ಸ್ಟ್ರೆಚರ್ ನಿರಾಕರಣೆ, ಗಂಡನನ್ನು ಎಳೆದುಕೊಂಡೇ ಆಸ್ಪತ್ರೆಯ ಮೊದಲ ಮಹಡಿಗೆ ಹೋದ ಪತ್ನಿ !

ಅನಂತಪುರ, ನ.17: ಅಸೌಖ್ಯಗೊಂಡಿದ್ದ ವ್ಯಕ್ತಿಯೋರ್ವರನ್ನು ಕರೆದೊಯ್ಯಲು ಸರಕಾರಿ ಆಸ್ಪತ್ರೆಯವರು ಸ್ಟ್ರೆಚರ್ ನಿರಾಕರಿಸಿದ ಕಾರಣ ಅನ್ಯಮಾರ್ಗವಿಲ್ಲದೆ ಆ ವ್ಯಕ್ತಿಯನ್ನು ಅವರ ಪತ್ನಿ ಆಸ್ಪತ್ರೆಯ ಮೊದಲ ಮಹಡಿಗೆ ಎಳೆದುಕೊಂಡೇ ಹೋದ ಘಟನೆ ವರದಿಯಾಗಿದೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿರುವ ಗುಂತಕಲ್ ಸರಕಾರಿ ಆಸ್ಪತ್ರೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಹೈದರಾಬಾದ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪಿ.ಶ್ರೀನಿವಾಸಾಚಾರಿ ಎಂಬವರು ಕೆಲಸ ಮುಗಿಸಿ ಮನೆಗೆ ಬಂದವರು ಹೊಟ್ಟೆ ನೋವು ಮತ್ತು ಭೇದಿಯಿಂದಾಗಿ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಪತ್ನಿ ಶ್ರೀವಾಣಿ ಸರಕಾರಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದರು.
ಆಸ್ಪತ್ರೆಗೆ ತಲುಪಿದಾಗ ರೋಗಿಯನ್ನು ಮೊದಲ ಮಹಡಿಗೆ ಕರೆದೊಯ್ಯಲು ತಿಳಿಸಲಾಯಿತು. ಆದರೆ ಸ್ಟ್ರೆಚರ್ ಅಥವಾ ಗಾಲಿಕುರ್ಚಿಯ ವ್ಯವಸ್ಥೆ ಮಾಡುವಂತೆ ಶ್ರೀವಾಣಿ ಮಾಡಿದ ಮನವಿಯನ್ನು ತಿರಸ್ಕರಿಸಲಾಯಿತು. ಬೇರೆ ದಾರಿಯಿಲ್ಲದೆ ತನ್ನ ಗಂಡನನ್ನು ನೆಲದ ಮೇಲೆ ಎಳೆದುಕೊಂಡೇ ಮೆಟ್ಟಿಲು ಹತ್ತಿ ಮೊದಲ ಮಹಡಿ ತಲುಪಿದ್ದಾರೆ.
ಆಸ್ಪತ್ರೆಗೆ ಬಂದವರು ಈ ಘಟನೆಯ ಪ್ರತ್ಯಕ್ಷದರ್ಶಿಗಳಾಗಿದ್ದರು. ಘಟನೆ ನಡೆದ ಸಂದರ್ಭ ಆಸ್ಪತ್ರೆಯಲ್ಲಿ ಐದು ಸ್ಟ್ರೆಚರ್‌ಗಳು ಲಭ್ಯವಿದ್ದವು. ಘಟನೆ ನಡೆದ ಬಳಿಕ ನನಗೆ ಮಾಹಿತಿ ದೊರಕಿದ್ದು ತನಿಖೆಗೆ ಆದೇಶ ನೀಡಲಾಗಿದೆ ಎಂದು ಆಸ್ಪತ್ರೆಯ ಪ್ರಭಾರ ಅಧಿಕಾರಿ ಮಲ್ಲಿಕಾರ್ಜುನ ರೆಡ್ಡಿ ತಿಳಿಸಿದ್ದಾರೆ.







