ಎತ್ತಿನಹೊಳೆ ಯೋಜನೆ ಅಂತಿಮ ಗುರಿ ನೇತ್ರಾವತಿ ನದಿ: ಪ್ರೊ.ಮಧ್ಯಸ್ಥ

ಮಣಿಪಾಲ, ನ.17: ವಿವಾದಾತ್ಮಕ ಎತ್ತಿನಹೊಳೆ ಯೋಜನೆ ಕುರಿತಂತೆ ರಾಜಕಾರಣಿಗಳು, ‘ತಜ್ಞರು’ ಏನೇ ಹೇಳಿದರೂ ಅದರ ಅಂತಿಮ ಗುರಿ ನೇತ್ರಾವತಿ ನದಿಯಾಗಿದೆ ಎಂದು ಖ್ಯಾತ ಪರಿಸರ ಜೀವವಿಜ್ಞಾನಿ ಹಾಗೂ ನಿವೃತ್ತ ಪ್ರಾಂಶುಪಾಲ ಪ್ರೊ.ಎನ್.ಎ.ಮಧ್ಯಸ್ಥ ಹೇಳಿದ್ದಾರೆ.
ಮಣಿಪಾಲ ವಿವಿಯ ಗಾಂಧಿ ಮತ್ತು ಶಾಂತಿ ಅಧ್ಯಯನ ಕೇಂದ್ರದ ವತಿಯಿಂದ ವಿವಾದಾತ್ಮಕ ನೇತ್ರಾವತಿ ತಿರುವು ಯೋಜನೆ ಎಂದೇ ಪ್ರಖ್ಯಾತಿ ಪಡೆದ ಎತ್ತಿನಹೊಳೆ ಯೋಜನೆ ಕುರಿತು ‘ಎತ್ತಿನಹೊಳೆ ಪರಿಸರ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಎತ್ತಿನಹೊಳೆ ಯೋಜನೆಯಲ್ಲಿ 24 ಟಿಎಂಸಿ ನೀರು ಲಭ್ಯವಿರುವುದಾಗಿ ಮಾಡಿರುವ ಅಂದಾಜು ಅತ್ಯಂತ ಅವೈಜ್ಞಾನಿಕ. ಇಲ್ಲಿ ಈವರೆಗೆ ಮಾಡಿರುವ ಎಲ್ಲಾ ವೈಜ್ಞಾನಿಕ ಅಧ್ಯಯನಗಳಿಂದ ಗರಿಷ್ಠವೆಂದರೆ 9.5 ಟಿಎಂಸಿ ನೀರು ದೊರೆಯಬಹುದು. ಇದರಲ್ಲಿ ಖಂಡಿತವಾಗಿ ಒಂದು ಹನಿ ನೀರು ಕೋಲಾರ ಜಿಲ್ಲೆಯವರೆಗೆ ಹೋಗಲಾರದು. ಆದರೆ ಈ ಯೋಜನೆಯ ಗುರಿ 24 ಟಿಎಂಸಿ ನೀರು ಆಗಿರುವುದರಿಂದ ಅಂತಿಮವಾಗಿ ಈ ಯೋಜನೆ ನೇತ್ರಾವತಿ ನೀರನ್ನೇ ಗುರಿಯಾಗಿರಿಸಿಕೊಂಡಿದೆ ಎಂದು ಪ್ರೊ.ಮಧ್ಯಸ್ಥ ನುಡಿದರು.
ಎತ್ತಿನಹೊಳೆ ಯೋಜನೆಯ ಅನುಷ್ಠಾನದಿಂದ ಪರಿಸರ ಹಾಗೂ ಅತ್ಯಂತ ಸೂಕ್ಷ ಪಶ್ಚಿಮಘಟ್ಟದ ಮೇಲಾಗುವ ದುಷ್ಪರಿಣಾಮಗಳ ಘೋರ ಚಿತ್ರಣವನ್ನು ಮುಂದಿಟ್ಟ ಪ್ರೊ.ಮಧ್ಯಸ್ಥ, ಇದರಿಂದ ಎತ್ತಿನಹೊಳೆ ಪರಿಸರದಲ್ಲಾಗುವ ಆರ್ಥಿಕ ನಷ್ಟ 200 ಬಿಲಿಯನ್ ರೂ.ಗಳಿಗೂ ಅಧಿಕ ಎಂದು ಅಂದಾಜಿಸಲಾಗಿದೆ ಎಂದರು.
