣ ಇಲಾಖೆಯ ಸಮನ್ವಯ ಶಿಕ್ಷಣಾಧಿಕಾರಿ ಕುಮಾರ್ ಎಂಬವರ ಪತ್ನಿ ಎಂದು ತಿಳಿದು ಬಂದಿತ್ತು. ಬಳಿಕ ಅವರು ಕುಮಾರ್‌ರಿಗೆ ಮಾಹಿತಿ ನೀಡಿದ್ದರು.
ಕುಮಾರ್ ಬುಧವಾರ ಅಲ್ಲಿಂದ ಪುತ್ತೂರಿಗೆ ಬಂದು ತನ್ನ ಪತ್ನಿ ಲೋಲಾಕ್ಷಿ ಅವರನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಪೊಲೀಸ್ ಸಿಬ್ಬಂದಿ ಜಯಶ್ರೀ ಸಹಕಾರ ನೀಡಿದರು. ಲೋಲಾಕ್ಷಿ ಅವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಶಿವಮೊಗ್ಗದ ಆಸ್ಪತ್ರೆಯೊಂದರಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಮಂಗಳವಾರ ದೇವಾಲಯಕ್ಕೆ ಹೋಗಲಿದೆ ಎಂದು ಹೇಳಿದ್ದ ಅವರು ಬಳಿಕ ಅಲ್ಲಿಂದ ನಾಪತ್ತೆಯಾಗಿದ್ದರು. ಮನೆಯವರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದ ಹಂತದಲ್ಲಿಯೇ ಅವರು ಉದನೆಯಲ್ಲಿ ಪತ್ತೆಯಾಗುವುದರೊಂದಿಗೆ ರೊಹರಾ ನಿಸಾರ್‌ರ ಪ್ರಯತ್ನದ ಫಲವಾಗಿ ಬೇಗ ಮನೆ ಸೇರಿಕೊಳ್ಳುವಂತಾಗಿದೆ.