ಎತ್ತಿನಹೊಳೆ ಪರಿಸರದಲ್ಲಿ 1400 ತಳಿಯ ಅಪರೂಪದ ಸಸ್ಯಗಳಿವೆ. ಅಪರೂಪದ ಹಕ್ಕಿಗಳು, ಇಲ್ಲಿ ಕಾಣಲು ಸಿಗುವ ಕುಣಿಯುವ ಕಪ್ಪೆ ಸೇರಿದಂತೆ ಹತ್ತಾರು ಜಾತಿಯ ಕಪ್ಪೆಗಳು, 120ಕ್ಕೂ ಅಧಿಕ ಜಾತಿಯ ಚಿಟ್ಟೆಗಳು, ಬೇರೆಲ್ಲೂ ಕಾಣಲು ಸಿಗದ ಮೀನು ತಳಿಗಳು, ಬಸವನಹುಳುಗಳು ಈ ಯೋಜನೆಯಿಂದ ಅಳಿವಿನಿ ಅಂಚಿಗೆ ಸರಿಯುತ್ತಿವೆ. ಎತ್ತಿನಹೊಳೆ ಯೋಜನೆಯಲ್ಲಿ ಎರಡು ಹಂತಗಳಲ್ಲಿ ಎಂಟು ಅಣೆಕಟ್ಟುಗಳನ್ನು ಕಟ್ಟಲಾಗುತ್ತದೆ. ಇದರಿಂದ ನವೆಂಬರ್ ತಿಂಗಳವರೆಗೆ ನೀರು ಕುಮಾರಧಾರಾ ನದಿಗೆ ಹರಿದುಬಾರದೇ ಅದು ಸೊರಗುವುದು ಖಂಡಿತ. ಹೀಗಾಗಿ ಕುಮಾರಧಾರ ನದಿಯಲ್ಲಿ ಮಳೆಗಾಲದಲ್ಲಿ ನೀರಿರುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಪ್ರೊ.ಮಧ್ಯಸ್ಥ ವಿವರಿಸಿದರು.
ಯೋಜನೆಯಿಂದ ಪರಿಸರದ ಮೇಲಾಗುವ ಪ್ರತಿಕೂಲ ಪರಿಣಾಮಗಳ ಪಟ್ಟಿ ಮಾಡಿದ ಅವರು, ಇದರಿಂದ ಮಾನವ ಮತ್ತು ಕಾಡುಪ್ರಾಣಿಗಳ (ಆನೆ, ಹುಲಿ, ಚಿರತೆ ಸೇರಿದಂತೆ) ನಡುವೆ ಸಂಘರ್ಷ ನಡೆಯಲಿದೆ, ಈಗಿರುವ ಎತ್ತಿನಹೊಳೆ ಪ್ರದೇಶದ ಆನೆ ಕಾರಿಡಾರ್ ನಾಶವಾಗಿ, ಆನೆ ನೇರವಾಗಿ ಹಳ್ಳಿಗಳಿಗೆ ಪ್ರವೇಶಿಸುತ್ತವೆ, ಪರಿಸರದ ಜೀವಜಂತುಗಳ ಜೀವನಕ್ರಮ ಬದಲಾಗಿ ಬಹಳಷ್ಟು ಅವಸಾನಹೊಂದಲಿವೆ, ಭೂಮಿಯಿಂದಲೇ ಕಣ್ಮರೆಯಾಗಲಿವೆ. ಮಳೆಗಾಲದ ನದಿಗಳು ತುಂಬಿ ಹರಿಯುವಾಗ ಇರುವ ‘ಫ್ಲೇಶಿಂಗ್ ಪರಿಣಾಮ’ ನಾಶವಾಗುವುದು.
ಕಾಡುಗಳು ಜನರ,ವಿಶೇಷವಾಗಿ ಬೇಟೆಗಾರರ, ಕಾಡುಗಳ್ಳರ ಸಂಚಾರಕ್ಕೆ ಮುಕ್ತವಾಗಿ ಈವರೆಗೆ ರಕ್ಷಿಸಲ್ಪಟ್ಟ ಕಾಡು ಸರ್ವನಾಶವಾಗಲಿದೆ. ನದಿಗಳು ತುಂಬಿ ಹರಿಯುವುದರಿಂದ ದಾರಿಯಲ್ಲಿದ್ದ ಬಾವಿ, ಹಳ್ಳ, ಕೊಳ್ಳಗಳು ತುಂಬದೇ ನೀರಿಗೆ ಹಾಹಾಕಾರ ಆರಂಭಗೊಳ್ಳುವುದು, ಪರಿಸರದ ಸಮತೋಲನವೇ ನಾಶವಾಗಿ ಅದರ ನೇರ ಪರಿಣಾಮ ಮಾನವಜೀವಿಯ ಮೇಲಾಗುವುದು ಎಂದರು.
ಐದು ವರ್ಷಗಳ ಹಿಂದೆ ನಾವು ಈ ಯೋಜನೆಯ ದುಷ್ಪರಿಣಾಮಗಳನ್ನು ವಿವರಿಸಿ ಸರಕಾರ ಹಾಗೂ ವಿವಿಧ ಇಲಾಖೆಗಳಿಗೆ ನೂರಾರು ಮನವಿ ಪತ್ರಗಳನ್ನು ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರೊಮಧ್ಯಸ್ಥ ನುಡಿದರು.
ಕೇಂದ್ರದ ನಿರ್ದೇಶಕ ಪ್ರೊ.ವರದೇಶ ಹಿರೇಗಂಗೆ ಪ್ರೊ.ಮಧ್ಯಸ್ಥರನ್ನು ಪರಿಚಯಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಧನಶ್ರೀ ಸ್ವಾಗತಿಸಿದರು.







